Advertisement

ಮನೆಯಿಂದಲೇ ಮತದಾನ: ವಯೋವೃದ್ಧರೇ ಪ್ರೇರಣೆ

11:47 PM May 04, 2023 | Team Udayavani |

ಬೆಂಗಳೂರು: ಮತದಾನದ ಪ್ರಮಾಣವನ್ನು ಹೆಚ್ಚಿಸಲು 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ವಿನೂತನ ವ್ಯವಸ್ಥೆ ಜಾರಿಗೆ ತಂದಿರುವ ಚುನಾವಣ ಆಯೋಗ, ಈ ಪ್ರಯೋಗವನ್ನು ಯುವ ಮತದಾರರನ್ನು ಮತಗಟ್ಟೆಗೆ ಕರೆತರಲು ಪ್ರೇರಣಾಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

Advertisement

ಮನೆಯಿಂದಲೇ ಮತದಾನಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈವರೆಗೆ 70 ಸಾವಿರಕ್ಕೂ ಅಧಿಕ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರು ತಮ್ಮ ಮನೆಗಳಿಂದಲೇ ಮತದಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಆಯೋಗದ ಈ ಕ್ರಮವನ್ನು ಹಿರಿಯರು ಮುಕ್ತಕಂಠದಿಂದ ಶ್ಲಾ ಸಿದ್ದಾರೆ. ಈಗ ಈ ಶ್ಲಾಘನೆ ಮತ್ತು ಮೆಚ್ಚುಗೆಯನ್ನು ಮುಂದಿಟ್ಟುಕೊಂಡು ರಾಜ್ಯದ 11.71 ಲಕ್ಷ ಯುವ ಮತದಾರರನ್ನು (18-19 ವರ್ಷ) ಮತಗಟ್ಟೆಗೆ ಚುನಾವಣ ಆಯೋಗ ಆಹ್ವಾನಿಸುತ್ತಿದೆ.

ಈ ಮಧ್ಯೆ ಚುನಾವಣ ಆಯೋಗದ ವಿಶೇಷ ಪ್ರಯತ್ನಗಳು ಮತ್ತು ಕ್ರಮಗಳ ಪರಿಣಾಮ ಈ ಬಾರಿ ರಾಜ್ಯದಲ್ಲಿ ಯುವ ಮತದಾರರ ಸಂಖ್ಯೆ 11.71 ಲಕ್ಷ ಆಗಿದೆ. 2018ರಲ್ಲಿ ಯುವ ಮತದಾರರ ಸಂಖ್ಯೆ 8.24 ಲಕ್ಷ ಇತ್ತು. ಈ ವರ್ಷದ ಆರಂಭದಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಸುಮಾರು 4 ಲಕ್ಷಕ್ಕೂ ಅಧಿಕ ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು 94,652 ಯುವ ಮತದಾರರು ಇದ್ದಾರೆ. ಇದೇ ವೇಳೆ ರಾಜ್ಯದ 15 ಕ್ಷೇತ್ರಗಳಲ್ಲಿ 7ರಿಂದ 12 ಸಾವಿರದವರೆಗೆ ಅತೀ ಹೆಚ್ಚು ಯುವ ಮತದಾರರು ಇದ್ದಾರೆ.

ಯುವ ಮತದಾರರ ಸೇರ್ಪಡೆಗೆ ವಿಶೇಷ ಪ್ರಯತ್ನ
18-19 ವರ್ಷ ತುಂಬಿದ ಯುವ ಮತದಾರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಮತದಾರ ಪಟ್ಟಿ ಪರಿಷ್ಕರಣ ಅಭಿಯಾನದ ವೇಳೆ ವಿಶೇಷ ಒತ್ತು ಕೊಡಲಾಗಿತ್ತು. ಈ ದಿಸೆಯಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯವಾಗಿ ಮತದಾರರ ಪಟ್ಟಿಗೆ ಸೇರಲು ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಿರುವುದು ಹೆಚ್ಚು ಅನುಕೂಲವಾಗಿದೆ.

ಈ ಹಿಂದೆ ಮತದಾರರ ಪಟ್ಟಿಯಲ್ಲಿ ಸೇರಲು ಆಯಾ ವರ್ಷದ ಜನವರಿ 1ರಂದು 18 ವರ್ಷ ತುಂಬಬೇಕಿತ್ತು. ಕಳೆದ ವರ್ಷ ಲೋಕಸಭೆಯಲ್ಲಿ ತಿದ್ದುಪಡಿ ತಂದ ಪರಿಣಾಮ ಈಗ ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಜ. 1, ಎ. 1, ಜು. 1 ಮತ್ತು ಅಕ್ಟೋಬರ್‌ 1 ಅರ್ಹತಾ ದಿನಾಂಕವಾಗಿದೆ. ಅದರಂತೆ ಜ. 2ರ ಅನಂತರ ಎಪ್ರಿಲ್‌1ರ ವೇಳೆಗೆ 18 ವರ್ಷದ ತಲುಪಿದವರು 2023ರ ವಿಧಾನಸಭಾ ಚುನಾವಣೆಗೆ ಮತದಾನ ಮಾಡಲು ಅರ್ಹರಾಗಿದ್ದಾರೆ. ಇದರ ಪರಿಣಾಮ ಯುವ ಮತದಾರರ ಸಂಖ್ಯೆ 11.71 ಲಕ್ಷ ಆಗಿದೆ. ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಎಲೆಕಥಾನ್‌, ಹ್ಯಾಕಾಥಾನ್‌ ಮತ್ತು ಸಾಕ್ಷರತಾ ಕ್ಲಬ್‌ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಮುಂದಿನ ಐದು ವರ್ಷಗಳಿಗೆ ನಿಮಗಾಗಿ ನೀತಿ ರೂಪಿಸುವ ಸರಕಾರವನ್ನು ಆಯ್ಕೆ ಮಾಡುವ ಅವಕಾಶವನ್ನು ಚುನಾವಣೆ ಒದಗಿಸುತ್ತದೆ. ಆದ್ದರಿಂದ ಎಲ್ಲ ಯುವ ಮತದಾರರು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಕಡ್ಡಾಯವಾಗಿ ಮತ ಚಲಾಯಿಸಿ ತಮ್ಮ ಮುಂದಿನ ಸರಕಾರವನ್ನು ಆಯ್ಕೆ ಮಾಡಬೇಕು.
– ಮನೋಜ್‌ ಕುಮಾರ್‌ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ

~ ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next