ಮೂಲ್ಕಿ: ವಿ.ವಿ. ಪ್ಯಾಟ್ ಒಳಗೊಂಡ ವಿದ್ಯುನ್ಮಾನ ಮತಯಂತ್ರದಲ್ಲಿ ಮತದಾರರು ಮತ ಚಲಾಯಿಸುವಾಗ ಚಿಹ್ನೆಯ ಬಗ್ಗೆ ಏಳು ಸೆಕೆಂಡಿನ ತನಕ ತಾವು ಮಾಡಿರುವ ಮತದಾನ ಸರಿಯಾಗಿದೆಯೆ ಎಂದು ಪರಿಶೀಲಿಸಲು ಅವಕಾಶ ಇರುತ್ತದೆ ಎಂದು ಮೂಡಬಿದಿರೆ 201ನೇ ಕ್ಷೇತ್ರದ ಮೂಲ್ಕಿ ವಿಭಾಗದ ಸೆಕ್ಟರ್ ಅಧಿಕಾರಿ ಪ್ರದೀಪ್ ಅವರು ತಿಳಿಸಿದರು.
ವಿ.ವಿ. ಪ್ಯಾಟ್ ಒಳಗೊಂಡ ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾವಣೆ ಬಗ್ಗೆ ಕಾರ್ನಾಡು ಸಿ.ಎಸ್.ಐ. ಶಾಲೆಯಲ್ಲಿ ನಡೆದ ಮತದಾರರ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಂತ್ರದ ನಿರ್ವಹಣೆ ಬಗ್ಗೆ ಯಾವುದೇ ಆತಂಕ, ಸಂಶಯ ಉಂಟಾದರೆ ಮತಗಟ್ಟೆಯ ಅಧಿಕಾರಿಗಳಿಗೆ ದೂರು ನೀಡುವ ಅವಕಾಶ ಇದೆ ಎಂದು ಹೇಳಿದರು. ಇವಿಎಂ ಮತ್ತು ವಿ.ವಿ. ಪ್ಯಾಟ್ ಮೆಷಿನ್ ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಮತದಾರರು ಗೊಂದಲವಿಲ್ಲದೆ ಮತ ಚಲಾಯಿಸುವ ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದರು.
ಯಾವುದೇ ಸಂದೇಹದ ಬಗ್ಗೆ ದೂರು ನೀಡಲು ಮುಕ್ತ ಅವಕಾಶ ಮತದಾರರಿಗೆ ಇದೆ. ಆದರೆ ದೂರು ಸುಳ್ಳಾದರೆ ಕ್ರಿಮಿನಲ್ ಮೊಕ್ಕದ್ದಮೆಯನ್ನು ಎದುರಿಸಬೇಕಾದ ಅನಿವಾರ್ಯತೆಯೂ ಇರುತ್ತದೆ. ಹೀಗಾಗಿ ಮತದಾರರು ಗಮನದಲ್ಲಿ ಇಟ್ಟುಕೊಂಡು ದೂರು ನೀಡಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಪ್ರದೀಪ್ ತಿಳಿಸಿದರು.
ಮೂಲ್ಕಿ ವಿಶೇಷ ತಹಶೀಲ್ದಾರ್ ಕಚೇರಿಯ ಪ್ರದೀಪ್ ಶೆಣೈ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ಮತದಾರರು ಯಾವುದೇ ಭಯ ಅಥವಾ ತೊಂದರೆ ಇಲ್ಲದೆ ತಮ್ಮ ಮತವನ್ನು ಚಲಾಯಿಸುವಲ್ಲಿ ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ ಎಂದರು.