Advertisement

“ವಾ ನಾರ್ಕೋ” ರಾಜ್ಯದೊಳಗೊಂದು ನೋಟ: ಮಾದಕ ದ್ರವ್ಯದಿಂದಲೇ ನಡೆಯುವ ದೇಶಗಳು!

04:59 PM Feb 13, 2024 | Team Udayavani |

ಬಹಳಷ್ಟು ಡ್ರಗ್ (ಮಾದಕ ದ್ರವ್ಯ) ಕಾರ್ಟೆಲ್‌ಗಳು ಬಹುತೇಕ ಒಂದೇ ರೀತಿಯ ಆರಂಭವನ್ನು ಹೊಂದಿರುತ್ತವೆ. ಬಡತನದಿಂದ ಬಾಧಿತರಾದ, ಜನ ಸಮುದಾಯದಿಂದ ದೂರವಿರುವ ರೈತರು ಅತ್ಯಂತ ಕಡಿಮೆ ಗುಣಮಟ್ಟದ ಮಣ್ಣಿನಲ್ಲೂ ಹುಲುಸಾಗಿ ಬೆಳೆಯುವಂತಹ ಅಕ್ರಮ ಬೆಳೆಗಳಾದ ಕೋಕಾ ಸಸ್ಯಗಳು, ಓಪಿಯಂ ಪಾಪಿಗಳನ್ನು ಬೆಳೆಯತೊಡಗುತ್ತಾರೆ. ಈ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದ ಹಾಗೇ ಅಲ್ಲಿಗೆ ಸ್ಥಳೀಯ ಗೂಂಡಾಗಳು ಪ್ರವೇಶಿಸುತ್ತಾರೆ. ಅದಾದ ಬಳಿಕ, ಇಂತಹ ಮಾದಕ ದ್ರವ್ಯಗಳನ್ನು ಸುರಕ್ಷಿತವಾಗಿ ಶ್ರೀಮಂತ ರಾಷ್ಟ್ರಗಳಿಗೆ ಕಳ್ಳಸಾಗಣೆ ನಡೆಸುವ ಸಲುವಾಗಿ ಹೊಸ ಸಾಗಾಣಿಕಾ ಜಾಲಗಳು ಆರಂಭಗೊಳ್ಳುತ್ತವೆ. ಇದರಿಂದ ಬರುವ ಆದಾಯ ಹೆಚ್ಚಾಗುತ್ತಿದ್ದ ಹಾಗೇ, ಈ ಮಾದಕ ದ್ರವ್ಯ ಕಾರ್ಟೆಲ್‌ಗಳಿಗೆ ತಮ್ಮ ವಿರೋಧಿಗಳಿಂದ ಸ್ವಯಂ ರಕ್ಷಣೆ ನಡೆಸಿಕೊಳ್ಳುವ ಅನಿವಾರ್ಯತೆಯೂ ಹೆಚ್ಚಾಗುತ್ತದೆ. ತಮ್ಮ ಕಾರ್ಯಾಚರಣೆಗಳು ಕಾನೂನಿನ ಕಣ್ಣಿಗೆ ಬೀಳದೆ ಮುಂದುವರಿಯುವ ಸಲುವಾಗಿ, ಅವರು ಅಧಿಕಾರಿಗಳಿಗೆ ಲಂಚ ನೀಡುವ, ಅವರನ್ನು ಬೆದರಿಸುವ ಕೆಲಸಕ್ಕೆ ಇಳಿಯುತ್ತವೆ.

Advertisement

ಈ ಪರಿಸ್ಥಿತಿ ಅಫ್ಘಾನಿಸ್ತಾನದಿಂದ ಮೆಕ್ಸಿಕೋ ತನಕ ಕಂಡುಬಂದಿದೆಯಾದರೂ, ಜಗತ್ತಿನಲ್ಲಿ ಕೇವಲ ಒಂದು ಪ್ರದೇಶ ಮಾತ್ರ ಸಂಪೂರ್ಣ ನಾರ್ಕೋ ಸ್ಟೇಟ್ ಆಗಿ ರೂಪುಗೊಂಡಿದೆ. ಈ ಪ್ರದೇಶ, ಮಯನ್ಮಾರ್‌ನ ಒಂದು ಪ್ರದೇಶವಾಗಿದ್ದು, ಚೀನಾದ ಗಡಿಗೆ ಸನಿಹದಲ್ಲಿರುವ ವಾ ಸ್ಟೇಟ್ ಆಗಿದೆ. ವಾ ಸ್ಟೇಟ್ ಒಂದು ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿ ವಾ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಇವರ ಜನಸಂಖ್ಯೆ ಅಂದಾಜು 10 ಲಕ್ಷ ಇರಬಹುದು ಎನ್ನಲಾಗಿದೆ. ವಾ ಸ್ಟೇಟ್ ಬಹುತೇಕ ನೆದರ್‌ಲ್ಯಾಂಡ್ಸ್ ದೇಶದಷ್ಟು ವಿಶಾಲ ಪ್ರದೇಶವನ್ನು ಹೊಂದಿದೆ. 1989ರಲ್ಲಿ ವಾ ಸ್ಟೇಟ್ ಮಯನ್ಮಾರ್‌ನಿಂದ ವಾಸ್ತವಿಕ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ವಾ ಸ್ಟೇಟ್ ಪ್ರಸ್ತುತ ಯುನೈಟೆಡ್ ವಾ ಸ್ಟೇಟ್ ಆರ್ಮಿ (ಯುಡಬ್ಲ್ಯುಎಸ್‌ಎ) ಅಡಿಯಲ್ಲಿ, ಏಕ ಪಕ್ಷ ಸಮಾಜವಾದಿ ಆಡಳಿತವನ್ನು ಹೊಂದಿದೆ. ಆದರೆ ಇದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿಲ್ಲ.

1980ರ ದಶಕದ ಕೊನೆಯ ಭಾಗದಿಂದ, ಯುಡಬ್ಲ್ಯುಎಸ್ಎ ಆಗ್ನೇಯ ಏಷ್ಯಾದಲ್ಲಿ ಮೆಥ್ (ಮೆಥಾಂಫೆಟಮೈನ್) ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಪೂರ್ವ ಮತ್ತು ಆಗ್ನೇಯ ಏಷ್ಯಾದ ಮಾದಕ ದ್ರವ್ಯದ ಮಾರುಕಟ್ಟೆ ವಾರ್ಷಿಕವಾಗಿ 80 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಆರಂಭದಲ್ಲಿ, ಅವರು ಓಪಿಯಂ ಅನ್ನು ಬೆಳೆಯಲು ಆರಂಭಿಸಿದ್ದರು. ಬಳಿಕ, ಅವರು ಹೆರಾಯಿನ್ ಉತ್ಪಾದನೆಗೆ ತೊಡಗಿದರು. ಈಗ ಅವರು ಜಗತ್ತಿನಲ್ಲೇ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಮೆಥಾಂಫೆಟಮೈನ್ ಅನ್ನು ಉತ್ಪಾದಿಸುತ್ತಾರೆ. ಇದರಿಂದ ಬರುವ ಲಾಭದಲ್ಲಿ ವಾ ಸ್ಟೇಟ್ ಸ್ವೀಡನ್ನಿನ ಸೇನೆಗಿಂತಲೂ ದೊಡ್ಡದಾದ, ಅತ್ಯಾಧುನಿಕ ಆಯುಧಗಳನ್ನು ಹೊಂದಿರುವ ಸೈನ್ಯವನ್ನು ಹೊಂದಲು ಸಾಧ್ಯವಾಗಿದೆ.

ಮೆಥ್ ವ್ಯಾಪಾರ ಎನ್ನುವುದು ಅಕ್ರಮವಾಗಿ ಮೆಥಾಂಫೆಟಮೈನ್ ಅನ್ನು ಉತ್ಪಾದಿಸಿ, ಮಾರಾಟ ಮಾಡುವುದಾಗಿದೆ. ಮೆಥಾಂಫೆಟಮೈನ್ ಎನ್ನುವುದು ಅತ್ಯಂತ ವ್ಯಸನಕಾರಿಯಾದ, ಪ್ರಚೋದಕ ಮಾದಕ ದ್ರವ್ಯವಾಗಿದೆ. ಈ ವ್ಯಾಪಾರದಲ್ಲಿ ಮಾದಕ ವಸ್ತುವಿನ ಉತ್ಪಾದಕರು, ಸಾಗಾಣಿಕಾದಾರರು, ಮತ್ತು ಜಗತ್ತಿನಾದ್ಯಂತ ಮಾರಾಟ ಮಾಡುವವರು ಸೇರಿದ್ದಾರೆ. ಈ ವ್ಯವಹಾರ ಕಾನೂನಿಗೆ ವಿರುದ್ಧವಾಗಿದ್ದು, ಅಪರಾಧಿ ಗುಂಪುಗಳಿಗೆ ನೇರವಾಗಿ ಸಂಪರ್ಕ ಹೊಂದಿರುತ್ತದೆ. ಜಗತ್ತಿನಾದ್ಯಂತ ಆರೋಗ್ಯ ಸಮಸ್ಯೆ ಮತ್ತು ಹಿಂಸಾಚಾರಗಳಿಗೆ ಕಾರಣವಾಗುವ ಮೆಥಾಂಫೆಟಮೈನ್ ಒಂದು ಜಾಗತಿಕ ಸಮಸ್ಯೆಯಾಗಿ ರೂಪುಗೊಂಡಿದೆ.

‘ನಾರ್ಕೋಟೋಪಿಯಾ’ ಕೃತಿಯಲ್ಲಿ ಲೇಖಕರಾದ ಪ್ಯಾಟ್ರಿಕ್ ವಿನ್ನ್ ಅವರು ಹೇಗೆ ಐತಿಹಾಸಿಕವಾಗಿ ಹೈಟಿ ಸಕ್ಕರೆ ಉತ್ಪಾದನೆಯ ಮೇಲೆ, ಸೌದಿ ಅರೇಬಿಯಾ ತೈಲ ಸಂಪತ್ತಿನ ಮೇಲೆ ಅವಲಂಬಿತವಾಗಿದೆಯೋ, ಹಾಗೇ ವಾ ಸ್ಟೇಟ್‌ನ ಆರ್ಥಿಕತೆ ಮತ್ತು ಮೂಲಭೂತ ನಿರ್ಮಾಣ ಅತ್ಯಂತ ಆಳವಾಗಿ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ಉತ್ಪಾದನೆ ಮತ್ತು ಸಾಗಾಣಿಕೆಯ ಮೇಲೆ ಆಧಾರಿತವಾಗಿದೆ ಎಂದು ವಿವರಿಸಿದ್ದಾರೆ. ಹೈಟಿ ಕೆರಿಬಿಯನ್ ಸಮುದ್ರದ ಹಿಸ್ಪಾನಿಯೋಲ ದ್ವೀಪದ ಒಂದು ರಾಷ್ಟ್ರವಾಗಿದ್ದು, ಡೊಮಿನಿಕನ್ ರಿಪಬ್ಲಿಕ್ ಜೊತೆ ದ್ವೀಪವನ್ನು ಹಂಚಿಕೊಂಡಿದೆ.

Advertisement

ಯುಡಬ್ಲ್ಯುಎಸ್ಎ ಕೇವಲ ಕಾಡಿನಲ್ಲಿ ಕಾರ್ಯಾಚರಿಸುವ ಒಂದು ಮಾಫಿಯಾ ಅಲ್ಲ. ಇದು ಒಂದು ಶಾಸನಬದ್ಧ ರಾಷ್ಟ್ರವನ್ನೇ ಪರಿಣಾಮಕಾರಿಯಾಗಿ ಆಳುತ್ತಿದೆ. ಈ ಸ್ವಯಂ ಘೋಷಿತ ಜನಾಂಗೀಯ ಸ್ವಾಯತ್ತ ರಾಷ್ಟ್ರ ಜನರ ಮೇಲೆ ತೆರಿಗೆ ವಿಧಿಸುತ್ತದೆ, ತನ್ನದೇ ಆದ ಆಸ್ಪತ್ರೆಗಳು, ಶಾಲೆಗಳು ಮತ್ತು ವಿದ್ಯುತ್ ಜಾಲವನ್ನು ಕಾರ್ಯಾಚರಿಸುತ್ತದೆ. ಅದಲ್ಲದೆ ವಾ ಸ್ಟೇಟ್‌ನ ರಸ್ತೆಗಳಂತೂ ಬಹುಪಾಲು ಮಯನ್ಮಾರ್‌ನ ರಸ್ತೆಗಳಿಗಿಂತ ಉತ್ತಮ ಸ್ಥಿತಿಯಲ್ಲಿವೆ!

ವಾ ಸ್ಟೇಟ್‌ನ ಪಾಲಿಟ್ ಬ್ಯೂರೋ ಸದಸ್ಯರು (ಪೊಲಿಟಿಕಲ್ ಬ್ಯೂರೋದ ಮುಖ್ಯ ವ್ಯಕ್ತಿಗಳು) ಚೀನಾ ಸರ್ಕಾರದ ಜೊತೆ ಆತ್ಮೀಯ ಸಂಬಂಧ ಹೊಂದಿದ್ದು, ಅವರನ್ನು ಪ್ರತಿನಿಧಿಸುವ ಒಂದು ಅನಧಿಕೃತ ರಾಯಭಾರ ಕಚೇರಿ ಮಯನ್ಮಾರ್‌ನಲ್ಲಿ ಕಾರ್ಯಾಚರಿಸುತ್ತಿದೆ. ವಾ ಸ್ಟೇಟ್ ಜನರು ತಮ್ಮದೇ ಆದ ರಾಷ್ಟ್ರಗೀತೆಯನ್ನು ಹೊಂದಿದ್ದು, ತಮ್ಮದೇ ಪ್ರತ್ಯೇಕ ರಾಷ್ಟ್ರ ಧ್ವಜ ಹೊಂದಿದ್ದಾರೆ. ಅವರು ಆ ಮೂಲಕ ತಾವು ಮಯನ್ಮಾರ್‌ಗಿಂತ ವಿಭಿನ್ನವಾಗಿದ್ದೇವೆ ಎನ್ನುವುದನ್ನು ಪ್ರದರ್ಶಿಸುತ್ತಾರೆ.

ಹಿರಿಯ ಪತ್ರಕರ್ತರೂ ಆದ ವಿನ್ನ್ ಅವರಿಗೆ ಏಷ್ಯಾದಲ್ಲಿ ನಿರಂತರವಾಗಿ ಬದಲಾಗುವ ಗಡಿಗಳ ಕುರಿತು ಅಪಾರ ಅನುಭವವಿದೆ. ಅವರ ಹಿಂದಿನ ಕೃತಿಯಾದ ‘ಹಲೋ ಶ್ಯಾಡೋಲ್ಯಾಂಡ್ಸ್’ ದಂಗೆಕೋರರ ಕುರಿತು ವಿವರಿಸುತ್ತಾ, ಯುಡಬ್ಲ್ಯುಎಸ್ಎ ಕುರಿತು ಮಾಹಿತಿ ನೀಡುತ್ತದೆ. ಅವರ ಇತ್ತೀಚಿನ ಕೃತಿಯಾದ ‘ನಾರ್ಕೋಟೋಪಿಯಾ’ ಈ ಪ್ರದೇಶದ ಕುರಿತು ಹೆಚ್ಚಿನ ಮಾಹಿತಿಗಳನ್ನು ಒದಗಿಸುತ್ತದೆ.

ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ವಿನ್ನ್ ಅವರ ವಾ ಸ್ಟೇಟ್ ಭೇಟಿಯ ಪ್ರಯತ್ನಗಳು ಹಿನ್ನಡೆ ಅನುಭವಿಸಿದವಾದರೂ, ಅವರು ಯುಡಬ್ಲ್ಯುಎಸ್ಎನ ಆರಂಭಿಕ ವಿದೇಶಾಂಗ ಸಚಿವರಾದ, ಮಾಜಿ ಮಾದಕ ದ್ರವ್ಯ ವಿರೋಧಿ ಹೋರಾಟಗಾರರಾದ ಸಾ ಲು ಥರದ ಪ್ರಮುಖ ವ್ಯಕ್ತಿಗಳ ಸಂದರ್ಶನ ಪಡೆಯಲು ಯಶಸ್ವಿಯಾದರು. ಸಾ ಲು ಅವರು ತಾನು ತನ್ನ ಸರ್ಕಾರವನ್ನು ಮಾದಕ ದ್ರವ್ಯದ ಹಣದಿಂದ ಮುಕ್ತಗೊಳಿಸಲು ನಡೆಸಿದ ವಿಫಲ ಯತ್ನಗಳ ಕುರಿತು ಮಾಹಿತಿ ನೀಡಿದ್ದರು.

ವಿನ್ನ್ ಅವರು ಈ ನಿಟ್ಟಿನಲ್ಲಿ ಅಮೆರಿಕಾದ ಪಾತ್ರ ಬಹಳ ದೊಡ್ಡದಾಗಿದೆ ಎಂದು ಅಭಿಪ್ರಾಯ ಹೊಂದಿದ್ದಾರೆ. 1950ರ ದಶಕದಿಂದ 1970ರ ದಶಕದ ತನಕ ಹೇಗೆ ಸಿಐಎ ಮಯನ್ಮಾರ್‌ನಲ್ಲಿ ವಿವಿಧ ಓಪಿಯಂ ಕಳ್ಳಸಾಗಾಣಿಕಾದಾರರನ್ನು ಬೆಂಬಲಿಸಿತು ಎಂದು ಸಂಶೋಧನೆಗಳ ಆಧಾರದಲ್ಲಿ ವಿವರಿಸಿದ್ದಾರೆ. ಅಮೆರಿಕಾ ಒದಗಿಸಿದ ಆಯುಧಗಳು ಮತ್ತು ಶಿಕ್ಷೆಯಿಂದ ವಿಮೋಚನೆ ನೀಡಿದ್ದಕ್ಕೆ ಪ್ರತಿಯಾಗಿ, ಈ ನಾಯಕರು ಕಮ್ಯುನಿಸ್ಟ್ ವಿರೋಧಿ ಸೇನಾಪಡೆಗಳ ಕಮಾಂಡರ್‌ಗಳಾಗಿ ಕಾರ್ಯಾಚರಿಸಿ, ಮಾವೋ ವಾದಿ ಚೀನಾದಲ್ಲಿ ದಾಳಿಗಳನ್ನು ನಡೆಸಿದರು.

ಲ್ಯಾಂಗ್ಲೀ (ಸಿಐಎ ಮುಖ್ಯ ಕಚೇರಿಗೆ ಬಳಸುವ ಹೆಸರು) ಪ್ರಮುಖ ಮಾದಕ ದ್ರವ್ಯ ನಿರ್ವಾಹಕರನ್ನು ಸೆರೆಹಿಡಿಯುವ ಪ್ರಯತ್ನಗಳಿಗೆ ತಡೆ ಒಡ್ಡಿ, ಅವರಿಗೆ ಮಾದಕ ದ್ರವ್ಯಗಳನ್ನು ಸಾಗಿಸಲು ಕಣ್ಗಾವಲು ವಿಮಾನಗಳನ್ನೂ ಒದಗಿಸಿತ್ತು. ಸಿಐಎ 1980ರ ದಶಕದಲ್ಲಿ ನಿಕಾರ್‌ಗುವಾನ್ ಬಂಡುಕೋರರ ಜೊತೆಗೂ ಇದೇ ರೀತಿಯ ಒಪ್ಪಂದಗಳನ್ನು ನಡೆಸಿ, ಇರಾನ್   ಕಾಂಟ್ರಾ ಅಫೇರ್‌ಗೆ ಹಾದಿ ಮಾಡಿಕೊಟ್ಟಿತು.

ನಿಕಾರಾಗುವಾ ಮಧ್ಯ ಅಮೆರಿಕಾದ ಅತಿದೊಡ್ಡ ರಾಷ್ಟ್ರವಾಗಿದ್ದು, ಸರೋವರಗಳು, ಜ್ವಾಲಾಮುಖಿಗಳು, ಮತ್ತು ಮಳೆಕಾಡುಗಳ ವಿಶಿಷ್ಟ ಭೌಗೋಳಿಕ ಚಿತ್ರಣವನ್ನು ಹೊಂದಿದೆ. 1979ರಲ್ಲಿ ಸಮೋಜಾ಼ ಕುಟುಂಬದ ಆಡಳಿತವನ್ನು ಕೊನೆಗೊಳಿಸಿದ್ದ ಸಮಾಜವಾದಿ ಸ್ಯಾಂಡಿನಿಸ್ಟಾಗಳ ವಿರುದ್ಧ 1980ರ ದಶಕದಲ್ಲಿ ವಿರೋಧಿಗಳಾದ ಕಾಂಟ್ರಾಗಳು ಹೋರಾಟ ಆರಂಭಿಸಿದರು. ಸ್ಯಾಂಡಿನಿಸ್ಟಾಗಳನ್ನು ತನ್ನ ವಿರೋಧಿ ಸೋವಿಯತ್ ಒಕ್ಕೂಟದ ಮಿತ್ರರು ಎಂದು ಭಾವಿಸಿದ ಅಮೆರಿಕಾ, ರಹಸ್ಯವಾಗಿ ಕಾಂಟ್ರಾಗಳಿಗೆ ಬೆಂಬಲ ನೀಡಿತು. ಆದರೆ ಇರಾನ್   ಕಾಂಟ್ರಾ ಅಫೇರ್ ಅಮೆರಿಕಾ ರಹಸ್ಯವಾಗಿ ಇರಾನ್‌ಗೆ ಆಯುಧಗಳನ್ನು ಒದಗಿಸಿ, ಪರೋಕ್ಷವಾಗಿ ಕಾಂಟ್ರಾಗಳಿಗೆ ಹಣದ ಬೆಂಬಲ ಒದಗಿಸುತ್ತಿದೆ ಎಂಬುದನ್ನು ಬಯಲು ಮಾಡಿತು. ಇದರಿಂದಾಗಿ ನಿಕಾರಾಗುವಾ ದೇಶಾದ್ಯಂತ ವ್ಯಾಪಕ ವಿನಾಶ ಮತ್ತು ಮಾನವ ಹಕ್ಕು ದಮನ ನಡೆಯತೊಡಗಿತು.

ವಾ ಸ್ಟೇಟ್‌ನ ಕಾರ್ಯಾಚರಣೆಗಳ ಹಿಂದೆ ವಾಷಿಂಗ್ಟನ್‌ನ ನೆರಳಿನ ಆಟ ಇದ್ದ ರೀತಿಯಲ್ಲೇ, ಇತರ ಪಕ್ಷಗಳೂ ಇಲ್ಲಿ ಹೇಗೆ ಪಾತ್ರ ವಹಿಸಿವೆ ಎಂದು ವಿನ್ನ್ ಅವರು ಬೆಳಕು ಚೆಲ್ಲುತ್ತಾರೆ. ಚೀನಾ ಯುಡಬ್ಲ್ಯುಎಸ್ಎ ಬಳಿ ಚೀನಾದೊಳಗೆ ಮಾದಕ ದ್ರವ್ಯ ಪೂರೈಕೆ ಮಾಡಬಾರದು ಎಂದು ಷರತ್ತು ಹಾಕಿದ್ದು, ಅದಕ್ಕೆ ಪ್ರತಿಯಾಗಿ ಯುಡಬ್ಲ್ಯುಎಸ್ಎಗೆ ಆಯುಧಗಳನ್ನು ಒದಗಿಸಿ, ಅದರ ರಕ್ಷಕನಾಗಿ ನಿಂತಿದೆ. ವಾ ಸ್ಟೇಟ್ ವಿಶ್ವಸಂಸ್ಥೆಯಿಂದ ಅಧಿಕೃತ ರಾಷ್ಟ್ರದ ಸ್ಥಾನಮಾನ ಕೇಳದಿದ್ದರೆ ಸಾಕು ಎಂದುಕೊಂಡಿರುವ ಮಯನ್ಮಾರ್ ಜನರಲ್‌ಗಳು, ಅಲ್ಲಿಯ ತನಕ ವಾ ಸ್ಟೇಟ್‌ಗೆ ತನಗೆ ಬೇಕಾದಂತೆ ಮುಂದುವರಿಯಲು ಅವಕಾಶ ಕಲ್ಪಿಸಿದ್ದಾರೆ.

ಇದೆಲ್ಲದರ ಹೊರತಾಗಿಯೂ, ವಿನ್ನ್ ಅವರ ಕೃತಿ ಮಾದಕ ದ್ರವ್ಯಗಳನ್ನು ಉತ್ಪಾದಿಸುವ ರಾಷ್ಟ್ರಗಳ ಕುರಿತು ವಿಸ್ತೃತ ಮಾಹಿತಿ ಒದಗಿಸುತ್ತದೆ. ಯುಡಬ್ಲ್ಯುಎಸ್ಎ ಪ್ರಕಾಶಮಾನ ಪಿಂಕ್ ಬಣ್ಣದ ಮೆಥ್ ಮಾತ್ರೆಗಳನ್ನು ತಯಾರಿಸುತ್ತದೆ. ಅದನ್ನು ಯುಡಬ್ಲ್ಯುಎಸ್ಎ ಉತ್ತಮವಾಗಿ ಬ್ರ್ಯಾಂಡಿಂಗ್ ಕೂಡ ನಡೆಸಿದೆ. ವಿನ್ನ್ ಅವರ ಪ್ರಕಾರ, ಯುಡಬ್ಲ್ಯುಎಸ್ಎನ ‘ವೈ’ (ಡಿy) ಲೋಗೋ ನೈಕಿ ಸ್ವೂಷ್ (ನೈಕಿ ಸಂಸ್ಥೆಯ ವಿಭಿನ್ನವಾದ ಲೋಗೋ) ರೀತಿಯಲ್ಲೇ ಅತ್ಯಂತ ಪರಿಚಿತವಾಗಿದೆ ಎಂದಿದ್ದಾರೆ. ಏಷ್ಯಾದಾದ್ಯಂತ ಇರುವ ಯುವ ಜನರು ಮತ್ತು ದುಡಿದು ದಣಿದ ಕಾರ್ಮಿಕರು ಪ್ರತಿವರ್ಷವೂ ಕೋಟ್ಯಂತರ ಇಂತಹ ಮಾತ್ರೆಗಳನ್ನು ಸೇವಿಸುತ್ತಾರೆ. ವಾ ಸ್ಟೇಟ್ ಒಂದು ರೀತಿಯಲ್ಲಿ ಅಕ್ರಮ ಕಾರ್ಯಗಳ ಸ್ವರ್ಗವೂ, ಪ್ರಾಯೋಗಿಕ ರಾಜಕೀಯ ಮತ್ತು ಸೃಜನಶೀಲತೆಯ ಕರ್ಮಭೂಮಿಯಂತಾಗಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Advertisement

Udayavani is now on Telegram. Click here to join our channel and stay updated with the latest news.

Next