ವಾಡಿ (ಚಿತ್ತಾಪುರ): ಮಹಾಮಾರಿ ಕೊರೊನಾ ಸೋಂಕಿನಿಂದ ಇಬ್ಬರು ಸದಸ್ಯರು ಮೃತಪಟ್ಟ ಹಿನ್ನೆಲೆಯಲ್ಲಿ ನಡೆದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪುರಸಭೆಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಾಗಿದೆ. ಕಾಂಗ್ರೆಸ್ ಹಿಡಿತದಲ್ಲಿದ್ದ ವಾರ್ಡ್23 ಇಂದ್ರಾನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಂಬರೀಶ್ ತಿಮ್ಮಯ್ಯ ಕುರುಕುಂಟಾ ಒಟ್ಟು 521 ಮತಗಳನ್ನು ಪಡೆಯುವ ಮೂಲಕ 124 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ನ ಪರಶುರಾಮ ಹಣಮಂತ ಕಟ್ಟಿಮನಿ 397 ಮತಗಳನ್ನು ಪಡೆದು ಸೋಲಿನ ರುಚಿ ಅನುಭವಿಸಿದ್ದಾರೆ.
ಇತ್ತ ವಾರ್ಡ್ 4ರ ರೆಸ್ಟ್ ಕ್ಯಾಂಪ್ ತಾಂಡಾದಲ್ಲಿ ಬಿಜೆಪಿ ಅಭ್ಯರ್ಥಿ ರವಿ ಮಾನುಸಿಂಗ್ ನಾಯಕ ಒಟ್ಟು 560 ಮತಗಳನ್ನು ಪಡೆಯುವ ಮೂಲಕ 187 ಮತಗಳ ಅಂತರದಿಂದ ವಿಜಯದ ನಗೆಬೀರಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ನ ಅಶೋಕ ಚಂದು ಪವಾರ 373 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಚಿತ್ತಾಪುರ ತಹಶೀಲ್ದಾರ ಕಚೇರಿಯಲ್ಲಿ ಮತ ಏಣಿಕೆ ಶುರುವಾಗಿ ಕೇವಲ ಎರಡೇ ತಾಸಿನಲ್ಲಿ ಎರಡು ವಾರ್ಡ್ ಗಳ ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನಮ್ಮ ಸಿಬ್ಬಂದಿಗಳು ಮತ ಏಣಿಕೆ ಕಾರ್ಯ ಶಾಂತಿಯುತವಾಗಿ ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀಧರ ಸಾರವಾಡ ಹಾಗೂ ತಹಶೀಲ್ದಾರ ಉಮಾಕಾಂತ ಹಳ್ಳೆ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ :ಮುಂದಿನ ಸಿಎಂ ಎಂದು ಟವಲ್ ಹಾಕಿದ ಕಾಂಗ್ರೆಸ್ ನವರು ತಮ್ಮ ಟವಲ್ ತೆಗೆಯಬೇಕಿದೆ: ನಳಿನ್ ಕಟೀಲ್
ನಂತರ ಗುಲಾಲು ಎರಚಿ ಸಂಭ್ರಾಮಾಚರಿಸಿದ ಕಮಲ ಕಾರ್ಯಕರ್ತರು, ವಿಜಯದ ಸಂಕೇತ ಪ್ರದರ್ಶಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ವಾಡಿ ಶಕ್ತಿಕೇಂದ್ರದ ಅಧ್ಯಕ್ಷ ಶಿವರಾಮ ಪವಾರ, ಪ್ರಧಾನ ಕಾರ್ಯದರ್ಶಿ ರಾಹುಲ ಸಿಂಧಗಿ, ಮುಖಂಡರಾದ ವಿಠ್ಠಲ ನಾಯಕ, ಅರವಿಂದ ಚವ್ಹಾಣ ಸೇರಿದಂತೆ ನೂರಾರು ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದರು.