Advertisement

ಮತಯಂತ್ರ ಹ್ಯಾಕಿಂಗ್‌; ನಗೆಪಾಟಲಾದ ಪಕ್ಷಗಳು

12:51 PM Jun 05, 2017 | |

ಮತಯಂತ್ರಗಳು ಸುರಕ್ಷಿತ ಎಂದು ಆಯೋಗ ಸಾರಿ ಸಾರಿ ಹೇಳಿದರೂ ಕೇಳಿಸಿಕೊಳ್ಳದ ಪಕ್ಷಗಳು ಸೋಲಿನ ಹತಾಶೆಯಿಂದ ಮಿಥ್ಯಾರೋಪಗಳನ್ನು ಮಾಡಿರುವುದು ಈಗ ಜಗಜ್ಜಾಹೀರಾಗಿದೆ. 

Advertisement

ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಿ ತೋರಿಸಲು ಚುನಾವಣಾ ಆಯೋಗ ಒಡ್ಡಿದ ಸವಾಲನ್ನು ಸ್ವೀಕರಿಸದೆ ರಾಜಕೀಯ ಪಕ್ಷಗಳು ತಮ್ಮ ವಿಶ್ವಾಸಾರ್ಹತೆಯನ್ನು ತಾವೇ ಕಡಿಮೆ ಮಾಡಿಕೊಂಡಿವೆ. ನಿನ್ನೆ ದಿಲ್ಲಿಯಲ್ಲಿ ನಡೆದ ಮತಯಂತ್ರವನ್ನು ತಿರುಚುವ ಸವಾಲು ಅಥವಾ ಇವಿಎಂ ಹ್ಯಾಕಥಾನ್‌ನಲ್ಲಿ ಭಾಗವಹಿಸಿದ್ದು ಬರೀ ಎರಡು ಪಕ್ಷಗಳು ಮಾತ್ರ. ಮತಯಂತ್ರಗಳನ್ನು ತಿರುಚಲು ಸಾಧ್ಯ ಎಂದು ಹುಯಿಲೆಬ್ಬಿಸಿದ್ದ  ಯಾವ ಪ್ರಮುಖ ಪಕ್ಷವೂ ಇದರಲ್ಲಿ ಭಾಗವಹಿಸದೆ ತಮ್ಮ ಆರೋಪಗಳ ಹಿಂದೆ ಸಾಂವಿಧಾನಿಕ ವ್ಯವಸ್ಥೆಯೊಂದನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರವಿತ್ತು ಎಂಬುದನ್ನು ತಾವೇ ಒಪ್ಪಿಕೊಂಡಂತಾಗಿದೆ.

ಹ್ಯಾಕಥಾನ್‌ನಲ್ಲಿ ಭಾಗವಹಿಸಿದ್ದು ಎನ್‌ಸಿಪಿ ಮತ್ತು ಸಿಪಿಎಂ ಮಾತ್ರ. ಆದರೆ ಈ ಪಕ್ಷಗಳು ತಾವು ಆರೋಪಿಸಿದಂತೆ ಮತಯಂತ್ರಗಳನ್ನು ತಿರುಚುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಈ ಪಕ್ಷಗಳ ವತಿಯಿಂದ ಬಂದಿದ್ದ ತಲಾ ಮೂವರು ಪ್ರತಿನಿಧಿಗಳು ಚುನಾವಣಾ ಆಯೋಗ ನೀಡಿದ ಪ್ರಾತ್ಯಕ್ಷಿಕೆಯನ್ನು ನಾಲ್ಕು ತಾಸು ವೀಕ್ಷಿಸಿ ತೃಪ್ತಿ ವ್ಯಕ್ತಪಡಿಸಿದರು. ಅರ್ಥಾತ್‌ ಮತಯಂತ್ರಗಳನ್ನು ತಿರುಚಲು ಸಾಧ್ಯವಿಲ್ಲ ಎಂಬುದನ್ನು  ಈ ಎರಡು ಪಕ್ಷಗಳು ಕಣ್ಣಾರೆ ಕಂಡು ಖಚಿತಪಡಿಸಿಕೊಂಡಿವೆ. 

ಮತಯಂತ್ರಗಳನ್ನು ತಿರುಚಲಾ ಗಿದೆ ಎಂಬ ಆರೋಪ ಜೋರಾಗಿ ಕೇಳಿ ಬಂದದ್ದು ಮಾರ್ಚ್‌ನಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾದಾಗ. ಅದ ರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಉಳಿದೆಲ್ಲ ಪಕ್ಷಗಳನ್ನು ಧೂಳೀಪಟ ಮಾಡಿದಾಗ ಉಳಿದ  ಪಕ್ಷಗಳು ಮತಯಂತ್ರಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಹಿಗ್ಗಾಮುಗ್ಗಾ ಟೀಕಿಸತೊಡಗಿದವು. ಮಾಯಾವತಿಯ ಬಹುಜನ ಸಮಾಜ ಪಾರ್ಟಿ, ಅರವಿಂದ ಕೇಜ್ರಿವಾಲ್‌ರ ಆಪ್‌, ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಸಿಪಿಎಂ ಚುನಾವಣಾ ಆಯೋಗದ ವಿರುದ್ಧದ ಈ ಸಮರದ ಮುಂಚೂಣಿಯಲಿದ್ದವು. ಚುನಾವಣಾ ಆಯೋಗ ಮತಯಂತ್ರಗಳನ್ನು ತಿರುಚಿದ ಪರಿಣಾಮವಾಗಿ ಯಾವ ಗುಂಡಿ ಒತ್ತಿದರೂ ಮತ ಬಿಜೆಪಿಗೆ ಬೀಳುತ್ತಿತ್ತು. ಹೀಗಾಗಿ ಬಿಜೆಪಿ ಅತ್ಯಧಿಕ ಮತಗಳನ್ನು ಗಳಿಸಲು ಸಾಧ್ಯ ವಾಯಿತು ಎನ್ನುವುದು ಇವುಗಳ ಆರೋಪವಾಗಿತ್ತು. ಆಪ್‌ ಅಂತೂ ದಿಲ್ಲಿ ವಿಧಾನಸಭೆಯಲ್ಲಿ ತನ್ನದೇ ಮತಯಂತ್ರದ ಮಾದರಿಯನ್ನು ತಂದು ತಿರುಚಿ ತೋರಿಸಿ ತಾನು ಮಾಡಿದ ಆರೋಪದಲ್ಲಿ ಹುರು ಳಿದೆ ಎಂದು ನಂಬಿಸಲು ಪ್ರಯತ್ನಿಸಿತು. ಈ ಬೆಳವಣಿಗೆಯ ಬಳಿಕ ಚುನಾವಣಾ ಆಯೋಗ ಚುನಾವಣೆಯಲ್ಲಿ ಉಪಯೋಗಿಸಿದ ಮತಯಂತ್ರಗಳನ್ನೇ ಕೊಡುತ್ತೇವೆೆ. ಸಾಧ್ಯವಿದ್ದರೆ ತಿರುಚಿ ತೋರಿಸಿ ಎಂದು ಬಹಿರಂಗ ಸವಾಲು ಹಾಕಿತು. 

ಇವಿಎಂಗಳ ವಿಶ್ವಾಸಾರ್ಹತೆಯ ಮೇಲೆ ಅನುಮಾನ ಹೊಂದಿದ್ದ ಆಪ್‌, ಬಿಎಸ್‌ಪಿ, ಟಿಎಂಸಿ, ಕಾಂಗ್ರೆಸ್‌ ಮತ್ತಿತರ ಪಕ್ಷಗಳು ಹ್ಯಾಕಥಾನ್‌ನಲ್ಲಿ ಭಾಗವಹಿಸಬೇಕಿತ್ತು. ಮತಯಂತ್ರಗಳು ಸುರಕ್ಷಿತ ಎಂದು ಆಯೋಗ ಸಾರಿ ಸಾರಿ ಹೇಳಿದರೂ ಕೇಳಿಸಿಕೊಳ್ಳದ ಪಕ್ಷಗಳು ಸೋಲಿನ ಹತಾಶೆಯಿಂದ ಮಿಥ್ಯಾರೋಪಗಳನ್ನು ಮಾಡಿರುವುದು ಈಗ ಜಗಜ್ಜಾ ಹೀರಾಗಿದೆ. ಅದರಲ್ಲೂ ಸೋಲಿನಿಂದ ಕಂಗೆಟ್ಟಿದ್ದ ಆಪ್‌ ಇವಿಎಂ ಕುರಿತು ಮಾಡಿದ ಆರೋಪಗಳಿಗೆ ಲೆಕ್ಕವಿರಲಿಲ್ಲ. ಕೊನೆಗೆ ಚುನಾವಣಾ ಆಯೋಗ ಇವಿಎಂ ಹ್ಯಾಕಥಾನ್‌ ಮಾಡುವ ದಿನವೇ ತಾನೂ ಪ್ರತ್ಯೇಕವಾಗಿ ಹ್ಯಾಕಥಾನ್‌ ಮಾಡುವುದಾಗಿ ಹೇಳಿತು. ಈ ಹ್ಯಾಕಥಾನ್‌ ಕೂಡ ನಡೆಯದೆ ಆಪ್‌ ಬಂಡವಾಳ ಏನೆಂದು ಲೋಕಕ್ಕೆ ಗೊತ್ತಾಗಿದೆ.  ಆರೋಪ ಮಾಡುವ ಮೊದಲು ಯಾವುದೇ ಎಂಜಿನಿಯರ್‌ಗಳ ಅಭಿಪ್ರಾಯವನ್ನು ಪಡೆದುಕೊಂಡಿರಲಿಲ್ಲ. 

Advertisement

ಒಂದೇ ಸುಳ್ಳನ್ನು ನೂರು ಸಲ ಹೇಳಿದರೆ ನಿಜವಾಗುತ್ತದೆ ಎಂದು ನಂಬಿ ಪದೇ ಪದೇ ಇವಿಎಂಗಳ ಮೇಲೆ ಆರೋಪ ಹೊರಿಸಿ ಈಗ ನಗೆಪಾಟಲಿನ ವಸ್ತುವಾಗಿವೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಭಾರೀ ಮಹತ್ವವಿದೆ. ಅದು ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯುವುದು ಬಹಳ ಮುಖ್ಯ. ಚುನಾವಣೆ ನಡೆಸುವ ಸ್ವಾಯತ್ತ ವ್ಯವಸ್ಥೆಯ ಮೇಲೆಯೇ ಅನುಮಾನವಿದ್ದರೆ ಪ್ರಜಾಪ್ರಭಾತ್ವದ ಮೂಲ ಆಶಯವೇ ಕುಸಿಯುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಸವಾಲೊಡ್ಡಿ  ತನ್ನ ಮೇಲೆ ಮಾಡಿದ್ದ ಆರೋಪಗಳನ್ನು ಆಯೋಗ ತೊಳೆದುಕೊಂಡಿದೆ.
  
ಇನ್ನಾದರೂ ಪಕ್ಷಗಳು ಸಾಂವಿಧಾನಿಕ ಮಾನ್ಯತೆಯನ್ನು ಹೊಂದಿರುವ ಸ್ವಾಯತ್ತ ಸಂಸ್ಥೆಯೊಂದರ ಮೇಲೆ ಆರೋಪ ಹೊರಿಸುವ ಮೊದಲು ಅದರ ಸಾಧಕಬಾಧಕಗಳನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.

Next