ಪಡುಬಿದ್ರಿ: ರಾಜ್ಯ ವಿಧಾನಸಭೆಗೆ ಮೇ 12ರಂದು ಮಾಡಲಿರುವ ಮತ ದಾನಕ್ಕೂ ಮುನ್ನ ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದೆ ನೀತಿವಂತರಾಗಿ ಯಾವುದೇ ಆಮಿಷಕ್ಕೊಳಗಾಗದೇ ಮತದಾನ ಮಾಡಬೇಕು. ಉತ್ತಮ ಆಡಳಿತಕ್ಕಾಗಿ ಉತ್ತಮ ಜನಪ್ರತಿನಿಧಿಗಳನ್ನು ಆರಿಸಿರಿ ಎಂದು ಉಡುಪಿ ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಅವರು ಎ. 25ರಂದು ಪಡುಬಿದ್ರಿಯ ಮಾರುಕಟ್ಟೆ ಪ್ರದೇಶದಲ್ಲಿ ಯಕ್ಷಗಾನದ ಮೂಲಕ ಮತದಾನ ಜಾಗೃತಿಯ ಕಾರ್ಯಕ್ರಮ, ಸ್ವೀಪ್ ಜಾಗೃತಿ ಕಾರ್ಯಕ್ರಮಗಳನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನೆರೆದಿದ್ದ ಮತದಾರರಿಗೆ ನೈತಿಕ ಮತದಾನದ ಕುರಿತಾದ ಪ್ರತಿಜ್ಞೆಯನ್ನು ಶಿವಾನಂದ ಕಾಪಶಿ ಅವರು ಬೋಧಿಸಿದರು. ಕಳೆದ ಬಾರಿಯ ಮತದಾನದ ವೇಳೆ ಅತೀ ಕಡಿಮೆ ಮತದಾನವಾಗಿದ್ದ ಕೇಂದ್ರಗಳನ್ನು ಆಧರಿಸಿ ಅಂತಹಾ ಕಡೆಗಳಲ್ಲಿ ಮತದಾನ ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿಯೂ ಅವರು ಹೇಳಿದರು.
ಮತದಾನ ಯಂತ್ರ ಮತ್ತು ವಿವಿ ಪ್ಯಾಟ್ ಯಂತ್ರಗಳ ಕುರಿತಾದ ಮಾಹಿತಿಯನ್ನು ಕಾಡೂರು ಪಿಡಿಒ ಮಹೇಶ್ ಮತ ದಾರರಿಗೆ ನೀಡಿದರು. ಮತದಾನಗೈದ 7 ಸೆಕೆಂಡುಗಳ ಅವಧಿಯಲ್ಲಿ ತಾವು ಯಾರಿಗೆ ಮತದಾನವನ್ನು ಮಾಡಿರುವಿರಿ ಎಂಬುದನ್ನು ಖಚಿತಪಡಿಸಿಕೊಂಡು ಮತಗಟ್ಟೆಯಿಂದ ಹೊರತೆರಳಿರಿ ಎಂಬ ಕಿವಿಮಾತನ್ನು ಮತದಾರರಿಗೆ ಅವರು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗ್ರೇಸಿ ಗೊನ್ಸಾಲ್ವಿಸ್, ಶಿಕ್ಷಣ ಇಲಾಖೆಯ ನಾಗೇಶ್ ಶ್ಯಾನುಭೋಗ್, ಪಡುಬಿದ್ರಿ ಪಿಡಿಒ ಪಂಚಾಕ್ಷರೀ ಸ್ವಾಮಿ, ಸಿಡಿಪಿಒ ವೀಣಾ ವೇದಿಕೆಯಲ್ಲಿದ್ದರು. ವಿಷಯ ಪರಿವೀಕ್ಷಣಾಧಿಕಾರಿ ನಾಗರಾಜ್, ಪಿಡಿಒಗಳಾದ ಪ್ರಮೀಳಾ, ಸತೀಶ್ ಸಹಕರಿಸಿದರು. ಕಾರ್ಯಕ್ರಮದಂತೆ ನೆರೆದಿದ್ದ ಮತ್ತು ವೀಕ್ಷಕ ಮತದಾರರಿಗೆ ಅನುಕೂಲವಾಗುವಂತೆ ಯಕ್ಷಗಾನದ ಮೂಲಕ ಮತದಾನದ ಜಾಗೃತಿಯನ್ನು ಕೋಟದ ಯಕ್ಷ ತಂಡದ ಬಂಧುಗಳು ಮನೋಜ್ಞವಾಗಿ ಅಭಿನಯಿಸಿದರು.