Advertisement

ಕೃಷಿ ಮೇಳಕ್ಕೆ ವಿವಿ ವೇದಿಕೆ ಸಜ್ಜು

11:35 AM Nov 15, 2017 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ ಕೃಷಿ ಮೇಳಕ್ಕೆ ಕೃಷಿ ವಿಶ್ವವಿದ್ಯಾಲಯದ ವೇದಿಕೆ ಸಜ್ಜಾಗಿದ್ದು, ಗುರುವಾರ ಬೆಳಗ್ಗೆ 11ಕ್ಕೆ ಚಾಲನೆ ದೊರೆಯಲಿದೆ. ನಾಲ್ಕು ದಿನಗಳ ಈ ಕೃಷಿ ಮೇಳವನ್ನು ರಾಜ್ಯಪಾಲ ವಜೂಭಾಯಿವಾಲಾ ಉದ್ಘಾಟಿಸಲಿದ್ದು, ಕೃಷಿ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

ನೂರಾರು ಎಕರೆ ಜಾಗದಲ್ಲಿ ಈಗಾಗಲೇ ಸುಮಾರು 700ಕ್ಕೂ ಹೆಚ್ಚು ಮಳಿಗೆಗಳು, ಶಾಶ್ವತ ವೇದಿಕೆ, ಕೃಷಿ ತಾಕುಗಳು, ಸಂಶೋಧನಾ ತಳಿಗಳು ರೈತರ ಸ್ವಾಗತಕ್ಕೆ ಸಿದ್ಧಗೊಂಡಿವೆ. ಸುಮಾರು 12ರಿಂದ 15 ಲಕ್ಷ ರೈತರು ಮೇಳಕ್ಕೆ ಸಾಕ್ಷಿಯಾಗಲಿದ್ದಾರೆ. 

ಈ ಬಾರಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಎಎಚ್‌ಆರ್‌) ವಿಜ್ಞಾನಿ ಡಾ.ಸದಾಶಿವ ಅವರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ತೋಟಗಾರಿಕಾ ವಿಜ್ಞಾನ ಪ್ರಶಸ್ತಿ ಸೇರಿದಂತೆ ಐದು ಜನ ರೈತರಿಗೆ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಪ್ರದಾನ ಮಾಡಲು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ. 

ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ನೀಡುವ ಸಿ.ಭೈರೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಸಿ.ಆರ್‌.ರಾಧಾಕೃಷ್ಣ (ಚಿಕ್ಕಬಳ್ಳಾಪುರ), ಡಾ.ಎಂ.ಎಚ್‌.ಮರಿಗೌಡ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿಗೆ ರಾಜು ಸತ್ತೆಪ್ಪಾ ಭೈರುಗೋಳ (ಬೆಳಗಾವಿ), ಡಾ.ಆರ್‌.ದ್ವಾರಕೀನಾಥ್‌ ಅತ್ಯುತ್ತಮ ರೈತ ಪ್ರಶಸ್ತಿಗೆ ಮಂಜುನಾಥ್‌ (ಬೆಂಗಳೂರು ಗ್ರಾಮಾಂತರ), ಡಾ.ಆರ್‌.ದ್ವಾರಕೀನಾಥ್‌ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ಡಾ.ಬಿ.ಹನುಮಂತೇಗೌಡ (ತುಮಕೂರು), ಕ್ಯಾನ್‌ ಬ್ಯಾಂಕ್‌ ಅತ್ಯುತ್ತಮ ರೈತ ಪ್ರಶಸ್ತಿಗೆ ಓಂಕಾರಮೂರ್ತಿ (ಹಾಸನ), ರೈತ ಮಹಿಳೆ ಪ್ರಶಸ್ತಿಗೆ ಶಾರದಮ್ಮ (ಚಿಕ್ಕಬಳ್ಳಾಪುರ) ಆಯ್ಕೆಯಾಗಿದ್ದಾರೆ.

ಶಾಶ್ವತ ವೇದಿಕೆ: ಇದೇ ಮೊದಲ ಬಾರಿಗೆ ಸುಮಾರು ಮೂರೂವರೆ ಸಾವಿರ ಮಂದಿ ಕುಳಿತುಕೊಳ್ಳುವ ಪ್ರಮುಖವಾದ ಶಾಶ್ವತ ವೇದಿಕೆ ನಿರ್ಮಿಸಲಾಗಿದೆ. ಈ ಹಿಂದೆ ಶಾಮಿಯಾನಗಳನ್ನು ಬಳಸಿ ಮುಖ್ಯವೇದಿಕೆ ನಿರ್ಮಿಸಲಾಗುತ್ತಿತ್ತು. ಮಳೆಯ ಸಂದರ್ಭದಲ್ಲಿ ಇದು ಸಾಕಷ್ಟು ಸಮಸ್ಯೆ ತಂದೊಡ್ಡುತ್ತಿತ್ತು.

Advertisement

ಆದ್ದರಿಂದ ವಿಶೇಷವಾಗಿ ಈ ವೇದಿಕೆ ನಿರ್ಮಾಣ ಮಾಡಲಾಗಿದೆ. ಮುಖ್ಯವಾಗಿ ಕೃಷಿ ಮೇಳದ ಹಿನ್ನೆಲೆಯಲ್ಲಿ ವಿವಿಯ ಬಹುತೇಕ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಎಚ್‌.ಶಿವಣ್ಣ ತಿಳಿಸಿದ್ದಾರೆ. 

ಸ್ವತ್ಛತೆ ಆದ್ಯತೆ: ಐಸ್‌ಕ್ರೀಂ ಸಂಸ್ಥೆಯೊಂದು ಈ ಬಾರಿ ಫ‌ುಡ್‌ಕೋರ್ಟ್‌ ಸುತ್ತಮುತ್ತಲ ಸ್ವತ್ಛತಾ ಜವಾಬ್ದಾರಿ ವಹಿಸಿಕೊಂಡಿದೆ. ಸುಮಾರು 40 ಮಳಿಗೆಗಳಲ್ಲಿ ಊಟ-ತಿಂಡಿ ವ್ಯವಸ್ಥೆ ಇದ್ದು, ಪ್ಲಾಸ್ಟಿಕ್‌, ಪೇಪರ್‌ ಎಲ್ಲೆಂದರಲ್ಲಿ ಬಿಸಾಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

ಅಲ್ಲದೇ ಕೃಷಿ ತಾಕುಗಳು, ವಸ್ತುಪ್ರದರ್ಶನ ಮಳಿಗೆಗಳು, ಮುಖ್ಯ ವೇದಿಕೆ ಸುತ್ತಮುತ್ತ ಪ್ರದೇಶಗಳಲ್ಲಿ ಕಸ ಬೀಳದಂತೆ ಕೃಷಿ ವಿವಿಯ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು ನೋಡಿಕೊಳ್ಳಲಿದ್ದಾರೆ. ಜತೆಗೆ ಕಸ ವಿಲೇವಾರಿಗೆ ಟ್ರ್ಯಾಕ್ಟರ್‌ ಬಳಕೆ ಮಾಡಲಾಗುತ್ತಿದೆ. ಸೂಚನಾ ಫ‌ಲಕಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಮೂಲಸೌಕರ್ಯ: ಆರೋಗ್ಯ ಸಮಸ್ಯೆ ಉಂಟಾದರೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲು ತಜ್ಞ ವೈದ್ಯರು ಹಾಜರು ಇರಲಿದ್ದಾರೆ. ತುರ್ತು ಅವಶ್ಯಕತೆಗೆ ಎರಡು ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಇದ್ದು, ಅಗ್ನಿಶಾಮಕ ವಾಹನ, ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜನರಿಗಾಗಿ ಕುಡಿಯುವ ನೀರು, ನಾಲ್ಕೈದು ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next