Advertisement

ನಾಲ್ವರ ವರದಿ ನೆಗೆಟಿವ್‌: ನಿಟ್ಟುಸಿರು ಬಿಟ್ಟ ವಾಡಿ ಜನತೆ

11:54 AM Apr 08, 2020 | Naveen |

ವಾಡಿ: ಕೊರೊನಾ ಶಂಕಿತರೆಂದು ಗುರುತಿಸಿ ರವಿವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದ ಚಿತ್ತಾಪುರ ಪಟ್ಟಣದ ಎಸಿಸಿ ಕಾಲೋನಿಯ ಮೂವರು ಹಾಗೂ ರಾವೂರಿನ ಕಾರು ಚಾಲಕ ಸೇರಿದಂತೆ ಒಟ್ಟು ನಾಲ್ವರ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ನಿಜಾಮೋದ್ದೀನ್‌ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದ ತೆಲಂಗಾಣ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತ ವ್ಯಕ್ತಿ ನೀಡಿದ ಖಚಿತ ಮಾಹಿತಿಯಂತೆ ಆತ ವಾಡಿ ಪಟ್ಟಣಕ್ಕೆ ಬಂದು ಹೋಗಿದ್ದ ಎನ್ನುವ ಸುದ್ದಿ ಎಲ್ಲೆಡೆ ಹಬ್ಬುವ ಮೂಲಕ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಎಚ್ಚೆತ್ತ ಆರೋಗ್ಯ ಇಲಾಖೆ, ಶಂಕಿತರು ವಾಸವಿದ್ದ ಎಸಿಸಿ ಕಂಪನಿಯ ಕಾರ್ಮಿಕರ ಕಾಲೋನಿಯ ಕಟ್ಟಡಕ್ಕೆ ದಿಗ್ಬಂಧನ ಹೇರುವ ಮೂಲಕ ಶಂಕಿತರ ಗಂಟಲು ದ್ರವ ಪರೀಕ್ಷೆಗೆ ಮುಂದಾಗಿತ್ತು. ಸೋಮವಾರ ಸಂಜೆ ಕೋವಿಡ್‌-19 ಕೊರೊನಾ ವೈರಸ್‌ ಪರೀಕ್ಷೆಗೊಳಗಾದ ನಾಲ್ವರೂ ಶಂಕಿತರ ಗಂಟಲು ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿದೆ ಎಂದು ಕಲಬುರಗಿ ನಗರದ ಕಾರ್ಮಿಕ ರಾಜ್ಯ ವಿಮಾ ನಿಗಮದ ಚಿಕಿತ್ಸಾ ಮಹಾವಿದ್ಯಾಲಯ-ಆಸ್ಪತ್ರೆ ಸ್ಪಷ್ಟಪಡಿಸಿದೆ.

ಕೊರೊನಾ ಶಂಕಿತರನ್ನು ಸೋಮವಾರ ಸಂಜೆ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಿಂದ ಬಿಡುಗಡೆ ಮಾಡಲಾಗಿದ್ದು, ಮನೆಗೆ ಮರಳಿದ್ದಾರೆ. 14 ದಿನಗಳ ವರೆಗೂ ಗಹಬಂಧನದಲ್ಲಿದ್ದು ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಸೂಚಿಸಲಾಗಿದೆ. ಸದ್ಯ ಈ ಕುಟುಂಬ ವಾಸಿಸುವ ಎಸಿಸಿಯ ಟಿಆರ್‌ಟಿ ಕ್ವಾಟರ್ಸ್‌ಗೆ ದಿಗ್ಬಂಧನ ಹೇರಲಾಗಿದ್ದು, ಇವರೊಟ್ಟಿಗೆ ಕಟ್ಟಡದಲ್ಲಿ ವಾಸವಿರುವ 12
ಕುಟುಂಬಗಳೂ ಮನೆಯಿಂದ ಹೊರ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಒಟ್ಟಾರೆ ತೆಲಂಗಾಣ ಮೂಲದ ನಿಜಾಮೋದ್ದೀನ್‌ ಸಭೆಯ ಪ್ರೇಕ್ಷಕ, ಕೊರೊನಾ ಸೋಂಕಿತನ ಹೆಜ್ಜೆ ಗುರುತುಗಳು ಪಟ್ಟಣದಲ್ಲಿ ಮೂಡಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next