Advertisement

ಎರಡು ವರ್ಷದ ಮಗುವಿಗೂ ಸೋಂಕು: ಹೆಚ್ಚಿದ ಆತಂಕ

12:12 PM Apr 13, 2020 | Naveen |

ವಾಡಿ: ಪಟ್ಟಣದಲ್ಲಿ ವಾಸಿಸುವ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಎರಡು ವರ್ಷದ ಗಂಡು ಮಗುವಿಗೆ ಕೋವಿಡ್ ಸೋಂಕು ತಗುಲಿದ್ದು ಜಿಲ್ಲಾಸ್ಪತ್ರೆಯ ಸ್ಕ್ರೀನಿಂಗ್‌ ಟೆಸ್ಟ್‌ನ ಪ್ರಾಥಮಿಕ ವರದಿಯಲ್ಲಿ ದೃಢಪಟ್ಟಿದೆ.

Advertisement

ಪಿಲಕಮ್ಮ ದೇವಿ ದೇವಸ್ಥಾನದ ಹತ್ತಿರ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ, ರೈಲಿನಲ್ಲಿ ಆಟಿಕೆ ವಸ್ತು ಮಾರಾಟ ಮಾಡಿ, ಬದುಕು ಕಟ್ಟಿಕೊಂಡಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಮಗುವಿಗೆ ಈ ಸೋಂಕು ತಗುಲಿದೆ. ಈ ಮಗು ಬಿದ್ದು ಗಾಯಗೊಂಡಿತ್ತು. ತೋರಿಸಲು ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಕೋವಿಡ್ ಸೋಂಕು ತಗುಲಿರುವ ಕುರಿತು ತಿಳಿದುಬಂದಿದೆ. ರವಿವಾರ ಪಟ್ಟಣಕ್ಕೆ ಭೇಟಿ ನೀಡಿದ ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ತಾಲೂಕು ವೈದ್ಯಾಧಿಕಾರಿ ಸುರೇಶ ಮೇಕಿನ್‌, ತಹಶೀಲ್ದಾರ್‌ ಉಮಾಕಾಂತ ಹಳ್ಳೆ, ಡಿವೈಎಸ್‌ಪಿ ವೆಂಕನಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಸೋಂಕು ಪೀಡಿತರ ಮನೆಯ ಸ್ಥಳದ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಆತನ ಮನೆಗೆ ಬ್ಯಾರಿಕೇಡ್‌ ಹಚ್ಚಿ, ಪೊಲೀಸ್‌ ಭದ್ರತೆ ಒದಗಿಸಿದ್ದಾರೆ.

ಪಟ್ಟಣದ ಗಲ್ಲಿ ರಸ್ತೆಗಳಲ್ಲಿ ಸಂಚರಿಸಿದ ಎಸ್‌ಪಿ ಯಡಾ ಮಾರ್ಟಿನ್‌, ಬಸವೇಶ್ವರ ಚೌಕ್‌, ಶ್ರೀನಿವಾಸಗುಡಿ, ಶಿವಾಜಿ ಚೌಕ್‌, ಗಾಂಧಿ  ಚೌಕ್‌ ರಸ್ತೆಗಳನ್ನು ಬಂದ್‌ ಮಾಡಿ 15 ದಿನಗಳವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿ, ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಆದೇಶ ನೀಡಿದರು. ಮನೆಯಲ್ಲಿಯೇ ಉಳಿಯುವ ಐದು ವಾರ್ಡ್‌ಗಳ ಜನರಿಗೆ ನೀರು, ತರಕಾರಿ, ಹಾಲು, ಕಿರಾಣಿ ಹಾಗೂ ದಿನಸಿ ವಸ್ತುಗಳಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕು. ಬಡ ಕುಟುಂಬಗಳಿಗೆ ಉಚಿತವಾಗಿ ಆಹಾರ ಪೂರೈಸಬೇಕು ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ, ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೊಡ, ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಹಾಗೂ ಮುಖ್ಯಾಧಿಕಾರಿ ವಿಠ್ಠಲ  ಹಾದಿಮನಿ ಅವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next