Advertisement

ಸಿಎಂ ಜಿಲ್ಲೆಯಲ್ಲಿ ಶೇ.74.60 ಮತದಾನ

01:04 PM May 13, 2018 | |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ ಉತ್ತಮ ಮತದಾನವಾಗಿದ್ದು, ಶೇ. 74.60 ಜನ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

Advertisement

ಸಂಜೆ 5ಗಂಟೆ ವೇಳೆಗೆ ಪಿರಿಯಾಪಟ್ಟಣ- ಶೇ.81.20, ಕೆ.ಆರ್‌.ನಗರ-ಶೇ.76.50, ಹುಣಸೂರು-ಶೇ.71.99, ಎಚ್‌.ಡಿ.ಕೋಟೆ-ಶೇ.69.52, ನಂಜನಗೂಡು-ಶೇ.71.81, ಚಾಮುಂಡೇಶ್ವರಿ- ಶೇ.69.72, ಕೃಷ್ಣರಾಜ- ಶೇ.54, ಚಾಮರಾಜ-ಶೇ.53.16, ನರಸಿಂಹರಾಜ- ಶೇ.46.84, ವರುಣಾ- ಶೇ.73.85, ತಿ.ನರಸೀಪುರ- ಶೇ.71.60 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ ಶೇ.67.29 ಮತದಾನವಾಗಿದೆ.

11 ವಿಧಾನಸಭಾ ಕ್ಷೇತ್ರಗಳಿರುವ ಮೈಸೂರು ಜಿಲ್ಲೆಯಲ್ಲಿ ಮೈಸೂರು ನಗರದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳು ಹಾಗೂ ಜಿಲ್ಲೆಯ ಇನ್ನುಳಿದ ಕ್ಷೇತ್ರಗಳ ಪಟ್ಟಣ ಪ್ರದೇಶಗಳಲ್ಲಿ ಬೆಳಗ್ಗಿನಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, ಕಳೆದ ಒಂದು ವಾರದಿಂದ ಉತ್ತಮ ಮಳೆ ಆಗುತ್ತಿರುವುದರಿಂದ ವ್ಯವಸಾಯದಲ್ಲಿ ನಿರತರಾಗಿರುವ ಹಳ್ಳಿಗಾಡಿನ ಜನರು ಮಧ್ಯಾಹ್ನದ ವರೆಗೆ ಜಮೀನಿನ ಕೆಲಸ ಮುಗಿಸಿ, ಬಿಸಿಲೇರಿದ ನಂತರ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರೂ ಹುಟ್ಟೂರು ಸಿದ್ದರಾಮನಹುಂಡಿಯ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವರುಣಾ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮನ ಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 80ರಲ್ಲಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಗಿರುವ ಪುತ್ರ ಡಾ.ಯತೀಂದ್ರ ಜೊತೆಗೆ ಮಧ್ಯಾಹ್ನ 12 ಗಂಟೆಗೆ ಆಗಮಿಸಿ ಮತದಾನ ಮಾಡಿದರು.

ಇದಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಮತ್ತು ಡಾ.ಯತೀಂದ್ರ, ಮನೆ ದೇವರು ಸಿದ್ದರಾಮೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ ಬಳಿಕ ಮಧ್ಯಾಹ್ನದ ಊಟಕ್ಕೆ ಬಾಲ್ಯದ ಗೆಳೆಯ, ಜಿಪಂ ಮಾಜಿ ಸದಸ್ಯ ಕೆಂಪೀರಯ್ಯ ಮನೆಗೆ ತೆರಳಿ ರಾಗಿ ಮುದ್ದೆ-ನಾಟಿ ಕೋಳಿ ಸಾರು ಸೇವಿಸಿ, ಮನೆಯ ಆವರಣದಲ್ಲಿ ಕುಳಿತು ಗ್ರಾಮಸ್ಥರ ಯೋಗಕ್ಷೇಮ ವಿಚಾರಿಸಿದರು.

Advertisement

ಇದಕ್ಕೂ ಮುನ್ನ ಸಿದ್ದರಾಮಯ್ಯ ಸಹೋದರರಾದ ಸಿದ್ದರಾಮೇಗೌಡ, ರಾಮೇಗೌಡ ಒಬ್ಬೊಬ್ಬರೆ ಬಂದು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೈಸೂರು-ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಹಾಲಿ, ಮಾಜಿ ಸಚಿವರ ಮತದಾನ: ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ವರುಣಾ ಕ್ಷೇತ್ರ ವ್ಯಾಪ್ತಿಯ ಹದಿನಾರು ಗ್ರಾಮದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ತನ್ವೀರ್‌ ಸೇs… ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಜೆಡಿಎಸ್‌ ಅಭ್ಯರ್ಥಿ ಅಡಗೂರು ಎಚ್‌.ವಿಶ್ವನಾಥ್‌, ಹುಣಸೂರು ಪಟ್ಟಣದ ಕರೀಗೌಡರ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 109ರಲ್ಲಿ ಮತದಾನ ಮಾಡಿದರು.

ರಾಜಮಾತೆ, ಯದುವೀರ್‌ ಮತದಾನ: ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಮೈಸೂರಿನ ಅಗ್ರಹಾರದ ಶ್ರೀಕಾಂತ ಪದವಿಪೂರ್ವ ಕಾಲೇಜುನ ಮತಗಟ್ಟೆ ಸಂಖ್ಯೆ 148ರಲ್ಲಿ ಜನ ಸಾಮಾನ್ಯರೊಂದಿಗೆ ಅರ್ಧ ಗಂಟೆ ಸರದಿಯನಲ್ಲಿ ನಿಂತು ಮತದಾನ ಮಾಡಿದರು. ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎ.ರಾಮದಾಸ್‌ ಸೇಂಟ್‌ ಮೇರೀಸ್‌ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮೈಸೂರು ಜಿಲ್ಲೆಯ ಮತದಾರರ ಜಾಗೃತಿ ಸಮಿತಿ (ಸ್ವೀಪ್‌) ರಾಯಭಾರಿಯಾಗಿರುವ ಬಿಗ್‌ಬಾಸ್‌ ಸ್ಪರ್ಧಿ ಖ್ಯಾತಿಯ ನಿವೇದಿತಾಗೌಡ, ದಟ್ಟಗಳ್ಳಿಯ ಕನಕದಾಸ ನಗರದ ಮತಗಟ್ಟೆಯಲ್ಲಿ ತಮ್ಮ ಹುಟ್ಟುಹಬ್ಬದ ದಿನವೇ ಮತದಾನ ಮಾಡಿದರು.

ಆಂಬ್ಯುಲೆನ್ಸ್‌ನಲ್ಲೇ ಬಂದು ಮತದಾನ: ಕೆ.ಆರ್‌.ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್‌, ಆಂಬ್ಯುಲೆನ್ಸ್‌ನಲ್ಲೇ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಗುರುವಾರ ತಡರಾತ್ರಿ ಕ್ಷೇತ್ರದಲ್ಲಿ ಪ್ರಚಾರ ಮುಗಿಸಿ ಮನೆಗೆ ವಾಪಸ್ಸಾಗುವಾಗ ಲಾಳಂದೇವನಹಳ್ಳಿ ಬಳಿ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹೀಗಾಗಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ವಿಶೇಷ ಮತಗಟ್ಟೆಗಳಲ್ಲಿ ಉತ್ತಮ ಮತದಾನ: ಇನ್ನು ಆದಿವಾಸಿಗಳಿಗಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಹಟ್ಟಿ ಮಾದರಿಯ ಮತಗಟ್ಟೆಗಳು, ಮಹಿಳಾ ಸ್ನೇಹಿ ಪಿಂಕ್‌ ಮತಗಟ್ಟೆಗಳು, ಅಂಗವಿಕಲರ ಸ್ನೇಹಿ ಮತಗಟ್ಟೆಗಳಲ್ಲಿ ಉತ್ತಮ ಮತದಾನವಾಗಿದೆ. ಇದೇ ಮೊದಲ ಬಾರಿಗೆ ಹಕ್ಕು ಚಲಾಯಿಸುವವರಿಂದ ಹಿಡಿದು ವಯೋವೃದ್ಧರವರೆಗೂ ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next