Advertisement

ವಿ.ವಿ. ಕ್ರೀಡಾಪಟುಗಳಿಗೆ ವಿಶೇಷ ಪರೀಕ್ಷಾ ಸೌಲಭ್ಯ!

12:30 AM Mar 07, 2019 | Team Udayavani |

ಸುಳ್ಯ: ಪರೀಕ್ಷೆ ಅವಧಿಯಲ್ಲಿ ಅಂತರ್‌ ವಿ.ವಿ., ರಾಷ್ಟ್ರ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಪದವಿ, ಪದವಿಯೇತರ ಹಾಗೂ ಎನ್‌ಎಸ್‌ಎಸ್‌ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯ ಸೌಲಭ್ಯ ಈ ಶೈಕ್ಷಣಿಕ ವರ್ಷದಿಂದ ಜಾರಿಗೊಳ್ಳಲಿದೆ.

Advertisement

ಮಂಗಳೂರು ವಿಶ್ವವಿದ್ಯಾನಿಯ ಮತ್ತು ಅದರಡಿಯ ಕಾಲೇಜುಗಳಲ್ಲಿ ಪದವಿ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡುತ್ತ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡ ಕ್ರೀಡಾಪಟುಗಳಿಗೆ ಈ ಹೊಸ ನಿಯಮ ವರವಾಗಲಿದೆ. ಇದರಿಂದ ಕ್ರೀಡಾಕೂಟಗಳ ಕಾರಣ ಪರೀಕ್ಷೆಗೆ ಹಾಜರಾಗದೆ ಅಥವಾ ಪರೀಕ್ಷೆಯಿಂದಾಗಿ ಕ್ರೀಡಾಕೂಟ ಕೈಬಿಡಬೇಕಾದ ಸಮಸ್ಯೆ ತಲೆದೋರದು.

ಸಮಸ್ಯೆ ಏನಿತ್ತು?
ಮಂಗಳೂರು ವಿವಿ ವ್ಯಾಪ್ತಿಯಲ್ಲಿ ದಕ್ಷಿಣಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ 211 ಕಾಲೇಜುಗಳಿವೆ. ವಾರ್ಷಿಕವಾಗಿ ಅಂತರ್‌ ಕಾಲೇಜು ಮಟ್ಟದಲ್ಲಿ 48ಕ್ಕೂ ಅಧಿಕ ಕ್ರೀಡಾಸ್ಪರ್ಧೆಗಳು ಆಯೋಜನೆಗೊಳ್ಳುತ್ತವೆ. ಅಂತರ್‌ ಕಾಲೇಜು ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು, ಬಳಿಕ ಅಂತರ್‌ ವಿ.ವಿ. ಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆ. ಬಳಿಕ ದಕ್ಷಿಣ ವಲಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೂ ಆಯ್ಕೆಯಾಗಬಹುದು.

ಈ ಎಲ್ಲ ಸ್ಪರ್ಧೆಗಳು ಆಯೋಜನೆಗೊಳ್ಳುವುದು ಹೆಚ್ಚಾಗಿ ಹೊರ ಜಿಲ್ಲೆ, ರಾಜ್ಯದ ಇತರ ವಿ.ವಿ. ಅಥವಾ ಕ್ರೀಡಾಂಗಣಗಳಲ್ಲಿ. ಈ ಸಂದರ್ಭ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಸೆಮಿಸ್ಟರ್‌ ಅಥವಾ ವಾರ್ಷಿಕ ಪರೀಕ್ಷೆ ಏರ್ಪಟ್ಟಿದ್ದಲ್ಲಿ ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳಲು ತೊಂದರೆ ಉಂಟಾಗುತ್ತದೆ. ಅವರು ಕ್ರೀಡಾಕೂಟಕ್ಕೆ ತೆರಳಿದರೆ ಪರೀಕ್ಷೆ ಬರೆಯಲಾಗದು. ಪರೀಕ್ಷೆಗೆ ಹಾಜರಾದರೆ ಕ್ರೀಡಾಕೂಟ ತಪ್ಪುತ್ತದೆ. ಈ ಸಂದಿಗ್ಧದಿಂದ ನೂರಾರು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿತ್ತು.

ಏನಿದು ವಿಶೇಷ ಪರೀಕ್ಷಾ ಸೌಲಭ್ಯ?
ಈ ವಿಶೇಷ ಪರೀಕ್ಷಾ ಸೌಲಭ್ಯದಿಂದ ಪರೀಕ್ಷೆ ಮತ್ತು ಅಂತರ್‌ ವಿ.ವಿ. ಮೇಲ್ಪಟ್ಟ ಕ್ರೀಡಾಸ್ಪರ್ಧೆಗಳು ಏಕಕಾಲದಲ್ಲಿ ನಡೆದರೂ ಕ್ರೀಡಾಪಟುಗಳಿಗೆ ತೊಂದರೆ ಆಗಲಾರದು. ಸ್ಪರ್ಧೆಯಿಂದ ಮರಳಿದ ಬಳಿಕ ಎಲ್ಲ ವಿಷಯಗಳಲ್ಲಿ ಪರೀಕ್ಷೆ ಬರೆಯಬೇಕು. ಆಯಾ ಸೆಮಿಸ್ಟರ್‌ ಪರೀಕ್ಷೆಯನ್ನು ಅದೇ ಅವಧಿಯಲ್ಲಿ ಬರೆಯಬಹುದು. ಮಂಗಳೂರು ವಿ.ವಿ. ವ್ಯಾಪ್ತಿಗೆ ಒಳಪಟ್ಟ ಸ್ನಾತಕೋತ್ತರ, ಪದವಿ, ವಿ.ವಿ. ಸರ್ಟಿಫಿಕೇಟ್‌ ಕೋರ್ಸ್‌ ಮೊದಲಾದ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕ್ರೀಡಾಳುಗಳು ಈ ಸೌಲಭ್ಯ ಪಡೆಯಬಹುದು.
 
ಇವರಿಗೂ ಲಭ್ಯ
ಜತೆಗೆ ಮಂಗಳೂರು ವಿ.ವಿ.ಯನ್ನು ದಕ್ಷಿಣ ವಲಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್‌, ಪಠ್ಯೇತರ ಚಟುವಟಿಕೆ, ಸ್ಕೌಟ್‌ ಮತ್ತು ಗೈಡ್‌ ಮೊದಲಾದವುಗಳಲ್ಲಿ ಪ್ರತಿನಿಧಿಸುವ ವಿದ್ಯಾರ್ಥಿಗಳೂ ಈ ಸೌಲಭ್ಯಕ್ಕೆ ಅರ್ಹರು. ಆಯ್ಕೆಗೊಂಡ ವಿದ್ಯಾರ್ಥಿಗಳು ಒಪ್ಪಿಗೆ ಪಡೆದು, ಸ್ಪರ್ಧೆಗಳಲ್ಲಿ ಭಾಗವಹಿಸಿ ಅನಂತರ ಪರೀಕ್ಷೆಗೆ ಹಾಜರಾಗಬೇಕು.

Advertisement

ಸರಕಾರದಿಂದ ಸುತ್ತೋಲೆ
ಸಮಸ್ಯೆ ಪರಿಹಾರಕ್ಕಾಗಿ ಮಂಗಳೂರು ವಿವಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿದ ಸರಕಾರ ವಿಶೇಷ ಪರೀಕ್ಷಾ ಸೌಲಭ್ಯ ಕಲ್ಪಿಸಲು ಸುತ್ತೋಲೆ ಹೊರಡಿಸಿದೆ.

ಒಂದು ವರ್ಷ ಕಾಯಬೇಕಿತ್ತು!
ಪರೀಕ್ಷೆ ಗೈರಾಗಿ ಕ್ರೀಡಾಕೂಟಕ್ಕೆ ತೆರಳುವವರು ಮತ್ತೆ ಪರೀಕ್ಷೆ ಬರೆಯಲು ಮುಂದಿನ ವರ್ಷದ ತನಕ ಕಾಯಬೇಕು. ಉದಾಹರಣೆಗೆ, ಪ್ರಥಮ ಸೆಮಿಸ್ಟರ್‌ ವಿದ್ಯಾರ್ಥಿ ಅಂತರ್‌ ವಿ.ವಿ. ಕ್ರೀಡಾಕೂಟಕ್ಕೆ ಆಯ್ಕೆಗೊಂಡು, ಪರೀಕ್ಷೆಗೆ ಗೈರಾದರೆ, ಆತ ಮುಂದಿನ ವರ್ಷ ನಡೆಯುವ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ತನಕ ಕಾಯಬೇಕು. ಈ ವೇಳೆ ಆತ 3ನೇ ಸೆಮಿಸ್ಟರ್‌ ವಿದ್ಯಾರ್ಥಿ ಆಗಿರುತ್ತಾನೆ. 1ನೇ ಮತ್ತು 3ನೇ ಸೆಮಿಸ್ಟರ್‌ನ ಪರೀಕ್ಷೆ ಜತೆಯಾಗಿ ಬರುತ್ತವೆ. ಇದರಿಂದ ಒತ್ತಡ ಹೆಚ್ಚುತ್ತಿತ್ತು.

ಕ್ರೀಡಾಪಟುಗಳಿಗೆ ಅನುಕೂಲ
ವಿ.ವಿ. ವ್ಯಾಪ್ತಿಯ ಕ್ರೀಡಾಪಟುಗಳಿಗೆ ಅಂತರ್‌ ವಿ.ವಿ. ಮೇಲ್ಪಟ್ಟ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕಾರಣ ಪರೀಕ್ಷೆ ಬರೆಯಲು ಅಸಾಧ್ಯವಾದಲ್ಲಿ ಕ್ರೀಡಾಕೂಟ ಮುಗಿದ ಬಳಿಕ ಪರೀಕ್ಷೆ ಬರೆಯುವ ಸೌಲಭ್ಯ 2019-20ನೇ ಸಾಲಿನಿಂದ ಲಭ್ಯವಾಗಲಿದೆ. ಈ ಬಗ್ಗೆ ಮಂಗಳೂರು ವಿ.ವಿ.ಗೆ ಅಧಿಕೃತ ಸುತ್ತೋಲೆ ದೊರೆತಿದೆ.
- ಡಾ| ಕಿಶೋರ್‌ ಕುಮಾರ್‌ ಸಿ.ಕೆ.
ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ಮಂಗಳೂರು ವಿವಿ

– ಕಿರಣ್‌ ಪ್ರಸಾದ್‌ ಕುಂಡಡ್ಕ
 

Advertisement

Udayavani is now on Telegram. Click here to join our channel and stay updated with the latest news.

Next