ವಾಡಿ (ಚಿತ್ತಾಪುರ): ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಕಟ್ಟಿದ್ದನ್ನು ವಿರೋಧಿಸಿ ರೈತನೋರ್ವ ಮಂಗಳವಾರ ಕಾಲೇಜಿಗೆ ಬೀಗ ಹಾಕಿದ ಘಟನೆ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಪರಿಣಾಮ ಕಾಲೇಜಿನ ಉಪನ್ಯಾಸಕರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ. ವಾಡಿ ನಗರದ ಸರಕಾರಿ ಐಟಿಐ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ 2010ರಲ್ಲಿ ಸರಕಾರದಿಂದ ಸುಮಾರು 3 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು ಎನ್ನಲಾಗಿದ್ದು, ರಾವೂರ ಗ್ರಾಪಂ ವ್ಯಾಪ್ತಿಯಲ್ಲಿನ 4 ಎಕರೆ ಸರಕಾರಿ ಗೈರಾಣಿ ಭೂಮಿ ಗುರುತಿಸಬೇಕಿದ್ದ ಭೂಮಿ ಸರ್ವೇಯರ್ ಗಳು ಹತ್ತಿರದ ರೈತರೊಬ್ಬರಿಗೆ ಸೇರಿದ ಬೀಳು ಬಿದ್ದ ಕೃಷಿ ಭೂಮಿ ಗುರುತಿಸಿ ಏಡವಟ್ಟು ಮಾಡಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರೂ ಅಧಿಕಾರಿಗಳು ಮಾತು ಕೇಳಲಿಲ್ಲ. ನ್ಯಾಯಾಲಯದಿಂದ ತಡೆಯಾಜ್ಞೆ ನೀಡಿದ್ದರೂ ಕೂಡ ತಹಶೀಲ್ದಾರರು ಪೊಲೀಸ್ ಭದ್ರತೆಯಲ್ಲಿ ಕಟ್ಟಡ ಕಟ್ಟಲು ಆದೇಶ ನೀಡಿದ್ದರು. ದಶಕಗಳಿಂದ ಕಾನೂನು ಹೋರಾಟ ನಡೆಸಿದ್ದರಿಂದ ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ.
ಇದನ್ನೂ ಓದಿ:ಅಜೆಕಾರ್ ಗ್ರಾಮ ಸಭೆಯಲ್ಲಿ ಮಾತಿನ ಚಕಮಿಕಿ, ಹೊಡೆದಾಟ
ಭೂಸ್ವಾಧೀನ ಪ್ರತಿಕ್ರಿಯೆ ನಡೆಸಿ ಜಮೀನುದಾರರಿಗೆ ಪರಿಹಾರ ಒದಗಿಸಬೇಕು ಎಂದು ಆದೇಶ ಹೊರಡಿಸಿದೆ. ಆದರೂ ಸಂಬಂದಿಸಿದ ಅಧಿಕಾರಿಗಳು ಭೂಸ್ವಾಧೀನಕ್ಕೆ ಮುಂದಾಗದೆ ಅನ್ಯಾಯ ಮಾಡಿದ್ದಾರೆ. ಎಷ್ಟು ವರ್ಷ ನಾನು ನ್ಯಾಯಕ್ಕಾಗಿ ಅಲೆಯಬೇಕು? ಎರಡು ತಿಂಗಳ ಗಡುವು ನೀಡಿದ ಬಳಿಕ ಬೇಸತ್ತು ಕಾಲೇಜಿಗೆ ಬೀಗ ಹಾಕಿದ್ದೇನೆ ಎಂದು ರಾವೂರ ಗ್ರಾಮದ ರೈತ ಅಂಬರೀಶ್ ಗೋಣಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕೈಗಾರಿಕಾ ಸಂಸ್ಥೆ, ಜಿಲ್ಲಾಡಳಿತ ಹಾಗೂ ರೈತನ ನಡುವಿನ ಕಾನೂನು ಹೋರಾಟದ ನಡುವೆ ನೂರಾರು ವಿದ್ಯಾರ್ಥಿಗಳ ಭವಿಷ್ಯ ಬೀದಿಗೆ ತಳ್ಳಿದಂತಾಗಿದೆ.