ವಡಗೇರಾ: ಕೊರೋನಾ ವೈರಸ್ ತಡೆಗೆ ಏ.14ರ ವರೆಗೂ ಲಾಕ್‌ಡೌನ್ ಘೋಷಿಸಲಾಗಿದ್ದು, ಈ ಹಿಂದೆಯೇ ಕಟಾವು ಮಾಡಿಟ್ಟ ಹತ್ತಿ ಬೆಳೆ ಸಾಗಿಸಲಾಗದೇ ಕೊರೊನಾ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ವಡಗೇರಾ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೈತರು ಹತ್ತಿ ಬೆಲೆ ಕುಸಿತದ ಪರಿಣಾಮ ಸಂಗ್ರಹಿಸಿಟ್ಟಿದ್ದಾರೆ. ಆದರೆ ಇದೀಗ ಲಾಕ್‌ಡೌನ್ ಆದೇಶವೇ ರೈತರಿಗೆ ತುಂಬ ತೊಂದರೆಯನ್ನುಂಟು ಮಾಡಿದೆ. ಪ್ರತಿ ಎಕರೆಗೆ 35 ರಿಂದ 40 ಸಾವಿರ ಖರ್ಚು ಮಾಡಿ ಹತ್ತಿ ಬೆಳೆಯಲಾಗಿದ್ದು, ಒಂದೆಡೆ ರೈತರು ಕೊರೊನಾ ಹೊಡೆತಕ್ಕೆ ನಲುಗಿದ್ದರೆ ಇನ್ನೊಂದೆಡೆ ಕಳೆದ ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆ ರೈತರ ಆಸೆಗೆ ತಣ್ಣೀರೆರಚಿದೆ. ಹೀಗಾಗಿ ಮಳೆಯಿಂದ ಹತ್ತಿ ಹಾಳಾಗುವ ಭಯದಲ್ಲಿ ರೈತರಿದ್ದಾರೆ.
ಉತ್ತಮ ಬೆಲೆ ಸಿಗುತ್ತದೆನ್ನುವ ನಿರೀಕ್ಷೆಯಲ್ಲಿ ಹತ್ತಿ ಬೆಳೆ ಸಂಗ್ರಹಿಸಿಟ್ಟ ರೈತರು ಮಾರಾಟ ಮಾಡುಲಿಕ್ಕಾಗದೇ ಇತ್ತ ಮನೆಯಲ್ಲಿ ಇಟ್ಟುಕೊಳ್ಳಲಾಗದೇ ಸಾಲದ ಸುಳಿಗೆ ಸಿಲುಕಿದ್ದಾರೆ.
ಪ್ರವಾಹದ ಹಿನ್ನೀರಿನಿಂದ ಐದು ಎಕರೆ ಜಮೀನು ಜಲಾವೃತಗೊಂಡಿತ್ತು. ಆದರೆ ಬೇರೆ ಮೂರು ಎಕರೆ ಹೊಲದಲ್ಲಿ ಹತ್ತಿ ಬೆಳೆದಿದ್ದೆ. ಬೆಳದ ಹತ್ತಿಯನ್ನು ಮಾರಿ ಕೈಗಡ ಸಾಲ, ಬ್ಯಾಂಕ್ ಸಾಲ ಕಟ್ಟಿ ಸಮಸ್ಯೆ ಬಗೆಹರಿಸಿಕೊಳ್ಳುವ ಯೋಚನೆ ಇತ್ತು. ಇದೀಗ ಎಲ್ಲ ಬುಡಮೇಲಾಗಿದೆ.
ಮಂಜು ಕಾಮಣ್ಣೋರ್,
ರೈತ, ಹಯ್ನಾಳ ಬಿ