ಬೀದರ: ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನೊಳಗೊಂಡ ಮತಗಟ್ಟೆ ಮಟ್ಟದ ಅರಿವು ಮೂಡಿಸುವ ಗುಂಪಿನ ಸದಸ್ಯರಿಗೆ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಆಶ್ರಯದಲ್ಲಿ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಕಾರ್ಯಾಗಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ, ಹೊಸ ಮತದಾರರ ನೋಂದಣಿಗೆ,
ಯುವ ಮತದಾರರು, ಅಂಗಕಲರು ಸೇರಿದಂತೆ ಎಲ್ಲರೂ ಮತದಾನದಲ್ಲಿ ಭಾಗವಹಿಸುವುದಕ್ಕೆ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅರಿವು ಮೂಡಿಸುವ ಗುಂಪುಗಳು ಮಾಡಬೇಕಾದ ಕಾರ್ಯಗಳು ಮತ್ತು ಮತದಾನ ಖಾತ್ರಿ ಯಂತ್ರ (ವಿವಿಪ್ಯಾಟ್)ದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
18 ವರ್ಷದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ತಮ್ಮ ಮತಗಟ್ಟೆ ವ್ಯಾಪ್ತಿಯ ಪ್ರದೇಶದಲ್ಲಿ ಯಾರಾದರೂ ಇದುವರೆಗೆ ಹೆಸರು ನೋಂದಾಯಿಸಿಕೊಳ್ಳದೇ ಇದ್ದರೆ ಅಂತವರಿಗೆ ಸಂಬಂಧಿಸಿದ ಅರ್ಜಿಯೊಂದನ್ನು ನೀಡಿ ಅವರ ಹೆಸರನ್ನು ಸೇರಿಸಿ, ಸಂವಿಧಾನ ನೀಡಿದ ಮತದಾನದ ಹಕ್ಕು ಚಲಾಯಿಸಲು ಅವರಿಗೆ ತಿಳಿವಳಿಕೆ ನೀಡಬೇಕು. ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಕಡಿಮೆ ಇದೆ. ಈ ಸಂಖ್ಯೆ ಹೆಚ್ಚಳಕ್ಕೆ ಆದ್ಯತೆ ಕೊಡಬೇಕು. 18 ವರ್ಷದ ಮಹಿಳೆಯರ ಹೆಸರು ನೋಂದಣಿಗೆ ಮತ್ತು ಅವರೆಲ್ಲರೂ ಮತದಾನದಲ್ಲಿ ಬಾಗಿಯಾಗಲು ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಎಷ್ಟು ಸಂಖ್ಯೆಯಲ್ಲಿ ದೃಹಿಕ ಹಾಗೂ ಮಾನಸಿಕವಾಗಿ ದುರ್ಬಲರಾಗಿರುವವರು ಇದ್ದಾರೆ ಎಂಬುದನ್ನು ಗುರುತಿಸಬೇಕು. ಯಾವುದೇ ಕಾರಣಕ್ಕೆ ಅವರು ಕೂಡ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ ಯುವ ಮತದಾರರೆಲ್ಲರೂ ತಪ್ಪದೇ ಮತದಾನ ಮಾಡುವಂತೆ ಈಗಾಗಲೇ ನಾನಾ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ.
ಶಾಲಾ ಮಕ್ಕಳಿಂದ ಸೈಕಲ್ ರ್ಯಾಲಿ, ಜಾಥಾ ನಡೆಸಿ ಅರಿವು ಮೂಡಿಸಲಾಗಿದೆ. ಹೊಸ ಮತದಾರರು, ಅಂಗವಿಕಲರಿಂದಲೂ ಕೂಡ ನೂರು ಪ್ರತಿಶತ ಮತದಾನವಾಗುವಂತೆ ತಾವೆಲ್ಲರೂ ಕಾಳಜಿ ವಹಿಸಬೇಕು ಎಂದು ಹೇಳಿದರು.
ಚುನಾವಣೆ ಪಾರದರ್ಶಕವಾಗಿ ನಡೆಯಲಿದೆ. ಈ ದಿಶೆಯಲ್ಲಿ ಹೊಸದಾಗಿ ಮತದಾನ ಖಾತ್ರಿ ಯಂತ್ರಗಳು ಬಂದಿವೆ. ಈ ಬಗ್ಗೆ ಪ್ರತಿಯೊಬ್ಬ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವುದು ಅತಿ ಅವಶ್ಯವಿದೆ. ಮತಗಟ್ಟೆ ಮಟ್ಟದ ಅರಿವು ಮೂಡಿಸುವ ಗುಂಪಿನ ಎಲ್ಲ ಸದಸ್ಯರು ಈ ನಿಟ್ಟಿನಲ್ಲಿ ಜನತೆಗೆ ಮಾಹಿತಿ ಕೊಡಬೇಕು ಎಂದು ಹೇಳಿದರು.
ಜಿಪಂ ಸಿಇಒ ಡಾ| ಆರ್. ಸೆಲ್ವಮಣಿ ಅವರು ಚುನಾವಣಾ ನೀತಿ ಸಂಹಿತೆ ಬಗ್ಗೆ ವಿವರಿಸಿದರು. ತಹಶೀಲ್ದಾರ ಕೀರ್ತಿ ಚಾಲಕ, ಚುನಾವಣಾ ಮಾಸ್ಟರ್ ಟ್ರೇನರ್ ರಮೇಶ ಮಠಪತಿ ಇದ್ದರು.