Advertisement

ಮತದಾನ ಖಾತರಿಪಡಿಸಲು ಬರಲಿದೆ ವಿವಿ ಪ್ಯಾಟ್‌

12:32 PM Feb 13, 2018 | |

ಮೈಸೂರು: ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ರಾಜಕೀಯ ಪಕ್ಷಗಳ ಆಕ್ಷೇಪದ ಹಿನ್ನೆಲೆಯಲ್ಲಿ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿ.ವಿ.ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಮತದಾರ ತಾನು ಯಾರಿಗೆ ಮತ ಚಲಾಯಿಸಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಮತಯಂತ್ರವನ್ನು ನೋಡುವ ಬದಲಿಗೆ ವಿ.ವಿ.ಪ್ಯಾಟ್‌ ನೋಡಬೇಕಿದೆ.

Advertisement

ಮೈಸೂರು ಜಿಲ್ಲೆಯ 2687 ಮತಗಟ್ಟೆಗಳಿಗೆ ಅನುಗುಣವಾಗಿ ಚುನಾವಣಾ ಆಯೋಗ ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್‌ ಮತ್ತು ವಿ.ವಿ.ಪ್ಯಾಟ್‌ಗಳನ್ನು ಸರಬರಾಜು ಮಾಡಲಿದ್ದು, ಈಗಾಗಲೇ ಬಿಇಎಲ್‌ ಸಂಸ್ಥೆಯಿಂದ 2330 ವಿ.ವಿ.ಪ್ಯಾಟ್‌ಗಳನ್ನು ಜಿಲ್ಲೆಗೆ ಸರಬರಾಜು ಮಾಡಲಾಗಿದ್ದು, ಇನ್ನೂ 1170 ವಿ.ವಿ.ಪ್ಯಾಟ್‌ಗಳು ಬಿಇಎಲ್‌ನಿಂದ ಬರಲಿದೆ.

ಜಿಲ್ಲಗೆ 3560 ಬ್ಯಾಲೆಟ್‌: ತಮಿಳುನಾಡು ರಾಜ್ಯದಿಂದ ಮೈಸೂರು ಜಿಲ್ಲೆಗೆ 3560 ಬ್ಯಾಲೆಟ್‌ ಯೂನಿಟ್‌ ಮತ್ತು 3000 ಕಂಟ್ರೋಲ್‌ ಯೂನಿಟ್‌ಗಳನ್ನು ಹಂಚಿಕೆ ಮಾಡಲಾಗಿದ್ದು, ಪೊಲೀಸ್‌ ಭದ್ರತೆಯಲ್ಲಿ ಅವುಗಳನ್ನು ಶೀಘ್ರವೇ ಮೈಸೂರಿಗೆ ತರಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ರಂದೀಪ್‌ ಡಿ. ತಿಳಿಸಿದರು.

ಮತಯಂತ್ರಗಳ ಬಗ್ಗೆ ರಾಜಕೀಯಪಕ್ಷಗಳಿಗೆ ಇರುವ ಅನುಮಾನಗಳನ್ನು ಹೋಗಲಾಡಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಗೆ ಮತಯಂತ್ರ ಮತ್ತು ಕಂಟ್ರೋಲ್‌ ಯೂನಿಟ್‌ಗಳು ಬಂದ ಕೂಡಲೇ ರಾಜಕೀಯಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ಮೊಬೈಲ್‌, ಕಂಪ್ಯೂಟರ್‌ ಇಲ್ಲದ ಕೊಠಡಿಯಲ್ಲಿ ಬಿಇಎಲ್‌ ಎಂಜಿನಿಯರ್‌ಗಳಿಂದ ಅವುಗಳ ಪರಿಶೀಲನೆ ಮಾಡಿಸಿ, ವೇರ್‌ಹೌಸ್‌ನಲ್ಲಿ ಸಿ.ಸಿ.ಟೀವಿ ಕಣ್ಗಾವಲಿನಲ್ಲಿ ಇರಿಸಲಾಗುವುದು. ಮೊದಲ ಸುತ್ತಿನ ಪರಿಶೀಲನೆಯಲ್ಲಿ ಡಮ್ಮಿ ಚಿಹ್ನೆಗಳನ್ನು ಹಾಕಿ ಮತದಾನದ ಪ್ರಾತ್ಯಕ್ಷಿತೆಯನ್ನೂ ನೀಡಲಾಗುವುದು ಎಂದು ತಿಳಿಸಿದರು.

ಮತದಾರರ ಪಟ್ಟಿ: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಫೆ.28ರಂದು ಪ್ರಕಟಿಸಲಾಗುವುದು. ಸದ್ಯ ಜಿಲ್ಲೆಯಲ್ಲಿ 2369987 ಮತದಾರರಿದ್ದು, ಹೊಸದಾಗಿ ಹೆಸರು ಸೇರ್ಪಡೆಗೆ 78403 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ವಿವಿಧ ಕಾರಣಗಳಿಗಾಗಿ 16664 ಹೆಸರುಗಳನ್ನು ಕೈಬಿಡಲಾಗುತ್ತಿದೆ. ಮಾ.1ರಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಕೈಬಿಡುವಿಕೆ, ತಿದ್ದುಪಡಿ ಮತ್ತು ವರ್ಗಾವಣೆಗೆ ನಿಗದಿತ ನಮೂನೆಯಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸುವ ಒಂದು ವಾರ ಮುಂಚಿನವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

Advertisement

ಮತಗಟ್ಟೆ ಸ್ಥಳಾಂತರ: ಮತಗಟ್ಟೆಗಳಲ್ಲಿ ವಿದ್ಯುತ್‌, ಕುಡಿವ ನೀರು, ಶೌಚಾಲಯ, ನಿರೀಕ್ಷಣಾ ಕೊಠಡಿ, ಅಂಗವಿಕಲರಿಗಾಗಿ ರ್‍ಯಾಂಪ್‌ ವ್ಯವಸ್ಥೆ ಇರಬೇಕೆಂದು ಚುನಾವಣಾ ಆಯೋಗ ಸೂಚಿಸಿರುವ ಹಿನ್ನೆಲೆಯಲ್ಲಿ ಈ ರೀತಿಯ ಅಗತ್ಯ ಮೂಲಸೌಕರ್ಯಗಳಿಲ್ಲದ 43 ಮತಗಟ್ಟೆಗಳನ್ನು 100 ರಿಂದ 200 ಮೀಟರ್‌ ಒಳಗೆ ಸ್ಥಳಾಂತರ ಮಾಡಲಾಗುವುದು. ಪಿರಿಯಾಪಟ್ಟಣ ಕ್ಷೇತ್ರದಲ್ಲಿ-2, ಎಚ್‌.ಡಿ.ಕೋಟೆ-7,ಚಾಮುಂಡೇಶ್ವರಿ 16, ಕೃಷ್ಣರಾಜ-5, ಚಾಮರಾಜ-10, ವರುಣ-3 ಮತಗಟ್ಟೆಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದರು.

ಹೊಸ ಮತಗಟ್ಟೆ: ಪಿರಿಯಾಪಟ್ಟಣ ಕ್ಷೇತ್ರದಲ್ಲಿ 05, ನಂಜನಗೂಡು-2, ಚಾಮುಂಡೇಶ್ವರಿ-2, ನರಸಿಂಹರಾಜ-2, ತಿ.ನರಸೀಪುರ-1 ಸೇರಿದಂತೆ ಜಿಲ್ಲೆಯಲ್ಲಿ 12 ಮತಗಟ್ಟೆಗಳನ್ನು ಹೊಸದಾಗಿ ಸ್ಥಾಪಿಸಲಾಗುತ್ತಿದೆ.

ವಿ.ವಿ.ಪ್ಯಾಟ್‌ ಹೇಗೆ ಕೆಲಸ ಮಾಡುತ್ತೆ?: ಯಾವುದೋ ಚಿಹ್ನೆಗೆ ಮತ ಚಲಾಯಿಸಿದರೆ ಮತ್ತಾವುದೋ ಚಿಹ್ನೆಗೆ ಮತ ಚಲಾವಣೆಯಾಗುತ್ತಿದೆ ಎಂದು ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮತಯಂತ್ರಗಳ ಕಾರ್ಯ ನಿರ್ವಹಣೆ ಬಗ್ಗೆ ಚುನಾವಣಾ ಆಯೋಗ ಪಾರದರ್ಶಕತೆ ಕಾಯ್ದುಕೊಳ್ಳುತ್ತಿದೆ. ಜತೆಗೆ ಚಲಾಯಿಸಿದ ಮತವನ್ನು ಖಾತರಿಪಡಿಸಿಕೊಳ್ಳಲು ವಿ.ವಿ.ಪ್ಯಾಟ್‌ ವ್ಯವಸ್ಥೆ ಜಾರಿಗೆ ತಂದಿದೆ.

ಇದರಿಂದ ಮತಗಟ್ಟೆಯಲ್ಲಿ ಈ ಬಾರಿ ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್‌ ಜತೆಗೆ ವಿ.ವಿ.ಪ್ಯಾಟ್‌ ಕೂಡ ಇರಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಮತಯಂತ್ರದಲ್ಲಿ ತಮಗಿಷ್ಟವಾದ ಅಭ್ಯರ್ಥಿ ಹೆಸರು, ಚಿಹ್ನೆ ಮುಂದಿನ ಗುಂಡಿ ಒತ್ತಿದ ನಂತರ ಬೀಫ್ ಶಬ್ಧ ಬಂದರೆ ಮತದಾನ ಮುಗಿಯುತ್ತಿತ್ತು. ಈ ಬಾರಿ ಈ ಕೆಲಸದ ಜತೆಗೆ ಮತಯಂತ್ರದ ಪಕ್ಕದಲ್ಲೇ ಇರುವ ವಿ.ವಿ.ಪ್ಯಾಟ್‌ನಲ್ಲಿ ತಾವು ಯಾರಿಗೆ ಮತ ಚಲಾಯಿಸಿದ್ದೀರಿ

ಎಂಬುದು ಮತಯಂತ್ರದ ಗುಂಡಿ ಒತ್ತಿದ ಏಳು ಸೆಕೆಂಡ್‌ ಒಳಗೆ ವಿ.ವಿ.ಪ್ಯಾಟ್‌ನಲ್ಲಿ ಮುದ್ರಿತ ಪ್ರತಿ ಬಂದು ಡಬ್ಬದೊಳಗೆ ಬೀಳುತ್ತದೆ. ಹೀಗಾಗಿ ಈ ಬಾರಿ ಮತಯಂತ್ರದ ಗುಂಡಿ ಒತ್ತಿ ಬೀಫ್ ಶಬ್ಧಕ್ಕೆ ಕಾಯುವ ಬದಲಿಗೆ ವಿ.ವಿ.ಪ್ಯಾಟ್‌ ಗಮನಿಸಿದರೆ ನಿಮ್ಮ ಮತಚಲಾವಣೆ ಖಾತರಿಯಾಗುತ್ತದೆ. ಮತ ಎಣಿಕೆ ಬಗ್ಗೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ ಮನವಿ ಮಾಡಿದರೆ ವಿ.ವಿ.ಪ್ಯಾಟ್‌ನ ಮುದ್ರಿತ ಪ್ರತಿಗಳ ಮತ ಚಲಾವಣೆಯನ್ನು ಎಣಿಕೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next