Advertisement
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಸುಳ್ಯ ತಾಲೂಕಿನಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್‌ಗಳು ಹಲವು ಗ್ರಾಮಗಳಲ್ಲಿ ಕಂಡುಬಂದಿವೆ. ವಿಧಾನಸಭೆ ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಕ್ಷೇತ್ರದ ಅಲ್ಲಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರು, ಹಕ್ಕುಪತ್ರ ಮತ್ತಿತರ ಸಮಸ್ಯೆಗಳನ್ನು ಮುಂದಿಟ್ಟು ಮತದಾನ ಬಹಿಷ್ಕಾರ ನಿರ್ಧಾರದ ಬ್ಯಾನರ್ ಅಳವಡಿಸಲಾಗಿತ್ತು. ಇಂದಿನವರೆಗೂ ಅದು ಮುಂದುವರಿದಿದೆ.
ಆರಂಭದಲ್ಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳದ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಚುನಾವಣೆ ಘೋಷಣೆಯಾ ಗುತ್ತಿದ್ದಂತೆಯೇ ಎಚ್ಚೆತ್ತು ಈ ಗ್ರಾಮಗಳತ್ತ ದೃಷ್ಟಿ ಹರಿಸಿದ್ದಾರೆ. ಇನ್ನು ಬಹಿಷ್ಕಾರದ ಬ್ಯಾನರ್‌ಗಳು ಮತ್ತಷ್ಟು ಗ್ರಾಮಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ ಬಳಿಕವಂತೂ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಇದರ ಬಿಸಿ ತಟ್ಟತೊಡಗಿತು. ಆ ಬಳಿಕ ಇಂತಹ ಗ್ರಾಮಗಳಿಗೆ ತೆರಳಿ, ಅಲ್ಲಿನ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಡುವ ಮತ್ತು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡತೊಡಗಿದ್ದಾರೆ. ಕೆಲವು ಗ್ರಾಮಸ್ಥರು ಈ ಭರವಸೆಗಳಿಂದ ತೃಪ್ತರಾಗಿ ಬಹಿಷ್ಕಾರ ನಿರ್ಧಾರವನ್ನು ವಾಪಸ್ ಪಡೆದುಕೊಂಡರೆ ಮತ್ತೆ ಕೆಲವು ಗ್ರಾಮಗಳ ಸ್ಥಳೀಯರು ಯಾವುದಕ್ಕೂ ಮಣಿಯದೇ “ಕೆಲಸ ಆದರೆ ಬ್ಯಾನರ್ ತೆಗೆಯುತ್ತೇವೆ’ ಎಂದು ಪಟ್ಟು ಹಿಡಿಯುತ್ತಾರೆ. ಈ ಚುನಾವಣೆಯಲ್ಲೂ ಇಂಥ ಪ್ರಸಂಗಗಳು ನಡೆದಿವೆ. ಇದೀಗ ರಾಜಕೀಯ ಪಕ್ಷಗಳು ಮತ್ತು ನಾಯಕರಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನು ಕೆಲವೆಡೆ ಗ್ರಾಮಸ್ಥರು ಅಧಿಕಾರಿಗಳು ಮತ್ತು ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡ ಘಟನೆಗಳೂ ನಡೆದಿವೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ಮತದಾನ ಬಹಿಷ್ಕಾರ ಕೂಗಿನಿಂದಲೇ ಒಂದು ಹಂತದಲ್ಲಿ ಪ್ರಚಾರ ಪಡೆದಿದೆ ಎನ್ನಬಹುದು.
Related Articles
Advertisement
ಎಲ್ಲರೂ ಮತ ಚಲಾಯಿಸುವಂತೆ ಅಧಿಕಾರಿಗಳು, ರಾಜಕೀಯ ಪಕ್ಷಗಳು ಪ್ರಯತ್ನ ಪಡುತ್ತಿರುವುದು ಉತ್ತಮ ಕೆಲಸವೇ. ಆದರೆ ಚುನಾವಣೆ ಬಳಿಕ, ಅಧಿಕಾರ ಸಿಕ್ಕ ಮೇಲೂ ಜನರ ಸಮಸ್ಯೆ ನಿವಾರಣೆ, ಅಭಿವೃದ್ಧಿ ವಿಚಾರದಲ್ಲೂ ಇದೇ ಪ್ರಯತ್ನ ಇರಲಿ ಎಂಬ ಮಾತು ನಾಗರಿಕರದ್ದು.
- ದಯಾನಂದ ಕಲ್ನಾರ್