Advertisement

ವಿವೇಚನೆ ಬಳಸಿ ಯೋಗ್ಯರಿಗೆ ಮತ ನೀಡಿ: ಶಿವಾನಂದ ಕಾಪಶಿ

07:30 AM Apr 18, 2018 | Team Udayavani |

ಕಾಪು: ಚುನಾವಣಾ ಆಯೋಗವು ಈ ಬಾರಿ ನೈತಿಕ ಮತದಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ. ಪ್ರತಿಯೊಬ್ಬ ಮತದಾರರು ಕೂಡಾ ಯಾವುದೇ ರೀತಿಯ ಆಸೆ, ಆಮಿಷ, ಒತ್ತಡ, ಪ್ರಲೋಭನೆಗಳಿಗೆ ಒಳಗಾಗದೆ ತಮ್ಮ ಸ್ವಂತ ವಿವೇಚನೆ ಬಳಸಿ ಯೋಗ್ಯ ಅಭ್ಯರ್ಥಿಗೆ ಮತದಾನ ಮಾಡುವಂತೆ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ / ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಕರೆ ನೀಡಿದರು.

Advertisement

ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಮಂಗಳವಾರ ಕಾಪು ಪೇಟೆಯಲ್ಲಿ ನಡೆದ ಜಾಗೃತಿ ಜಾಥಾ, ಮಾನವ ಸರಪಳಿ ರಚನೆ ಮತ್ತು ಮೈಮ್‌ ಷೋ ಕಾರ್ಯಕ್ರಮ ನಡೆಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.

ಮತದಾನ ಸಂದರ್ಭದಲ್ಲಿ ಯಾವುದೇ ವ್ಯಕ್ತಿ, ಪಕ್ಷ ಅಥವಾ ಯಾವುದೇ ಮೂಲಗಳಿಂದ ಭಯ, ಒತ್ತಡ, ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತನ್ನಿ. ನಿಮ್ಮ ಸಮಸ್ಯೆಗೆ ಸ್ಪಂಧಿಸಲು ಜಿಲ್ಲಾಡಳಿತ ಸದಾ ಸಿದ್ಧವಿದೆ. ನೈತಿಕ  ಮತದಾನದ ಕುರಿತು ಇತರರಿಗೂ ಅರಿವು ಮೂಡಿಸುವಂತೆ ವಿನಂತಿದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಅಶೋಕ್‌ ಕಾಮತ್‌ ಅವರು ವಿವಿ ಪ್ಯಾಟ್‌ ಯಂತ್ರದ ಕುರಿತಂತೆ ಪ್ರಾತ್ಯಕ್ಷಿಕೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ ರಾಜ್‌, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಉಪಸ್ಥಿತರಿದ್ದರು.

ಮಾನವ ಸರಪಳಿ, ಜಾಗೃತಿ ಗೀತೆ
ಕಾಪು 3ನೇ ಮಾರಿಗುಡಿ ವಠಾರದಿಂದ ಲಕ್ಷ್ಮೀ ಜನಾರ್ದನ ದೇವಸ್ಥಾನದವರೆಗೆ ನಡೆದ ಜಾಥಾದಲ್ಲಿ  ಸುಮಾರು 400 ಕ್ಕೂ ಅಧಿಕ ಮಂದಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಮತದಾನದ ಬಗ್ಗೆ ಪ್ಲೇ ಕಾರ್ಡ್‌ ಮತ್ತು ಮಾಹಿತಿ ಫಲಕಗಳ ಪ್ರದರ್ಶನ, ಆಯೋಗದಿಂದ ನೀಡಿದ ಜಾಗೃತಿ ಗೀತೆಗಳನ್ನು ಮೊಳಗಿಸಲಾಯಿತು. ಮಾನವ ಸರಪಳಿ ರಚಿಸಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಸಂದೇಶವನ್ನು ಬಿತ್ತರಿಸಲಾಯಿತು.

Advertisement

ಉಡುಪಿ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ ಸ್ವಾಗತಿಸಿದರು. ಪ್ರಮೀಳಾ ವಂದಿಸಿದರು. ಪಿಡಿಒ ಮಹೇಶ್‌ ನಿರೂಪಿಸಿದರು. 

ಮತ ಖಾತರಿಗೆ ವಿವಿ ಪ್ಯಾಟ್‌
ಮತಯಂತ್ರದ ಬಗ್ಗೆ ಜನರಲ್ಲಿ ಗೊಂದಲ ಇರುವುದರಿಂದ ಈ ಬಾರಿ ಚುನಾವಣೆಯಲ್ಲಿ ವಿವಿ ಪ್ಯಾಟ್‌ ಯಂತ್ರ ಅಳವಡಿಸಲಾಗುತ್ತಿದೆ. ಇದರಿಂದ ಮತ ಯಾರಿಗೆ  ಚಲಾವಣೆಯಾಗಿದೆ ಎಂಬ ಬಗ್ಗೆ ಸ್ಥಳದಲ್ಲೇ ಖಾತರಿ ಸಿಗಲಿದೆ. ಈ ವಿವಿ ಪ್ಯಾಟ್‌ ಯಂತ್ರಗಳ ಕಾರ್ಯ ನಿರ್ವಹಣೆ ಕುರಿತಂತೆ ಜಿಲ್ಲೆಯಾದ್ಯಂತ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆ  ಮೂಲಕ ಅರಿವು ಮೂಡಿಸಲಾಗುತ್ತಿದೆ
– ಶಿವಾನಂದ ಕಾಪಶಿ,ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next