Advertisement

ಭೂಮಿ, ನೀರು, ಆಕಾಶದಲ್ಲಿ ಮತದಾನ ಅರಿವು ಮೂಡಿಸಿದ ವಿಶೇಷಚೇತನರು

06:55 AM Apr 12, 2018 | Team Udayavani |

ಮಲ್ಪೆ: ಉಡುಪಿ ಜಿಲ್ಲೆಯ ವಿಶೇಷ ಚೇತನರು, ವಾಕ್‌ ಮತ್ತು ಶ್ರವಣ ದೋಷವುಳ್ಳ ಹಾಗೂ ಬುದ್ಧಿ ಮಾಂದ್ಯರಿಂದ ಮಲ್ಪೆ ಸಮುದ್ರ ತೀರದಲ್ಲಿ,ನೆಲ,ಆಗಸ ಮತ್ತು ಸಮುದ್ರದಲ್ಲಿ ಮತದಾನ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ  ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರ ಅಧ್ಯಕ್ಷತೆಯಲ್ಲಿ ರವಿವಾರ ಸಂಜೆ ನಡೆಯಿತು.

Advertisement

ವಾಕ್‌ ಮತ್ತು ಶ್ರವಣ ದೋಷವುಳ್ಳ ಯುವಕರು ಮತದಾನ ಜಾಗೃತಿ ಕುರಿತ ಭಿತ್ತಿಪತ್ರದೊಂದಿಗೆ ಪ್ಯಾರಾಸೈಲಿಂಗ್‌ ಮಾಡಿ, ವಿಶೇಷ ಚೇತನರು ತಮ್ಮ ವಾಹನಗಳಿಗೆ ಮತದಾನ ಜಾಗೃತಿ ಸಾರುವ ಭಿತ್ತಿಪತ್ರಗಳನ್ನು  ಅಳವಡಿಸಿಕೊಂಡು, ದ್ವಿ ಚಕ್ರ ರ್ಯಾಲಿ ಮೂಲಕ ಹಾಗೂ ಸಮುದ್ರದಲ್ಲಿ ದೋಣಿಯಲ್ಲಿ  ಪ್ರಯಾಣಿಸಿ ಭಿತ್ತಿ ಫ‌ಲಕಗಳನ್ನು ಪ್ರದರ್ಶಿಸುವ ಮೂಲಕ ನೆರದಿದ್ದ ಸಾವಿರಾರು ಮಂದಿ ಸಾರ್ವಜನಿಕರು ಹಾಗೂ ಪ್ರವಾಸಿಗರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಿದರು.

ವಿಕಲಚೇತನರಿಗೆ ವಾಹನ ವ್ಯವಸ್ಥೆ:
ಸಭಾ ಕಾರ್ಯಕ್ರಮದಲ್ಲಿ ಮಾತ ನಾಡಿದ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಇಂದು ನಡೆದ ಜಾಗೃತಿ ಆಭಿಯಾನ ಅತ್ಯಂತ ವಿಶಿಷ್ಟವಾದ ಕಾರ್ಯಕ್ರಮ. ಈ ಮೂಲಕ ಚುನಾವಣಾ ಆಯೋಗದ ಸಂದೇಶವಾದ, ಎಲ್ಲರನ್ನೂ ಒಳಗೊಂಡ, ಸುಗಮ್ಯ ನೈತಿಕ ಮತದಾನದ ಉದ್ದೇಶ ಈಡೇರಿದೆ. ಚುನಾವಣೆಯಲ್ಲಿ ಪ್ರತಿ ಯೊಬ್ಬ ಪ್ರಜೆಯೂ ಭಾಗವಹಿಸಬೇಕು ಎಂಬ ಉದ್ದೇಶದಿಂದ ಮತಗಟ್ಟೆಗಳಲ್ಲಿ, ಮತದಾರರಿಗೆ ಎಲ್ಲ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿದೆ, ವಿಶೇಷ ಚೇತನರಿಗಾಗಿ ರ್‍ಯಾಂಪ್‌ ಹಾಗೂ ವೀಲ್‌ ಚೇರ್‌ ವ್ಯವಸ್ಥೆ ಒದಗಿಸಲಾಗಿದೆ, ಮನೆಗಳಲ್ಲಿ ವಿಶೇಷಚೇತನ ಮತದಾರ ರಿದ್ದಲ್ಲಿ ಸಹಾಯವಾಣಿ ಸಂಖ್ಯೆಗೆ (0820-2574811) ಮಾಹಿತಿ ನೀಡಿದ್ದಲ್ಲಿ, ಮತದಾನದ ದಿನ ಮತಗಟ್ಟೆಗೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಮತದಾರರ ಹೊಸ ನೋಂದಣಿ ಮತ್ತು ತಿದ್ದುಪಡಿಗಾಗಿ ಮಿಂಚಿನ ಮತದಾನ ಎಂಬ ಆಭಿಯಾನ ಆರಂಭಿಸಲಾಗಿದೆ. ಈ ಆಭಿಯಾನದಲ್ಲಿ ಹೊಸದಾಗಿ ಹೆಸರು ಸೇರಿಸಲು ಮತ್ತು ಹೆಸರು ಬಿಟ್ಟು ಹೋಗಿದಲ್ಲಿ ಎ. 14ರ ವರೆಗೆ ಸೇರಿಸಲು ಅವಕಾಶವಿದೆ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳಬೇಕು. ಮತ್ತು ಮೇ 12 ರಂದು ಮತದಾನದಂದು ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಕಾಪಶಿ ಹೇಳಿದರು. 

ಪ್ಯಾರಾ ಸೇಲಿಂಗ್‌ನಲ್ಲಿ 10 ಮಂದಿ ಭಾಗವಹಿಸಿದ್ದು, ಒಂದು ವಾರದ ವರೆಗೆ ಗುರುತಿನ ಚೀಟಿ ತೋರಿಸಿ ವಿಶೇಷ ಚೇತನರು ಉಚಿತವಾಗಿ ಪ್ಯಾರಾ ಸೇಲಿಂಗ್‌ ಮಾಡಬಹುದಾಗಿದೆ . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್‌, ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣ ಇಲಾಖೆಯ ಅಧಿಕಾರಿ ನಿರಂಜನ್‌ ಭಟ್‌, ಅಶೋಕ್‌ ಕಾಮತ್‌ ಮತ್ತಿತರರು ಉಪಸ್ಥಿತರಿದ್ದರು.ಸಾರ್ವಜನಿಕರಿಗೆ ಮತ್ತು ವಿಕಲ ಚೇತನರಿಗೆ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಬಳಿಕ ವಿಕಲಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಪಿಡಿಒ ಮಹೇಶ್‌ ಸ್ವಾಗತಿಸಿ, ವಂದಿಸಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next