Advertisement

ಬಿಗಿ ಭದ್ರತೆಯ ಸ್ಟ್ರಾಂಗ್‌ ರೂಂನಲ್ಲಿ ಮತಯಂತ್ರಗಳು

06:26 PM Apr 20, 2019 | Lakshmi GovindaRaju |

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯ, ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಗಿದೆ.

Advertisement

ವಿದ್ಯುನ್ಮಾನ ಮತಯಂತ್ರಗಳನ್ನು ನಗರದ ಸಮೀಪವಿರುವ ಬೇಡರಪುರದ‌ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.

ಎರಡು ಲಾಕ್‌ ಸಿಸ್ಟಂನಲ್ಲಿ ಸೀಲ್‌: ಗುರುವಾರ ಮತದಾನ ಮುಕ್ತಾಯವಾದ ನಂತರ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಡೀಮಸ್ಟರಿಂಗ್‌ ಕಾರ್ಯ ನಡೆಸಲಾಯಿತು. ಮತದಾನವಾದ ವಿದ್ಯುನ್ಮಾನ ಮತಯಂತ್ರಗಳನ್ನು ( ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್‌ ಮತ್ತು ವಿವಿಪ್ಯಾಟ್‌)

ಜಿಪಿಎಸ್‌ ಅಳವಡಿಸಲಾಗಿರುವ ಕಂಟೈನರ್‌ ವಾಹನದ ಮೂಲಕ ಸೂಕ್ತ ಪೊಲೀಸ್‌ ಭದ್ರತೆಯೊಡನೆ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿಗೆ ತರಲಾಯಿತು. ಬಳಿಕ ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಪ್ರತ್ಯೇಕವಾಗಿ ಎರಡು ಲಾಕ್‌ ಸಿಸ್ಟಂನಲ್ಲಿ ಸೀಲ್‌ ಮಾಡಿ, ಸುರಕ್ಷಿತವಾಗಿ ಇಡಲಾಗಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಒಟ್ಟು 2005 ಮತಗಟ್ಟೆಗಳಿವೆ. ಒಟ್ಟು ಮತದಾನವಾದ 2018 ಬ್ಯಾಲೆಟ್‌ ಯೂನಿಟ್‌, 2018 ಕಂಟ್ರೋಲ್‌ ಯೂನಿಟ್‌ ಮತ್ತು 2070 ವಿವಿಪ್ಯಾಟ್‌ಗಳನ್ನು ಇಡಲಾಗಿದೆ.

Advertisement

103 ಅಧಿಕಾರಿಗಳ ನಿಯೋಜನೆ: ವಿದ್ಯುನ್ಮಾನ ಮತಯಂತ್ರಗಳನ್ನು ಇಡಲಾಗಿರುವ ಭದ್ರತಾ ಕೊಠಡಿಗೆ 3 ಬಗೆಯ ಬಿಗಿ ಭದ್ರತೆ ಒದಗಿಸಲಾಗಿದೆ. ಸೆಂಟ್ರಲ್‌ ಆಮ್ಡ್ì ಪೊಲೀಸ್‌ ಫೋರ್ಸ್‌(ಸಿಎಪಿಎಫ್), ಸ್ಟೇಟ್‌ ಆಮ್ಡ್ì ಪೊಲೀಸ್‌ ಮತ್ತು ಜಿಲ್ಲಾ ಪೊಲೀಸ್‌ ಸೇರಿದಂತೆ ಸುಮಾರು 200 ರಕ್ಷಣಾ ಸಿಬ್ಬಂದಿ ವರ್ಗದವರಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಎಲ್ಲಾ ಭದ್ರತಾ ಕೊಠಡಿಗಳ ಹೊರಭಾಗದಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭದ್ರತಾ ಕೊಠಡಿ ಸುರಕ್ಷತಾ ವ್ಯವಸ್ಥೆಯನ್ನು ವೀಕ್ಷಿಸಲು ಮತ ಎಣಿಕೆ ದಿನವಾದ ಮೇ 23 ರವರೆಗೆ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲು ಮೂರು ಪಾಳಿಯಲ್ಲಿ 103 ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಸುತ್ತಲೂ ಸಿ.ಸಿ.ಕ್ಯಾಮೆರಾ: ಭದ್ರತಾ ಕೊಠಡಿಗೆ ಭದ್ರತೆ ಒದಗಿಸಿರುವುದನ್ನು ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗುತ್ತಿರುವುದನ್ನು ಹತ್ತಿರದಿಂದ ನೋಡಲು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಅವರ ಪ್ರತಿನಿಧಿಗಳನ್ನು ನೇಮಕ ಮಾಡಲು ತಿಳಿಸಲಾಗಿದೆ. ಅಭ್ಯರ್ಥಿಯು ನೇಮಕ ಮಾಡುವ ಪ್ರತಿನಿಧಿಗೆ ಭದ್ರತಾ ಕೊಠಡಿ ಹೊರಭಾಗದಲ್ಲಿ ಮಳೆಯಿಂದ ರಕ್ಷಿತವಾಗುವಂತೆ ಟೆಂಟ್‌ ಸ್ಥಾಪಿಸಿಕೊಡಲಾಗುತ್ತದೆ. ಟೆಂಟ್‌ ಒಳಭಾಗದಲ್ಲಿ ಅಳವಡಿಸಲಾಗಿರುವ ಟಿ.ವಿ. ಪರದೆಯಲ್ಲಿ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗುವ ಭದ್ರತಾ ಕೊಠಡಿಯ ಪ್ರವೇಶದ್ವಾರದ ಬಾಗಿಲನ್ನು ವೀಕ್ಷಿಸಬಹುದಾಗಿದೆ.

ಮೇ 23ಕ್ಕೆ ಮತ ಏಣಿಕೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮೇ 23 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭಿಸಲಾಗುತ್ತದೆ. ಅಲ್ಲಿಯವರೆಗೂ ಭದ್ರತೆಯನ್ನು ಮುಂದುವರೆಸಲಾಗುತ್ತದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ
ಚಾಮರಾಜನಗರ: ಮತಯಂತ್ರಗಳನ್ನು ಇರಿಸಲಾಗಿರುವ ಬೇಡರಪುರದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಕಟ್ಟಡಕ್ಕೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ಭೇಟಿ ನೀಡಿ ಪರಿಶೀಲಿಸಿದರು.

ಮತ ಗಟ್ಟೆಗಳಿಂದ ಬಂದ ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಡಿಮಸ್ಟರಿಂಗ್‌ ನಡೆಸಲಾಯಿತು. ಎಂಟು ವಿಧಾನಸಭಾ ಕ್ಷೇತ್ರಗಳಿಂದ ಡಿಮಸ್ಟರಿಂಗ್‌ ನಡೆದು ಮತಯಂತ್ರಗಳು ನಗರದ ಇಂಜಿನಿಯರಿಂಗ್‌ ಕಾಲೇಜು ತಲುಪಿದಾಗ ಶುಕ್ರವಾರ ಬೆಳಗಿನ ಜಾವ 4.30 ಆಗಿತ್ತು.

ಅಲ್ಲಿಂದ ಬಂದ ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಲಾಗಿರುವ ಭದ್ರತಾ ಕೊಠಡಿಗಳಲ್ಲಿ ಇರಿಸಿ, ಬೀಗ ಹಾಕಿ ಸೀಲ್‌ ಮಾಡಿದಾಗ ಶುಕ್ರವಾರ 9 ಗಂಟೆಯಾಯಿತು. ಬಳಿಕ ಸೆಂಟ್ರಲ್‌ ಆಮ್ಡ್ ಪೊಲೀಸ್‌ ಫೋರ್ಸ್‌ ಭದ್ರತೆಗೆ ಒಳಪಡಿಸಲಾಯಿತು. ಈ ಎಲ್ಲ ಪ್ರಕ್ರಿಯೆಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ಬಿ.ಕಾವೇರಿ ಅವರ ನೇತೃತ್ವದಲ್ಲಿ ನಡೆದವು.

ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ವೀಕ್ಷಕರು ಹಾಗೂ ಚುನಾವಣಾಧಿಕಾರಿಗಳ ಸಭೆ ನಡೆಯಿತು. ಸಭೆಯ ನಂತರ ಮತಯಂತ್ರಗಳನ್ನು ಇರಿಸಲಾಗಿರುವ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಕಟ್ಟಡಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next