ಯು. ಆರ್. ರಾಯರು ಮಾಡಿದ ಸಾಧನೆಗಳೂ ಅಮಿತ. ಈಗ ಅವರಿಗೆ ಪದ್ಮವಿಭೂಷಣದ ಗರಿ. ಮಾರ್ಚ್ 10 ಅವರ ಜನ್ಮದಿನ. ಅವರ ಬಗ್ಗೆ ಇಲ್ಲಿ ಬರೆದದ್ದು ಅತ್ಯಲ್ಪ, ಉಳಿದದ್ದು ಅಪಾರ.
Advertisement
ಭಾರತದ ಮೊದಲ ಕೃತಕ ಉಪಗ್ರಹ “ಆರ್ಯಭಟ’ವನ್ನು 1975ರಲ್ಲಿ ಆಕಾಶಕ್ಕೆ ಹಾರಿಸಿದ ಯಶಸ್ವೀ ವ್ಯೋಮ ವಿಜ್ಞಾನಿ ಡಾ| ಯು. ಆರ್. ರಾವ್, ಬಳಿಕ ಭಾಸ್ಕರ, ರೋಹಿಣಿ ಡಿ2 ಉಡಾಯಿಸಿದರು. ಇವರು ಹಾಕಿಕೊಟ್ಟ ಬುನಾದಿಯಿಂದ ಇತ್ತೀಚೆಗೆ 104 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾಯಿಸಲು ಇಸ್ರೋ ಶಕ್ತವಾಯಿತು. ಆರ್ಯಭಟ, ಭಾಸ್ಕರ ಇತ್ಯಾದಿ ಹೆಸರುಗಳನ್ನು ಉಪಗ್ರಹಕ್ಕೆ ಇಡಲು ಕಾರಣ ಅವರು ಪ್ರಾಚೀನ ಭಾರತದ ಖಗೋಳ ಸಾಧಕರು. ಮುಂದೊಂದು ದಿನ ಹಾರಿಸುವ ಉಪಗ್ರಹಕ್ಕೆ ಡಾ| ಯು. ಆರ್. ರಾವ್ ಹೆಸರು ಇಟ್ಟರೆ ಅಚ್ಚರಿಪಡಬೇಕಾಗಿಲ್ಲ.
1960ರಿಂದ 63ರವರೆಗೆ ಅಮೆರಿಕದ ಮೆಚ್ಯುಸೆಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿ.ವಿ.ಯಲ್ಲಿ ವಿಶೇಷ ಅಧ್ಯಯನ ನಡೆಸಿದ ರಾವ್ ಸೋಲಾರ್ ವಿಂಡ್ ಕುರಿತು ವಿಶೇಷ ಸಂಶೋಧನೆ ನಡೆಸಿದ್ದರು. 1966ರಲ್ಲಿ ಭಾರತಕ್ಕೆ ಮರಳಿದ ರಾವ್ ಕ್ಷಕಿರಣದ ಬಗೆಗೆ ಇನ್ನಷ್ಟು ಸಂಶೋಧನೆ ನಡೆಸಿ ರಾಕೆಟ್ ಮತ್ತು ಉಪಗ್ರಹ ಉಡಾಯಿಸಲು ಬೇಕಾದ ಬುನಾದಿಯನ್ನು ಹಾಕಿದರು. 1972ರಲ್ಲಿ ವಿಕ್ರಂ ಸಾರಾಭಾಯಿ ಅವರ ಒತ್ತಾಯಕ್ಕೆ ಮಣಿದು ಉಪಗ್ರಹ ತಂತ್ರಜ್ಞಾನದ ಹೊಣೆಗಾರಿಕೆ ವಹಿಸಿಕೊಂಡ ರಾವ್ 1975ರಲ್ಲಿ ಆರ್ಯಭಟ ಉಪಗ್ರಹವನ್ನು ಉಡಾಯಿಸಿದರು. ಅಲ್ಲಿಯವರೆಗೆ ವಿದೇಶಗಳಲ್ಲಿ ಮಾತ್ರ ಉಪಗ್ರಹವನ್ನು ನಿರ್ಮಿಸಲಾಗುತ್ತಿತ್ತು. ಭಾಸ್ಕರ, ಆ್ಯಪಲ್, ರೋಹಿಣಿ, ಇನ್‌ಸ್ಯಾಟ್ 1, ಇನ್‌ಸ್ಯಾಟ್ 2 ಹೀಗೆ ಬಹು ಉದ್ದೇಶಿತ ಸಂವಹನ, ಹವಾಮಾನ ಉಪಗ್ರಹಗಳು, ಅತ್ಯಾಧುನಿಕ ಐಆರ್‌ಎಸ್1ಎ, 1ಬಿ ಸೂಕ್ಷ್ಮ ಸಂವಹನ ಉಪಗ್ರಹಗಳನ್ನು ಹಾರಿಬಿಡಲಾಯಿತು. ಎಎಸ್‌ಎಲ್‌ವಿ, ಪಿಎಸ್‌ಎಲ್‌ವಿ ಉಡಾಧಿವಣೆ ಮೂಲಕ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಗೂ ಕಾರಣರಾದರು.
Related Articles
ಭಾರತದಲ್ಲಿ ಸಂಪರ್ಕ ಕ್ರಾಂತಿಗೆ ಡಾ| ರಾವ್ ಕೊಡುಗೆ ಅಪಾರ. ಸಂಪರ್ಕ, ಟಿವಿ ಪ್ರಸಾರ, ಶಿಕ್ಷಣದ ವಿಕಾಸ, ಮಲ್ಟಿಮೀಡಿಯ, ಹವಾಮಾನ ಮತ್ತು ಪ್ರಕೃತಿವಿಕೋಪ ಎಚ್ಚರಿಕೆ ಸೇವೆ ಇತ್ಯಾದಿಗಳ ಮೂಲ ಕಾರಣಕರ್ತರು ಇವರು. ಕೃಷಿ, ಅರಣ್ಯ, ಮೀನುಗಾರಿಕೆ, ತ್ಯಾಜ್ಯ ಭೂಮಿ, ಭೂಗರ್ಭ ಜಲ, ಬರ, ನೆರೆ ಇತ್ಯಾದಿಗಳಿಗೆ ರಿಮೋಟ್ ಸೆನ್ಸಿಂಗ್ ಸೆಟಲೈಟ್ ಉಪಯೋಗವಾಗುತ್ತಿದೆ. 1996ರಲ್ಲಿ ನಿವೃತ್ತರಾದರೂ ರಾವ್ ದಣಿವಿರದ ವ್ಯಕ್ತಿತ್ವದವರು. ಅವರು ಅಂತಾರಾಷ್ಟ್ರೀಯ ಸ್ತರದ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳು, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಭಾಷಣಗಳು, ದೊರಕಿದ ಗೌರವ ಡಾಕ್ಟರೇಟ್‌ಗಳು, ಅಲಂಕರಿಸಿದ ಹುದ್ದೆಗಳು, ರಾಷ್ಟ್ರೀಯ, ಜಾಗತಿಕ ಸ್ತರದ ಪ್ರಶಸ್ತಿಗಳನ್ನು ಲೆಕ್ಕವಿಡಲು ಅಸಾಧ್ಯ. ಹಲವು ಮೌಲ್ಯಯುತ ಕೃತಿಗಳನ್ನೂ ರಚಿಸಿದ್ದಾರೆ. ದೇಶ, ವಿದೇಶಗಳ 14ಕ್ಕೂ ಹೆಚ್ಚು ಫೆಲೋಶಿಪ್‌ಗ್ಳು ಅವರಿಗೆ ಸಂದಿವೆ.
Advertisement
ಬೆಂಗಳೂರು ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ (1972-84), ಇಸ್ರೊ ಅಧ್ಯಕ್ಷರು, ವ್ಯೋಮ ಇಲಾಖೆ ಕಾರ್ಯದರ್ಶಿ (1984-94), ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರು (2005), ವ್ಯೋಮ ವಿಜ್ಞಾನ ಸಲಹಾ ಸಮಿತಿ ಅಧ್ಯಕ್ಷರು, ಭಾರತೀಯ ವ್ಯೋಮ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಕುಲಾಧಿಪತಿ (2015), ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯೊರೊಲಜಿ ಅಧ್ಯಕ್ಷರು (2007-14), ಗೋವದ ಅಂಟಾರ್ಕಟಿಕ್ ಆ್ಯಂಡ್ ಓಶಿಯನ್ ರಿಸರ್ಚ್ ಸಹ ಅಧ್ಯಕ್ಷರು (1997-2014), ಆರ್‌ಬಿಐ ನೋಟ್ ಮುದ್ರಣ ಪ್ರೈ.ಲಿ., ಹೆಚ್ಚುವರಿ ನಿರ್ದೇಶಕ (2007-2014), ಬ್ಯಾಂಕ್ ನೋಟ್ ಪೇಪರ್ ಮಿಲ್ ಪ್ರೈ.ಲಿ. ನಿರ್ದೇಶಕ (2010-14), ಕೋಲ್ಕತ್ತದ ವ್ಯೋಮ ಭೌತಶಾಸ್ತ್ರ ಕೇಂದ್ರದ ಅಧ್ಯಕ್ಷರು (2007-08), ಲಖನೌ ಅಂಬೇಡ್ಕರ್ ವಿ.ವಿ. ಕುಲಾಪತಿ (2006-11), ಆರ್‌ಬಿಐ ನಿರ್ದೇಶಕ ಮಂಡಳಿ ಸದಸ್ಯ (2006-11), ಪ್ರಸಾರ ಭಾರತಿ ಸದಸ್ಯ (1997-2001), ಅಧ್ಯಕ್ಷ (2001-02), ರಾಷ್ಟ್ರೀಯ ಭದ್ರತಾ ಮಂಡಳಿ ಸದಸ್ಯ (1998-2001) ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಜಗತ್ತಿನ ಹಳೆಯ ವಿ.ವಿ. ಗೌರವಮಂಗಳೂರು, ಮೈಸೂರು, ರಾಹುರಿ, ಕೋಲ್ಕತ್ತ, ಬನಾರಸ್, ಉದಯಪುರ, ತಿರುಪತಿ, ಹೈದರಾಬಾದ್ ನೆಹರು ಟೆಕ್ನಾಲಜಿಕಲ್ ವಿ.ವಿ., ಮದರಾಸಿನ ಅಣ್ಣಾ, ರೂರಿ, ಪಂಜಾಬಿ, ಕಾನ್ಪುರ, ಧನಬಾದ್, ಹಂಪಿ, ಮೀರಟ್, ಲಖನೌ, ಬೆಳಗಾವಿ ತಾಂತ್ರಿಕ ವಿ.ವಿ., ದಿಲ್ಲಿ- ಭುವನೇಶ್ವರದ ಐಐಟಿ, ಪುಣೆಯ ಪಾಟೀಲ್ ವಿ.ವಿ., ಅಗರ್ತಲದ ಎನ್‌ಐಟಿ, ಬೆಂಗಳೂರು, ಬಳ್ಳಾರಿ ವಿ.ವಿ.ಗಳು ಹೀಗೆ 25ಕ್ಕೂ ಹೆಚ್ಚು ವಿ.ವಿ.ಗಳು ಗೌರವ ಡಾಕ್ಟರೇಟ್‌ಗಳನ್ನು ನೀಡಿವೆ. ಇದರಲ್ಲೊಂದು ವಿಶೇಷವೆಂದರೆ ಜಗತ್ತಿನ ಅತಿ ಹಿರಿಯ ವಿ.ವಿ. ಎನಿಸಿದ ಇಟಲಿಯ ಬೊಲೊಗ್ನ (ಉಚ್ಚಾರಣೆ: ಬೊಲೊನಿಯ, 1077ರಿಂದ ಕಾರ್ಯನಿರತ) ವಿ.ವಿ. 1992ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ. ಪ್ರತಿಷ್ಠಿತ ಪ್ರಶಸ್ತಿಗಳು
ಪ್ರೊ| ರಾವ್ ಅವರಿಗೆ 1976ರಲ್ಲಿಯೇ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು. ಇದೀಗ ಪದ್ಮವಿಭೂಷಣ ದೊರಕಿದೆ. 2013ರಲ್ಲಿ ವಿಶ್ವದ ಅತಿ ದೊಡ್ಡ ಮನ್ನಣೆಯಾದ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ “ಸೆಟ್‌ಲೆçಟ್ ಹಾಲ್ ಆಫ್ ಫೇಮ್’ ಪ್ರಶಸ್ತಿ, 2016ರಲ್ಲಿ ಮೆಕ್ಸಿಕೋದಲ್ಲಿ ಪ್ರತಿಷ್ಠಿತ “ಐಎಎಫ್ ಹಾಲ್ ಆಫ್ ಫೇಮ್’ ಪ್ರಶಸ್ತಿ ರಾವ್ ಅವರಿಗೆ ಬಂದಿದೆ. ಇವೆರಡೂ ಗೌರವವನ್ನು ಪಡೆದ ಭಾರತದ ಮೊದಲ ವ್ಯೋಮ ವಿಜ್ಞಾನಿ ರಾವ್. ಇಷ್ಟೆಲ್ಲ ಇದ್ದರೂ ಪ್ರೌಢಶಾಲಾ ಶಿಕ್ಷಕರಿಗೂ ಇವರು ಭಾಷಣ ಮಾಡುತ್ತಾರೆ, ಅವರೊಂದಿಗೆ ಚಹಾ ಸೇವಿಸುತ್ತ ಹರಟೆ ಹೊಡೆಯುತ್ತಾರೆ, ದೇವಸ್ಥಾನಗಳಿಗೆ ಹೋದರೆ ಸಾಮಾನ್ಯ ಭಕ್ತರ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಾರೆ. ಇದು ಡಾ| ರಾವ್ ಅವರ ವ್ಯೋಮ ವ್ಯಕ್ತಿತ್ವ. ಇಂದಿಗೂ ಇಸ್ರೊ ಕಚೇರಿಯಲ್ಲಿ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ 85ರ ಹರೆಯದ ಡಾ| ರಾವ್ ಅವರಿಗೆ ಭವಿಷ್ಯದ ಕುರಿತು ಹತ್ತು ಹಲವು ಆಶಾವಾದಗಳಿವೆ. ಸಣ್ಣ ಉಪಗ್ರಹಗಳ ಅಗತ್ಯ
104 ಉಪಗ್ರಹಗಳನ್ನು ಉಡಾಯಿಸಿದ ಇಸ್ರೋದ ಸಾಧನೆ ಹಿಂದೆ ತಮ್ಮದೇನೂ ನೇರ ಪಾತ್ರವಿಲ್ಲ. ಕೇವಲ ಮಾರ್ಗದರ್ಶನ ಕೊಡುತ್ತಿದ್ದೇನೆ ಎನ್ನುವ ವಿನಮ್ರತೆ ರಾವ್ ಅವರಲ್ಲಿದೆ. ದೊಡ್ಡ ದೊಡ್ಡ ಉಪಗ್ರಹಗಳನ್ನು ಹಾರಿಸುವುದಕ್ಕಿಂತ ಉದ್ದೇಶ ಆಧಾರಿತವಾಗಿ ಸಣ್ಣ ಸಣ್ಣ ಉಪಗ್ರಹಗಳನ್ನು ಹಾರಿಸುವುದು ಉತ್ತಮ ಎಂಬ ಅಭಿಪ್ರಾಯ ಅವರದು. ಆಕಾಶದಲ್ಲಿ ಹರಿವೆ, ಪಲಾಕ್ ಸೊಪ್ಪು!
ನಮ್ಮ ಉಪಗ್ರಹಗಳು ಮಂಗಳ ಗ್ರಹಕ್ಕೆ ಹೋಗಿವೆ. ಅಲ್ಲಿ ಜೀವನ ಮಾಡಲಿಕ್ಕೆ ಸಾಧ್ಯವೇ ಎಂದು ವಿಜ್ಞಾನಿಗಳು ಗಂಭೀರವಾಗಿ ಚಿಂತನೆ ನಡೆಸುತ್ತಿದ್ದಾರೆ. ಅಲ್ಲಿ ಸುಮಾರು 10,000 ಜನರನ್ನು ಕಳುಹಿಸಿ ಅಲ್ಲಿಯೇ ಇರುವಂತೆ ಮಾಡಬೇಕು. ಹಾಗೆ ಮಾಡಿದರೆ ಆಹಾರವನ್ನು ಕಳುಹಿಸಲು ಸಾಧ್ಯವಿಲ್ಲ. ನೀರಿದೆಯೇ? ಬದುಕಲು ಸಾಧ್ಯವೇ? ಎಂದು ಅಧ್ಯಯನ ನಡೆಯುತ್ತಿದೆ. ನಾವು ಈಗಾಗಲೇ ಹರಿವೆ, ಪಾಲಕ್ ಸೊಪ್ಪನ್ನು ವ್ಯೋಮದಲ್ಲಿ (ಸ್ಪೇಸ್ ಸ್ಟೇಶನ್- ಆಕಾಶದಲ್ಲಿ ವಿಜ್ಞಾನಿಗಳ ನೆಲೆ) ಬೆಳೆಸಿದ್ದೇವೆ. ಅದಕ್ಕೂ, ಭೂಮಿಯಲ್ಲಿ ಬೆಳೆಯುವ ಸೊಪ್ಪಿಗೂ ವ್ಯತ್ಯಾಸವಿರುತ್ತದೆ. ಇದನ್ನು ಬಳಸಬಹುದೋ ನೋಡಬೇಕು. ಮುಖ್ಯವಾಗಿ ಖರ್ಚನ್ನು ಕಡಿಮೆ ಮಾಡಬೇಕು. ನಾವು ಈಗ ಕಳುಹಿಸಿದ ರಾಕೆಟ್‌ನ್ನು ಮರುಬಳಸುವ ತಂತ್ರಜ್ಞಾನ ಬೆಳೆಯಬೇಕಾಗಿದೆ. ಇಲ್ಲವಾದರೆ ಖರ್ಚು ಹೆಚ್ಚಳವಾಗುತ್ತದೆ. ಅಮೆರಿಕದಲ್ಲಿ ಮರುಬಳಸುವ ಉಡಾವಣಾ ವಾಹನ ಸೆಟ್ಲ ನಿರ್ಮಿಸಲಾಗಿದೆ. ಆದರೆ ವಾಪಸು ಬಂದ ಬಳಿಕ ಮತ್ತೆ ಅದನ್ನು ಉಡಾಯಿಸಬೇಕಾದರೆ ಎಂಟು ತಿಂಗಳು ಬೇಕಾಗುತ್ತದೆ. ಅಷ್ಟು ದುರಸ್ತಿ ಕೆಲಸ ಇರುತ್ತದೆ. ಇದರಲ್ಲಿ ಮತ್ತಷ್ಟು ಕೌಶಲ ಬರಬೇಕಾಗಿದೆ ಎಂಬ ಆಶಯ ಡಾ| ರಾವ್ ಅವರದು. ಮಟಪಾಡಿ ಕುಮಾರಸ್ವಾಮಿ