Advertisement

Election: ಮಧ್ಯಪ್ರದೇಶಕ್ಕಿಂದು ಮತದಾನ- ಕಮಲ-ಕೈ ನೇರ ಹಣಾಹಣಿ

11:42 PM Nov 16, 2023 | Team Udayavani |

ಭೋಪಾಲ/ರಾಯ್‌ಪುರ: ಪಂಚರಾಜ್ಯಗಳ ಪೈಕಿ ಪ್ರಮುಖ ರಾಜ್ಯ ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಿಗೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇದರ ಜತೆಗೆ ಛತ್ತೀಸ್‌ಗಢದಲ್ಲಿ ಎರಡನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಕೂಡ ಹಕ್ಕು ಚಲಾವಣೆ ನಡೆಯಲಿದೆ.

Advertisement

ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ಗೆ ಮಧ್ಯಪ್ರದೇಶ ಚುನಾವಣೆಯನ್ನು ಗೆಲ್ಲುವುದು ಅನಿವಾರ್ಯವೇ ಆಗಿದೆ.

230 ಕ್ಷೇತ್ರಗಳ ಪೈಕಿ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. 252 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 2,534 ಅಭ್ಯರ್ಥಿಗಳ ಭವಿಷ್ಯವನ್ನು 5.59 ಕೋಟಿ ಮತದಾರರು ಒಂದೇ ಹಂತದಲ್ಲಿ ನಿರ್ಧರಿಸಲಿದ್ದಾರೆ. ಅದಕ್ಕೆ ಬೇಕಾಗಿರುವ ಎಲ್ಲ ರೀತಿಯ ಭದ್ರತೆಗಳನ್ನೂ ಕೈಗೊಳ್ಳಲಾಗಿದೆ. ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಮಾಜಿ ಸಿಎಂ ಕಮಲ್‌ನಾಥ್‌ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.

2018ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ನೇತೃತ್ವದ ಸರಕಾರ 2020ರಲ್ಲಿ ಪತನಗೊಂಡ ಬಳಿಕ ಮತ್ತೆ ಅಧಿಕಾರಕ್ಕೆ ಬಂದದ್ದು ಹಾಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರಕಾರ. ಕರ್ನಾಟಕದಲ್ಲಿ ಇದ್ದ ಬಿಜೆಪಿ ಸರಕಾರದ ವಿರುದ್ಧ ನಲುವತ್ತು ಪರ್ಸೆಂಟ್‌ ಭ್ರಷ್ಟಾಚಾರದ ಆರೋಪ ಮಾಡಿದ್ದ ಕಾಂಗ್ರೆಸ್‌ ಮಧ್ಯಪ್ರದೇಶ ಸರಕಾರದ ವಿರುದ್ಧ ಶೇ.50 ಭ್ರಷ್ಟಾಚಾರದ ಆರೋಪ ಮಾಡಿದೆ.

ಕಾಂಗ್ರೆಸ್‌ ನೇತೃತ್ವದ ಸರಕಾರದ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವ ವಾಗ್ಧಾನ ಮಾಡಿದ್ದರೆ, ಕರ್ನಾಟಕದಂತೆಯೇ ಪಂಚ ಗ್ಯಾರಂಟಿಗಳನ್ನೂ ನೀv‌ಲಾಗಿದೆ. ಇದರೊಂದಿಗೆ, ಮುಖ್ಯಮಂತ್ರಿ ಆಗುವ ಕೊನೆಯ ಅವಕಾಶ ಕಮಲ್‌ನಾಥ್‌ ಅವರಿಗೆ ಇದುವೇ ಎಂದು ಹೇಳಲಾಗುತ್ತಿದೆ.

Advertisement

ಬಿಜೆಪಿ ವತಿಯಿಂದ ಯಾರನ್ನು ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿಲ್ಲ. ಹೀಗಾಗಿ, ಪಕ್ಷ ಅಧಿಕಾರ ಉಳಿಸಿಕೊಂಡರೆ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರೇ ಹುದ್ದೆಯಲ್ಲಿ ಮುಂದುವರಿಯುವುದು ಅಸಾಧ್ಯ ಎಂಬ ವಾದಗಳೂ ಇವೆ. ಮತ್ತೂಂದು ಮಹತ್ವದ ಅಂಶವೆಂದರೆ, ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿ ಸದ್ಯ ಕೇಂದ್ರ ಸಚಿವರಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾರ ಬೆಂಬಲಿಗರ ಪೈಕಿ ಕೆಲವರು ಮರಳಿ ಕಾಂಗ್ರೆಸ್‌ ಸೇರಿದ್ದಾರೆ.

ಹಲವು ರೀತಿಯ ನಿರೀಕ್ಷೆ: ಇತ್ತೀಚೆಗೆ ಪ್ರಕಟವಾಗಿರುವ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಗೆಲವು ಸಿಕ್ಕಿದರೂ ಪ್ರಯಾಸದ್ದಾಗಲಿವೆ ಎಂಬ ಅಭಿಪ್ರಾಯ ಮಂಡಿಸಿವೆ. ಇನ್ನು ಕೆಲವು ಕಾಂಗ್ರೆಸ್‌ಗೆ ಜಯ ಎಂದು ಹೇಳಿಕೊಂಡಿವೆ.

ಇಬ್ಬರು ಸಾವು: ಈ ನಡುವೆ, ಚುನಾವಣಾ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ಅಧಿಕಾರಿಗಳು ಹೃದಯಾಘಾತದಿಂದ ಅಸುನೀಗಿದ್ದರೆ, ಮತ್ತೂಬ್ಬರು ಅಸ್ತಮಾದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2ನೇ ಹಂತದಲ್ಲಿ: ನಕ್ಸಲ್‌ ಪೀಡಿತ ಛತ್ತೀಸ್‌ಗಢದಲ್ಲಿ ಶುಕ್ರವಾರ ಎರಡನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಹಕ್ಕು ಚಲಾವಣೆ ನಡೆಯಲಿದೆ. ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, ಡಿಸಿಎಂ ಟಿ.ಎಸ್‌.ಸಿಂಗ್‌ ದೇವ್‌, ಸ್ಪೀಕರ್‌ ಚರಣ್‌ ದಾಸ್‌ ಮಹಾಂತ್‌, ಏಳು ಮಂದಿ ಸಚಿವರು ಸೇರಿದಂತೆ ಒಟ್ಟು 958 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು 1.63 ಕೋಟಿ ಮಂದಿ ಮತದಾರರು ನಿರ್ಧರಿಸಲಿದ್ದಾರೆ.
70 ಕ್ಷೇತ್ರಗಳ ಪೈಕಿ ನಕ್ಸಲ್‌ ಪೀಡಿತ 9 ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ಬೆಳಗ್ಗೆ 7 ಗಂಟೆಯಿಂದ 3 ಗಂಟೆಯ ವರೆಗೆ ನಿಗದಿಪಡಿಸಲಾಗಿದ್ದರೆ, ಇತರ 61 ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆಯ ಅವಧಿಯನ್ನು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ನಿಗದಿ ಮಾಡಲಾಗಿದೆ. 18, 833 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 700ರಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ. ನ.7ರಂದು 20 ಕ್ಷೇತ್ರಗಳಿಗೆ ನಡೆದಿದ್ದ ಮೊದಲ ಹಂತದ ಮತದಾನದಲ್ಲಿ ಶೇ.78 ಮತದಾನವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next