Advertisement

ಎಂಡೋ ಸಂತ್ರಸ್ತರಿಗೆ ಆಶಾಕಿರಣದ ನಿರೀಕ್ಷೆಯಲ್ಲಿ ಮತದಾನ

01:04 PM May 13, 2018 | Team Udayavani |

ಆಲಂಕಾರು : ಎಂಡೋ ಸಂತ್ರಸ್ತರ ಪಾಲಿಗೆ ನೂತನ ಸರಕಾರ ಆಶಾಕಿರಣ ಆಗಬಹುದೆಂಬ ಮಹದಾಸೆಯಲ್ಲಿ ನನ್ನ ಮೂರು ಎಂಡೋ ಪೀಡಿತ ಮಕ್ಕಳನ್ನು ಕಷ್ಟದಲ್ಲಿ ತಂದು ಮತದಾನ ಮಾಡಿಸಿದ್ದೇನೆ ಎಂದು ಆಲಂಕಾರು ಗ್ರಾಮದ ಬುಡೇರಿಯಾ ನಿವಾಸಿ ರಾಜೀವಿ ನುಡಿದರು.

Advertisement

ತನ್ನ ಮೂವರು ಎಂಡೋ ಪೀಡಿತ ಮಕ್ಕಳಿಂದ ಮೊದಲ ಬಾರಿಗೆ ಶನಿವಾರ ಮತದಾನ ಮಾಡಿಸಿದ ಬಳಿಕ ಪತ್ರಿಕೆಯೊಂದಿಗೆ ಮಾತ ನಾಡಿದ ಅವರು, 36 ವರ್ಷದಿಂದ ಬರುತ್ತಿ ರುವ ಎಲ್ಲ ಚುನಾವಣೆಗಳಲ್ಲಿ ನಾನು ಮತದಾನ ಮಾಡಿದ್ದೇನೆ. ನನ್ನ ಮಕ್ಕಳು ಎಂಡೋ ಪೀಡಿತರು ಎಂದು ತಿಳಿದ ಮೇಲೆ ಮಕ್ಕಳ ಭವಿಷ್ಯದ ಹಿತಚಿಂತನೆಯಲ್ಲಿ ಯಾವ ಚುನಾವಣೆಯನ್ನೂ ತಪ್ಪಿಸದೆ ಮತದಾನ ಮಾಡಿದ್ದೇನೆ ಎಂದು ವಿವರಿಸಿದರು.

ಶಾಶ್ವತ ಪುನರ್ವಸತಿ ನಿರ್ಮಾಣವಾಗಲಿ
ಈ ಬಾರಿ ನನ್ನ ಮೂವರು ಮಕ್ಕಳನ್ನು ಕಷ್ಟದಲ್ಲಿ ತಂದು ಮತದಾನ ಮಾಡಿಸಿ ರುತ್ತೇನೆ. ನಾನು ಜೀವಂತವಿರುವಾಗ ನನ್ನ ಮಕ್ಕಳ ರಕ್ಷಣೆಯನ್ನು ಮಾಡುತ್ತೇನೆ. ನನ್ನ ಕಾಲಾನಂತರ ಮಕ್ಕಳ ಗತಿಯೇನು ಎಂಬ ಚಿಂತೆ ಇದೀಗ ಕಾಡತೊಡಗಿದೆ. ಸರಕಾರವೇ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕಾಗಿ ನೂತನ ಸರಕಾರ ಶೀಘ್ರರದಲ್ಲೇ ಎಂಡೋ ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಬೇಕು. ಈ ಕಾರಣ ಕ್ಕಾಗಿ ನನ್ನ ಮೂವರು ಮಕ್ಕಳನ್ನು ಕರೆತಂದು ಮತದಾನ ಮಾಡಿಸಿರುತ್ತೇನೆ. ಹೊಸ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದರು.

ಶ್ರೀಧರ ಗೌಡರ ಮಾತಿಗೆ ಬೆಲೆ ಕೊಟ್ಟಿದ್ದೇನೆ
ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಅವರ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ನಡೆದ ಎಂಡೋ ಸಂತ್ರಸ್ತರ ಸಮಾಲೋಚನ ಸಭೆಯಲ್ಲಿ ನಮ್ಮ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾವಿಸದೆ ಇದ್ದರೆ ಚುನಾವಣೆಯನ್ನು ಬಹಿಷ್ಕರಿಸುವುದು ಎಂದು ನಿರ್ಣಯಿಸಲಾಗಿತ್ತು. ಇದೀಗ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಎಂಡೋ ಸಂತ್ರಸ್ತರ ಬಗ್ಗೆ ಉಲ್ಲೇಖೀಸಿದ ಪರಿಣಾಮ ಮತ್ತು ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಈ ಬಾರಿಯ ಚುನಾವಣೆಯಲ್ಲಿ ಎಂಡೋ ಸಂತ್ರಸ್ತರು ಮತದಾನ ಮಾಡುತ್ತೇವೆ ಎಂದು ಘೋಷಿಸಿದ ಪ್ರಕಾರ ಮತದಾನಕ್ಕೆ ಆಗಮಿಸಿದ್ದೇನೆ. ಶ್ರೀಧರ ಗೌಡರ ಮಾತಿಗೆ ಬೆಲೆ ಕೊಟ್ಟಿದ್ದೇನೆ ಎಂದರು.

ಮೇ 29: ಮುಖ್ಯಮಂತ್ರಿ ಬೇಟಿ
ನೂತನ ಸರಕಾರ ಅಸ್ತಿತ್ವಕ್ಕೆ ಬಂದ ತತ್‌ಕ್ಷಣ ಮೇ 29ರಂದು ನೂತನ ಮುಖ್ಯ ಮಂತ್ರಿಗಳನ್ನು ನಿಯೋಗದೊಂದಿಗೆ ಭೇಟಿ ಯಾಗಿ ಎಂಡೋ ಸಂತ್ರಸ್ತರ ಬವಣೆಗಳನ್ನು ತಿಳಿಯಪಡಿಸಿ ಸೂಕ್ತ ಪರಿಹಾರ ನೀಡುವಂತೆ ಒತ್ತಡ ಹೇರಲಾಗುವುದು. ಜೂನ್‌ 15ರಂದು ಜಿಲ್ಲೆಯ ಎಲ್ಲ ಮಠಾಧೀಶರು, ಧರ್ಮಗುರುಗಳು ಹಾಗೂ ಇತರ ಧರ್ಮದ ಪ್ರಮುಖರ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ರೂಪುರೇಖೆಗಳನ್ನು ಸಿದ್ಧಪಡಿಸಿ, ಈ ಬಗ್ಗೆ ಆಗಸ್ಟ್‌ 1ರ ಒಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಮನವಿ ನೀಡಲಾಗುವುದು. ಆಗಸ್ಟ್‌ 1ರ ಒಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಆ15ರಂದು ನಿರ್ಣಾಯಕ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಕೊಕ್ಕಡ ಪತ್ರಿಕೆಗೆ ಪ್ರತಿಕ್ರಿಯಿಸಿದರು.

Advertisement

ಮೊದಲ ಮತದಾನ
ಕಳೆದ ಲೋಕಸಭಾ ಚುನಾವಣೆ ಯಲ್ಲಿ ನನ್ನ ಹಿರಿಮಗಳು ವಿದ್ಯಾ ಆಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರೂ ಕರೆತಂದು ಮತದಾನ ಮಾಡಿಸಿದ್ದೆ. ಆದರೆ, ಕಳೆದ ಬಾರಿಯ ಸರಕಾರ ಎಂಡೋ ಸಂತ್ರಸ್ತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ ಕಿಂಚಿತ್ತೂ ಸಹಾಯ ಮಾಡಿಲ್ಲ. ಈ ಬಾರಿ ಎಂಡೋ ಪೀಡಿತರಾದ ನನ್ನ ಇನ್ನಿಬ್ಬರು ಮಕ್ಕಳಾದ ದಿನೇಶ ಹಾಗೂ ದಿನಕರ ಅವರಿಗೆ ಮೊದಲ ಮತದಾನ. ಅವರನ್ನೂ ಕರೆತಂದು ಮತ ಹಾಕಿಸಿದ್ದೇನೆ ಎಂದು ರಾಜೀವಿ ಹೇಳಿದರು.

–  ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next