ಶಹಾಪುರ: ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವುದರಿಂದ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಮತದಾನದ ಮಹತ್ವ ಅರಿತು ಸರ್ವರೂ ಹಕ್ಕು ಚಲಾಯಿಸಬೇಕು ಎಂದು ನಗರದ ಉಪ ವಲಯ ಅರಣ್ಯಾಧಿಕಾರಿ ಸೋಮರಾಯ ಡಿ.ಜೆ. ಹೇಳಿದರು.
ನಗರದ ಶಾಂತಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಲಬುರ್ಗಿ ಮತ್ತು ಯಾದಗಿರಿ ನೆಹರು ಯುವ ಕೇಂದ್ರ ಹಾಗೂ ಗ್ರಾಮೀಣ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ನೆರೆ ಹೊರೆ ಯುವ ಸಂಘಗಳ ಸಂಸತ್ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಉಳಿವಿಗಾಗಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶದ ಭವಿಷ್ಯ ನಿರ್ಣಯಿಸುವ ಶಕ್ತಿ ಮತದಾನಕ್ಕಿದೆ. ಒಂದೊಂದು ಮತವು ಕೂಡ ಅಮೂಲ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಮತದಾನ ಮಾಡುವುದರ ಜತೆಗೆ ಇನ್ನೊಬ್ಬರನ್ನು ಮತದಾನ ಮಾಡುವಂತೆ ಪ್ರೇರೆಪಿಸಿ ಮತಗಟ್ಟೆಗೆ ಕರೆ ತರುವ ಕಾರ್ಯ ನಡೆಯಬೇಕು.
ಅಲ್ಲದೇ ನಮ್ಮ ಇಲಾಖೆ ವತಿಯಿಂದ ಪ್ರತಿ ವರ್ಷ ಸಸಿ ನೆಟ್ಟು ಅವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮೊಂದಿಗೆ ಸಾರ್ವಜನಿಕರು ಕೂಡ ತಮ್ಮ ಮನೆ ಅಂಗಳದಲ್ಲಿ ಹಾಗೂ ಸುತ್ತಮುತ್ತಲಿನ ಉದ್ಯಾನಗಳಲ್ಲಿ ಸಸಿ ನೆಟ್ಟು ಉತ್ತಮ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ವ್ಯಕ್ತಿತ್ವ ವಿಕಾಸನದ ಕುರಿತು ಉಪನ್ಯಾಸ ನೀಡಿದ ಪಂಚಾಕ್ಷರಿ ಹಿರೇಮಠ, ಪ್ರತಿಯೊಬ್ಬರು ತಮ್ಮದೇ ಆದ ವ್ಯಕ್ತಿತ್ವ ಹೊಂದಿರುತ್ತಾರೆ. ಕೇವಲ ಬಾಹ್ಯ ಸೌಂದರ್ಯ ಅಲ್ಲದೇ ಆಂತರಿಕವಾಗಿ ಶುದ್ಧಿಯಾದಾಗ ಮಾತ್ರ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಕೇವಲ ಬಣ್ಣ, ಸೌಂದರ್ಯದಿಂದ ವ್ಯಕ್ತಿತ್ವ ವಿಕಾಸಗೊಳ್ಳುವುದಿಲ್ಲ. ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್, ಚಂದ್ರಶೇಖರ ಆಜಾದ್ ಇವರೆಲ್ಲರೂ ಆಂತರಿಕ ವ್ಯಕ್ತಿತ್ವದಿಂದ ಗುರುತಿಸಿಕೊಂಡು ದೇಶ ನಿರ್ಮಾಣಕ್ಕೆ ತಮ್ಮ ಜೀವನ ಮುಡಿಪಾಗಿಡುವ ಮೂಲಕ ಮಹಾತ್ಮರು ಎನಿಸಿದ್ದಾರೆ. ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಲಕ್ಷ್ಮಣ ಲಾಳಸೇರಿ ಪರಿಸರ ಹಾಗೂ ಮತದಾನ ಜಾಗೃತಿ ಕುರಿತು, ಭೀಮಣ್ಣಗೌಡ ಸಾಮಾಜಿಕ ಪಿಡುಗಗಳ ಕುರಿತು
ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಸರ್ವೇಶ ಅಧ್ಯಕ್ಷತೆ ವಹಿಸಿದ್ದರು. ಮಾಂತೇಶ ಗಿಂಡಿ, ವೀರೇಶ ಉಳ್ಳಿ, ಶಿವರಾಜ ಜಂಗಳಿ, ರಮೇಶ ಶಿರ್ಣಿ, ಸಂತೋಷ ಹಿರೇಮಠ, ಪವನಕುಮಾರ ಶಿರವಾಳ, ಶಂಕರ ಹುಲಕಲ್, ಸಿದ್ದು ಆನೇಗುಂದಿ, ಭೀಮಣ್ಣ ಹುಲಕಲ್, ಅಂಬು ದೋರನಹಳ್ಳಿ ಇದ್ದರು. ನಿಂಗಣ್ಣ ತೇಕರಾಳ ಸ್ವಾಗತಿಸಿ, ವಂದಿಸಿದರು.