ಹೊಸದಿಲ್ಲಿ : ಎನ್‌ಡಿಎ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮೀರಾ ಕುಮಾರ್ ಅವರು ಕಣದಲ್ಲಿರುವ ರಾಷ್ಟ್ರಪತಿ ಚುನಾವಣೆ ಆರಂಭಗೊಂಡಿದ್ದು ಮತದಾನ ಪ್ರಗತಿಯಲ್ಲಿದೆ.
ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ ಚಲಾಯಿಸಿದರು.
ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳೊಂದಿಗೆ ಕೈಜೋಡಿಸದೆ ಇರುವ ಜೆಡಿಯು ಮತ್ತು ಬಿಜು ಜನತಾ ದಳ (ಬಿಜೆಡಿ), ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಈಗಾಗಲೇ ಹೇಳಿವೆ. ಮಾತ್ರವಲ್ಲದೆ ತೆಲಂಗಾಣದಲ್ಲಿನ ಟಿಆರ್‌ಎಸ್, ಎಐಎಡಿಎಂಕೆ ಒಡೆದ ಬಣಗಳು, ವೈಎಸ್‌ಆರ್ ಕಾಂಗ್ರೆಸ್ ಕೂಡ ಎನ್‌ಡಿಎ ಅಭ್ಯರ್ಥಿಯನ್ನು ತಾವು ಬೆಂಬಲಿಸುವುದಾಗಿ ಹೇಳಿವೆ.
ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಅವರು ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ನಿರಾಯಾಸವಾಗಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
10.30ರ ಹೊತ್ತಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ಅಸೆಂಬ್ಲಿಗೆ ಆಗಮಿಸಿ ಮತ ಚಲಾಯಿಸಿದರು.
ಜೈಲಲ್ಲಿರುವ ಶಾಸಕರಾಗಿರುವ ಛಗನ್ ಭುಜ್‌ಬಲ್ ಮತ್ತು ರಮೇಶ್ ಕದಂ ಅವರನ್ನು ಮತ ಚಲಾಯಿಸಲು ಜೈಲಿನಿಂದ ಮಹಾರಾಷ್ಟ್ರ ವಿಧಾನಸಭೆಗೆ ಕರೆತರಲಾಗುವುದೆಂದು ಮೂಲಗಳು ತಿಳಿಸಿವೆ.
11 ಗಂಟೆಯ ಹೊತ್ತಿಗೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಎಂಪಿ ಅಸೆಂಬ್ಲಿಗೆ ಆಗಮಿಸಿ ಮತ ಚಲಾಯಿಸಿದರು. ಇದೇ ರೀತಿ ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್ ಅವರು ತಮಿಳು ನಾಡು ಅಸೆಂಬ್ಲಿಗೆ ಆಗಮಿಸಿ ಮತ ಚಲಾಯಿಸಿದರು.