Advertisement

ನಾಲ್ಕು ದಶಕದ ಮನವಿಗೆ ಸ್ಪಂದನೆ

04:16 PM Feb 17, 2020 | Naveen |

ವಾಡಿ: ಸಣ್ಣ ಗಲ್ಲಿಯೊಂದರಲ್ಲಿ ಸಿಸಿ ಚರಂಡಿ ನಿರ್ಮಿಸಬೇಕು ಎಂದು ಒತ್ತಾಯಿಸಿ ಒಂದಲ್ಲ ಎರಡಲ್ಲ ಬರೋಬ್ಬರಿ 40 ವರ್ಷಗಳಿಂದ ನಿರಂತರವಾಗಿ ಸಲ್ಲಿಸಲಾಗುತ್ತಿರುವ ಮನವಿ ಪತ್ರಗಳಿಗೆ ಕೊನೆಗೂ ಪುರಸಭೆ ಅಧಿಕಾರಿಗಳು ಸ್ಪಂದಿಸಿದ್ದು, ಚರ್ಚ್‌ ಬಡಾವಣೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್‌ 12ರಲ್ಲಿನ ಕ್ಯಾಥೋಲಿಕ್‌ ಚರ್ಚ್‌ ಸುತ್ತಲೂ ಬಚ್ಚಲು ನೀರು ಸುತ್ತುವರಿದು ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿತ್ತು. ಚರ್ಚ್‌ ಆವರಣದ ವರೆಗೂ ಹರಿಯುತ್ತಿದ್ದ ಮಲ ಮೂತ್ರಗಳ ಚರಂಡಿ ನೀರು, ಪ್ರತಿ ರವಿವಾರ ಪ್ರಾರ್ಥನೆಗೆ ಬರುವ ಕ್ರೆ„ಸ್ತರಿಗೆ ಕಿರಿಕಿರಿ ಆಗಿತ್ತು. ಚರ್ಚ್‌ ಸುತ್ತಲಿನ ಬಡಾವಣೆ ಜನರಿಗಾಗಿ ಚರಂಡಿ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುವ ಕಾರಣಕ್ಕೆ ಸರಕಾರಿ ಕಚೇರಿಗಳ ಭೇಟಿ ಆರಂಭಿಸಿದ ಕ್ಯಾಥೋಲಿಕ್‌ ಚರ್ಚ್‌ನ ಅಂದಿನ ಫಾದರ್‌ 1978ರಲ್ಲಿ ಸ್ಥಳೀಯ ಗ್ರಾ.ಪಂಗೆ ಮನವಿ ಪತ್ರ ಸಲ್ಲಿಸಿದ್ದರು. ಅಂದಿನಿಂದ ಪ್ರತಿ ವರ್ಷ ಸುಮಾರು 40 ವರ್ಷಗಳ ವರೆಗೆ ನಿರಂತರವಾಗಿ ಮನವಿ ಪತ್ರಗಳನ್ನು ಸಲ್ಲಿಸುತ್ತಾ ಬಂದಿರುವ ಕುರಿತು ಚರ್ಚ್‌ನಲ್ಲಿ ದಾಖಲೆಗಳಿವೆ. ಈ ವೇಳೆ ಕೇವಲ ಭರವಸೆ ಮಾತ್ರ ನೀಡಲಾಗುತ್ತಿತ್ತು.

ವಾಡಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಗ್ರಾ.ಪಂ ಆಡಳಿತಕ್ಕೆ, ಮಂಡಲ ಪಂಚಾಯತಿ ಆಡಳಿತಕ್ಕೆ ಹಾಗೂ 20 ವರ್ಷಗಳ ಹಿಂದೆ ಜಾರಿಗೆ ಬಂದ ಪುರಸಭೆ ಆಡಳಿತಕ್ಕೂ ಸಣ್ಣ ಚರಂಡಿ ಬೇಡಿಕೆಗಾಗಿ ಸಲ್ಲಿಸಲಾದ ಮನವಿಪತ್ರಗಳ ರಾಶಿಯೇ ನಮ್ಮ ಹತ್ತಿರವಿದೆ. ಆಡಳಿತ ಎಷ್ಟೊಂದು ಜಡಗಟ್ಟಿದೆ ಎಂಬುದನ್ನು ನೆನಪಿಸಿಕೊಂಡರೆ ಬೇಸರವಾಗುತ್ತದೆ. ನಲವತ್ತು ವರ್ಷಗಳ ನಿರಂತರ ಹೋರಾಟದ ನಂತರವಾದರೂ ನಮ್ಮ ಚರ್ಚ್‌ ಬಡಾವಣೆಗೆ ಚರಂಡಿ ಸೌಲಭ್ಯ ಒದಗಿತಲ್ಲ ಎಂಬುದಷ್ಟೇ ಸಮಾಧಾನದ ಸಂಗತಿ ಎಂದು ಕ್ಯಾಥೋಲಿಕ್‌ ಚರ್ಚ್‌ನ ಹಾಲಿ ಪಾಧರ್‌ ರೆ.ವಿಲ್ಬರ್ಟ್‌ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ವಿಠ್ಠಲ  ಹಾದಿಮನಿ, ವಾರ್ಡ್‌ ಸದಸ್ಯೆ ಝರೀನಾ ಬೇಗಂ ಅವರ ಪ್ರಯತ್ನದ ಫಲವಾಗಿ ಅನುದಾನ ಬಿಡುಗಡೆಯಾಗಿದ್ದು, ಚರ್ಚ್‌ ಹಿಂಬದಿಯ ಗಲ್ಲಿಯಲ್ಲಿ ಸಿಸಿ ಚರಂಡಿ ಕಾಮಗಾರಿಗೆ ಚಾಲನೆ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next