ಗ್ರಾಮೀಣ ಭಾಗಗಳಲ್ಲಿ ಚುನಾವಣೆಯನ್ನು ಹಬ್ಬದಂತೆ ಪರಿಗಣಿಸಿ ಮತದಾರರು ತಮ್ಮ ತಮ್ಮ ಪಕ್ಷದ ಪರವಾಗಿ ತಮ್ಮ ನಾಯಕನ ಪರವಾಗಿ ಪ್ರಚಾರ ಮಾಡಿ ಮತದಾನದ ದಿನ ಬೂತ್ ನಲ್ಲಿ ನಿಂತು ಕೆಲಸ ಮಾಡುವ ವೈಖರಿಯ ಸೊಗಸೇ ಬೇರೆ. ಆದರೆ ನಗರಪ್ರದೇಶಗಳಲ್ಲಿ ಈ ರೀತಿಯ ವಾತಾವರಣ ಕಾಣಸಿಗುವುದು ತುಸು ಅಪರೂಪವೆನ್ನಬಹುದೇನೋ?
Advertisement
ಇನ್ನು ಮತದಾನದ ದಿನವಂತೂ ಗ್ರಾಮೀಣ ಪ್ರದೇಶಗಳಲ್ಲಿ ಒಂದು ರೀತಿಯ ಸಡಗರದ ವಾತಾವರಣವೇ ಸಿದ್ಧಗೊಮಡಿರುತ್ತದೆ. ‘ಓಟು ಹಾಕಲು ಹೋಗ್ತೀನೆ’, ‘ಓಟ್ ಹಾಕಿ ಬಂದೆ’, ‘ನೀವು ಓಟ್ ಹಾಕ್ಲಿಲ್ವಾ’ ಎಂಬ ರೀತಿಯ ಸಂಭಾಷಣೆಗಳೇ ಆ ದಿನಪೂರ್ತಿ ನಮ್ಮ ಕಿವಿಗೆ ಬೀಳುತ್ತಿರುತ್ತದೆ.ಆದರೆ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ರಾಜಕೀಯ, ಮತದಾನ, ಚುನಾವಣೆ ವಿಚಾರಗಳ ಕುರಿತಾಗಿ ಜನಸಾಮಾನ್ಯರಲ್ಲಿ ಒಂದು ರೀತಿಯ ನಿರಾಸಕ್ತಿ ಇರುವುದನ್ನು ನಾವು ಗಮನಿಸಬಹುದು. 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಕಡಿಮೆ ಪ್ರಮಾಣದ ಮತದಾನ ಆಗಿರುವುದೂ ಇದಕ್ಕೆ ಸಾಕ್ಷಿಯಾಗಿದೆ.
ಇವರ ಹೆಸರು ಸುಮಿತ್ರಾ ರೇ. ಸಿಕ್ಕಿಂ ರಾಜ್ಯದ ಅತೀ ಹಿರಿಯ ಮತದಾರೆ ಎಂಬ ಹಿರಿಮೆ ಈ ಅಜ್ಜಿಯದ್ದು. ಮೊನ್ನೆ ಎಪ್ರಿಲ್ 11ರಂದು ನಡೆದ ಮೊದಲನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಈ ಅಜ್ಜಿ ವ್ಹೀಲ್ ಚಯರ್ ನಲ್ಲಿ ಮತದಾನ ಕೇಂದ್ರಕ್ಕೆ ಬಂದು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ‘ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದು’ ಎಂದು ತೋರಿಸಿಕೊಟ್ಟಿದ್ದಾರೆ. ಶತಮಾನ ಕಂಡಿರುವ ಈ ಅಜ್ಜಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ, ಇನ್ನು ನಮಗ್ಯಾಕೆ ಹಿಂಜರಿಕೆ ಅಲ್ವಾ..?
Related Articles
ಮತದಾನದ ದಿನ ಹಲವಾರು ವಿಶೇಷತೆಗಳು ವರದಿಯಾಗುತ್ತಲೇ ಇರುತ್ತವೆ. ಶತಾಯುಷಿಗಳು ಬಂದು ಮತ ಚಲಾಯಿಸುತ್ತಾರೆ, ಇನ್ಯಾರೋ ದಂಪತಿ ನೇರವಾಗಿ ಮದುವೆ ಮಂಟಪದಿಂದ ಬಂದು ಮತ ಚಲಾಯಿಸುತ್ತಾರೆ. ಇನ್ಯಾರೋ ಅನಾರೋಗ್ಯ ಸ್ಥಿತಿಯಲ್ಲಿದ್ದರೂ ಮತಗಟ್ಟೆಗೆ ಬರುತ್ತಾರೆ. ಹೀಗೆ ಮತಗಟ್ಟೆಗೆ ಮತಚಲಾಯಿಸಲು ಬರುವ ಅಶಕ್ತರಿಗೆ ಅವರ ಬಂಧುಗಳ ಸಹಾಯದ ಹೊರತಾಗಿ ಅಲ್ಲಿ ಕಾರ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿಗಳೂ ಸಹಾಯ ಮಾಡುತ್ತಾರೆ. ಬೇಕಾದರೆ ಈ ಚಿತ್ರಗಳನ್ನೇ ನೋಡಿ. ಇವರೆಲ್ಲಾ ನಮಗಾಗಿ ಸಹಾಯ ಮಾಡಲು ಸಿದ್ಧರಿದ್ದಾರೆ.. ನಾವು ಮತದಾನ ಕೇಂದ್ರದತ್ತ ಹೋಗುವುದೊಂದೇ ಬಾಕಿ…!
Advertisement
ನಮ್ಮನ್ನು ಕಾಯುವ ಯೋಧರೂ ಓಟ್ ಹಾಕಿದ್ದಾರೆ ; ಇನ್ನು ನಾವು??ಪ್ರಪಂಚದ ಅತೀ ಎತ್ತರದ ಸೇನಾನೆಲೆ ಎಂದೇ ಹೆಸರಾಗಿರುವ ಹಿಮಾಚ್ಛಾದಿತ ಸಿಯಾಚಿನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸೇನೆಯ ಯೋಧರು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯನಿರತ ಜವಾನರು ಮೊನ್ನೆ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಸೇವಾನಿರತ ಯೋಧರಿಗಾಗಿ ಚುನಾವಣಾ ಆಯೋಗವು ಪ್ರಪ್ರಥಮ ಬಾರಿಗೆ ವಿದ್ಯುನ್ಮಾನ ವರ್ಗಾವಣೆ ಮಾದರಿಯ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆಯನ್ನು ಮಾಡಿದೆ. ನಮ್ಮ ಸುರಕ್ಷತೆಗಾಗಿ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರೂ ಸಹ ತಮ್ಮ ಪಾಲಿನ ಮತದಾನದ ಕರ್ತವ್ಯವನ್ನು ನಿಭಾಯಿಸಿದ್ದಾರೆ, ಇನ್ಯಾಕೆ ತಡ ನಾವೂ ಹೋಗೋಣ ಮತಗಟ್ಟೆಯ ಕಡೆಗೆ ನಮ್ಮ ಹಕ್ಕಿನ ಚಲಾವಣೆಗೆ.
ಇದು ಅರುಣಾಚಲಪ್ರದೇಶದಲ್ಲಿರುವ ಮುಕ್ತೋ ವಿಧಾನಸಭಾ ಕ್ಷೇತ್ರ. ಈ ಪ್ರದೇಶ ಸಮುದ್ರಮಟ್ಟದಿಂದ ಬರೋಬ್ಬರಿ 13583 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿನ ಮತಗಟ್ಟೆಗೆ ಮತದಾನ ಯಂತ್ರಗಳನ್ನು ಮತ್ತು ಸಂಬಂಧಿತ ಪರಿಕರಗಳನ್ನು ಸಾಗಿಸಲು ಮತದಾನ ಸಿಬ್ಬಂದಿಗಳು ಸಾಕಷ್ಟು ಶ್ರಮಪಡುತ್ತಾರೆ. ಇದೇ ರೀತಿಯ ಹಲವಾರು ಮತದಾನ ಕೇಂದ್ರಗಳು ನಮ್ಮ ದೇಶದಲ್ಲಿವೆ. ಗುಡ್ಡಬೆಟ್ಟಗಳನ್ನು ದಾಟಿ, ಕೆಲವೆಡೆ ಕಿಲೋಮೀಟರ್ ಗಟ್ಟಲೇ ಕಾಲ್ನಡಿಗೆಯಲ್ಲೇ ಕ್ರಮಿಸಿ ಚುನಾವಣಾ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಇದಕ್ಕೆಲ್ಲಾ ಇರುವ ಕಾರಣ ಒಂದೇ ದೇಶದ ಕಟ್ಟಕಡೆಯ ಮತದಾರನಿಗೂ ಮತದಾನದ ಅವಕಾಶ ತಪ್ಪಿ ಹೋಗಬಾರದೆನ್ನುವುದು. ಹಾಗಿದ್ದರೆ ಅವರ ಶ್ರಮವನ್ನು ನಾವು ಗೌರವಿಸಬೇಕಾಗಿರುವುದು ನಾವು ನಮ್ಮ ಮತಗಟ್ಟೆಗೆ ಹೋಗಿ ನಮ್ಮ ಮತವನ್ನು ಚಲಾಯಿಸುವ ಮೂಲಕ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ತನಗೆ ಲಭ್ಯವಾಗಿರುವ ಮತದಾನದ ಹಕ್ಕನ್ನು ಚಲಾಯಿಸಿದ ಶತಾಯುಷಿ ಅಜ್ಜ ನಿವೃತ್ತ ಯೋಧರೊಬ್ಬರು ಮತ ಚಲಾಯಿಸಿದ ಖುಷಿಯಲ್ಲಿ. ನಾಗಾಲ್ಯಾಂಡ್ ನ ಮೊಕೊಕ್ ಚುಂಗ್ ಎಂಬ ಜಿಲ್ಲೆಯ ಮತದಾನ ಕೇಂದ್ರದಲ್ಲಿ ಕಂಡುಬಂದ ದೃಶ್ಯ. ದೇಶ ಸೇವೆ ಮಾಡಿ ಸೇವಾ ನಿವೃತ್ತಿ ಹೊಂದಿದ ಇವರು ತಮ್ಮ ಈ ಇಳಿವಯಸ್ಸಿನಲ್ಲೂ ಮತ ಚಲಾಯಿಸಿ ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ ಅಲ್ಲವೇ?
ಈ ಹಿರಿಯ ವ್ಯಕ್ತಿಯ ಮುಖದಲ್ಲಿರುವ ಭರವಸೆಯ ನಗುವನ್ನೊಮ್ಮೆ ನೋಡಿ. ನಮ್ಮನ್ನೂ ಮತದಾನಕ್ಕೆ ಪ್ರೇರೇಪಿಸುವಂತಿಲ್ಲವೇ? ಪಶ್ಚಿಮ ಸಿಕ್ಕಿಂನಲ್ಲಿ ಮೊನ್ನೆ ನಡೆದ ಪ್ರಥಮ ಹಂತದ ಮತದಾನದಲ್ಲಿ ಮತ ಚಲಾಯಿಸಿದ 72 ವರ್ಷದ ಬರ್ಧವನ್ ರೇ ಮತ ಚಲಾಯಿಸಿದ ಬಳಿಕ ನಕ್ಕಿದ್ದು ಹೀಗೆ. ನಿಮ್ಮ ಸಹಾಯಕ್ಕೆ ಮತದಾನ ಮಿತ್ರರಿದ್ದಾರೆ
‘ನಾನು ಮತ ಚಲಾಯಿಸುತ್ತೇನೆ’ ಎಂದು ನೀವೊಮ್ಮೆ ನಿರ್ಧರಿಸಿದರೆ ಸಾಕು ನಿಮ್ಮ ಸಹಾಯಕ್ಕೆ ಮತದಾನ ಕೇಂದ್ರದ ಬಳಿ ಮತದಾನ ಮಿತ್ರರಿದ್ದಾರೆ. ವಯಸ್ಸಾದ ಮತದಾರರಿಗೆ, ಅಶಕ್ತರಿಗೆ ಇವರು ತಮ್ಮ ಸಹಾಯ ಹಸ್ತವನ್ನು ನೀಡಲು ಮತದಾನದ ದಿನ ಬೆಳಿಗ್ಗೆ 7ರಿಂದ ಸಾಯಂಕಾಲ 6ರವರೆಗೆ ಸಿದ್ಧರಾಗಿರುತ್ತಾರೆ. ಹಾಗಾದರೆ ಇನ್ನೇಕೆ ತಡ ಮತದಾನ ಕೇಂದ್ರದತ್ತ ಹೊರಡೋಣ ನಮ್ಮ ಹಕ್ಕನ್ನು ಚಲಾಯಿಸೋಣ. ಮತದಾನ ಕೇಂದ್ರಗಳೂ ಸ್ಮಾರ್ಟ್ ಆಗಿವೆ ; ನಾವೂ ಮತದಾನ ಮಾಡಿ ಸ್ಮಾರ್ಟ್ ಆಗೋಣ!
ಹೌದು ಇತ್ತೀಚಿನ ದಿನಗಳಲ್ಲಿ ಮತದಾರರನ್ನು ಮತಗಟ್ಟೆಗೆ ಬರುವಂತೆ ಮಾಡಲು ಚುನಾವಣಾ ಆಯೋಗ ವಿವಿಧ ಪ್ರಯೋಗಗಳನ್ನು ಮಾಡುತ್ತಿದೆ. ಅವುಗಳಲ್ಲಿ ಈ ಸ್ಮಾರ್ಟ್ ಮಾದರಿ ಮತಗಟ್ಟೆ ಕೆಂದ್ರಗಳೂ ಒಂದು. ಇಲ್ಲಿ ನೀವು ಸರತಿ ಸಾಲಿನಲ್ಲಿ ಕಾಯಬೇಕಿಲ್ಲ. ಟೋಕನ್ ಪಡೆದು ಕೋಣೆಯೊಂದರಲ್ಲಿ ಕುಳಿತು ನಿಮ್ಮ ಸರತಿ ಬಂದಾಗ ಮತ ಚಲಾಯಿಸಿ ಬಂದರಾಯ್ತು. ಇನ್ನು ಪುಟ್ಟ ಮಕ್ಕಳಿದ್ದರೆ ನೀವು ಮತ ಚಲಾಯಿಸಿ ಬರುವತನಕ ನಿಮ್ಮ ಮಗುವನ್ನು ನೋಡಿಕೊಳ್ಳಲು ಶಿಶು ಕೇಂದ್ರಗಳೂ ಇಲ್ಲಿರುತ್ತವೆ. ಇನ್ನುಳಿದಂತೆ ಕುಡಿಯುವ ನೀರಿನ ವ್ಯವಸ್ಥೆಯೂ ಈ ಮಾದರಿ ಮತಕೇಂದ್ರಗಳಲ್ಲಿ ಇರಲಿದೆ. ಸದ್ಯಕ್ಕೆ ಆಯ್ದ ಮತಗಟ್ಟೆಗಳಲ್ಲಿ ಈ ಪ್ರಯೋಗ ನಡೆಯುತ್ತಿದೆ. ನಮ್ಮನ್ನು ಮತದಾನ ಕೇಂದ್ರಕ್ಕೆ ಬರುವಂತೆ ಮಾಡುವಲ್ಲಿ ಅಧಿಕಾರಿಗಳು ಎಷ್ಟೆಲ್ಲಾ ಶ್ರಮಪಡುತ್ತಿದ್ದಾರೆ ಅಲ್ವಾ?? ಇವರಲ್ಲಿರುವ ಮತದಾನದ ಹುಮ್ಮಸ್ಸನ್ನು ನೋಡಿ. ಸರಿಯಾದ ಮೂಲ ಸೌಕರ್ಯಗಳಿಲ್ಲದಿದ್ದರೂ ಕಾಲಕಾಲಕ್ಕೆ ಬರುವ ಚುನಾವಣೆಗಳಲ್ಲಿ ಇವರೆಲ್ಲಾ ತಪ್ಪದೇ ಮತದಾನ ಮಾಡುತ್ತಾರೆ. ಯಾಕೆಂದರೆ ಭವಿಷ್ಯದಲ್ಲಿ ತಮ್ಮ ಮಕ್ಕಳಿಗಾದರೂ ಒಳ್ಳೆಯದಾಗಬಹುದೆಂಬ ಭರವಸೆಯೇ ಇವರನ್ನು ಮತದಾನ ಕೇಂದ್ರದತ್ತ ಸಾಗುವಂತೆ ಮಾಡುತ್ತಿದೆ. ಅಸ್ಸಾಂ ರಾಜ್ಯದ ಮಜಿಲಿ ಎಂಬ ಜಿಲ್ಲೆಯಲ್ಲಿ ಸೆರೆಸಿಕ್ಕಿದ ದೃಶ್ಯ ಇದು.
ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಕರ್ತವ್ಯ. ಹಲವಾರು ಎಡರು ತೊಡರುಗಳನ್ನು ಎದುರಿಸಿ ದೇಶದ ವಿವಿಧ ಭಾಗಗಳಲ್ಲಿ ಮತದಾರರು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಕೆಲವು ಕಡೆ ಮತದಾನ ಮಾಡದಂತೆ ಮತದಾರರನ್ನು ಬೆದರಿಸುವ ವಿಚ್ಛಿದ್ರಕಾರಿ ಶಕ್ತಿಗಳ ಅಟ್ಟಹಾಸವನ್ನು ಮೆಟ್ಟಿನಿಂತು ಆ ಭಾಗದ ಮತದಾರರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಉದಾಹರಣೆ ನಮ್ಮ ಕಣ್ಣಮುಂದಿದೆ. ಹೀಗಿರುವಾಗ ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ನಾವೂ ಸಹ ಮತಗಟ್ಟೆಯ ಕಡೆ ಹೆಜ್ಜೆ ಹಾಕೋಣ. ಸಮರ್ಥ ಜನಪ್ರತಿನಿಧಿಯ ಆಯ್ಕೆಯಲ್ಲಿ ನಮ್ಮ ಪಾತ್ರವೂ ಇದೆ ಎಂಬುದನ್ನು ಮರೆಯದಿರೋಣ. ಹಾಗಾದರೆ, ನೆನಪಿಡಿ ಎಪ್ರಿಲ್ 18ರ ಗುರುವಾರದಂದು ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7ರಿಂದ ಸಾಯಂಕಾಲ 6ಗಂಟೆಯವರೆಗೆ ಮತದಾನ ನಡೆಯಲಿದೆ. ಹಾಗಾದರೆ ಬನ್ನಿ ನಮ್ಮ ನಮ್ಮ ಮತದಾನ ಕೇಂದ್ರಕ್ಕೆ ತೆರಳಿ ನಮ್ಮ ಹಕ್ಕನ್ನು ಚಲಾಯಿಸೋಣ.