ವಡಗೇರಾ: ನೂತನ ತಾಲೂಕು ಘೋಷಣೆಯಾಗಿಮೂರು ವರ್ಷವಾದರೂ ವಡಗೇರಾ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸದಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಗುರುವಾರ ಕರೆ ನೀಡಿದ್ದ ವಡಗೇರಾ ಬಂದ್ ಯಶಸ್ವಿಯಾಗಿದೆ.
ವಡಗೇರಾ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಆಗ್ರಹಿಸಿ ಪಟ್ಟಣ ಪಂಚಾಯಿತಿ ಹೋರಾಟ ಸಮಿತಿ, ಕನ್ನಡ ಪರ ಸಂಘಟನೆಗಳು, ದಲಿತ ಸಂಘಗಳು, ರೈತ ಸಂಘಟನೆಗಳು ವಡಗೇರಾ ಬಂದ್‌ಗೆ ಕರೆ ನೀಡಿದ್ದವು. ಮುಖಂಡ ಬಾಷುಮಿಯಾ ನಾಯಕ್ ಮಾತನಾಡಿ, ವಡಗೇರಾ ತಾಲೂಕು ಕೇಂದ್ರ ರಚನೆಯಾಗಿ ಮೂರು ವರ್ಷವಾದರೂ ವಡಗೇರಾ ಗ್ರಾಪಂ ವ್ಯಾಪ್ತಿಯಲ್ಲೇ ಮುಂದುವರಿದಿದೆ. ವಡಗೇರಾ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು, ತಾಲೂಕು ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಬೇಡಿಕೆ ಈಡೇರುತ್ತದೆ ಎಂದರು.
ಮುಖಂಡ ಭೀಮಣ್ಣ ಮೇಟಿ ಮಾತನಾಡಿ, ವಡಗೇರಾ ತಾಲೂಕು ರಚನೆಯಾದರೂ ಮೂಲ ಸೌಲಭ್ಯಗಳಿಲ್ಲ. ಉಪ ನೋಂದಣಾಧಿಕಾರಿ ಕಚೇರಿ, ಎಸ್ ಟಿಒ ಕಚೇರಿ, ವಿವಿಧ ಇಲಾಖೆ ಕಚೇರಿಗಳನ್ನು ಪಟ್ಟಣದಲ್ಲಿ ಆರಂಭಿಸಬೇಕೆಂದು ಆಗ್ರಹಿಸಿದರು. ತಾಲೂಕು ಅಭಿವೃದ್ಧಿಯಾದರೆ ವ್ಯಾಪಾರ ವಹಿವಾಟು ಹೆಚ್ಚುತ್ತದೆ. ನಿರುದ್ಯೋಗ ಸಮಸ್ಯೆ ನಿವಾರಣೆ ಆಗಿ ಸುತ್ತಮುತ್ತಲಿನ ಗ್ರಾಮಗಳ ಜನರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದರು.
ಮಾಣಿಕರಡ್ಡಿ ಕುರುಕುಂದಿ ಮಾತನಾಡಿ, ವಡಗೇರಾಕ್ಕೆ ಪಟ್ಟಣ ಪಂಚಾಯಿತಿ ಭಾಗ್ಯ ಬಂದಿಲ್ಲ. ಪಟ್ಟಣದಲ್ಲಿ ಸುಮಾರು 1500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ವಡಗೇರಾ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಬಿಜೆಪಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಅನೇಕ ಸಂಘಟನೆಗಳು ಹೋರಾಟ ಮಾಡುತ್ತಾ ಬಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು ಫಕೀರ್ ಅಹ್ಮದ್ ಮರಡಿ ಮಾತನಾಡಿದರು.
ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರಕ್ಕೆ ಈಗಾಗಲೇ ಪಟ್ಟಣ ಪಂಚಾಯಿತಿ ರಚನೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ನಿಮ್ಮ ಮನವಿಯೊಂದಿಗೆ ಸಹ ವಿವರಗಳನ್ನು ಮತ್ತೂಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು. ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಕಾಶಿನಾಥ ನಾಟೇಕಾರ್, ಸಂತೋಷ ನಿರ್ಮಲಕರ್, ಗೋಪಾಲ ನಾಯಕ, ರೈತ ಸಂಘಟನೆ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಬಾಗೂರು, ಬೀರೇಶ ಚಿರತೆನೋರ್, ಶರಣರಡ್ಡಿ ಹತ್ತಿಗೂಡುರು, ಶರಣು ಇಟಗಿ, ಬಸವರಾಜ ಸೊನ್ನದ, ಬಸವರಾಜ ನೀಲಹಳ್ಳಿ, ಫಕ್ಕೀರ್ ಅಹ್ಮದ್,ಸಂಗುಗೌಡ ಮಾಲಿಪಾಟೀಲ, ಗುರುನಾಥ ನಾಟೆಕಾರ್, ಅಬ್ದುಲ್ ಚಿಗಾನೂರು, ಮಲ್ಲಣ್ಣ ನೀಲಹಳ್ಳಿ, ಶಿವರಾಜ ಬಾಗೂರು, ಬಸಣ್ಣಗೌಡ ಜಡಿ, ಭೀಮಣ್ಣ ಬೂದಿನಾಳ, ದೇವು ಜಡಿ ಮತ್ತಿತರರು ಇದ್ದರು.