ಬೆಂಗಳೂರು: ರಾಜಧಾನಿಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹಾಗೂ ವಿವಿಧ ಸಂಘ ಸಂಸ್ಥೆಗಳು ಹಲವು ರೀತಿಯಲ್ಲಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಬೆಂಗಳೂರು ವಿಶ್ವವಿದ್ಯಾಲಯವು ವ್ಯಾಪಕವಾಗಿ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಈಗಾಗಾಲೇ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಉಪಸ್ಥಿತಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಾದ ನಂತರ ಜ್ಞಾನಭಾರತಿ ಕ್ಯಾಂಪಸ್‌ನ ಬಹುತೇಕ ವಿಭಾಗದಲ್ಲಿ ಪ್ರತ್ಯೇಕವಾಗಿ ಮತದಾನದ ಅರಿವು ಮೂಡಿಸುವ ಕಾರ್ಯ ಆರಂಭಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ.
ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಸಂದೇಶ ರವಾನೆ ಮಾಡಿದ್ದು, ವಿಭಾಗಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲು ತಿಳಿಸಿದೆ. ಹಾಗೇ ವಿಶ್ವವಿದ್ಯಾಲಯದಿಂದಲೇ ಇನ್ನೊಂದು ಕಾರ್ಯಕ್ರಮ ಬೃಹತ್ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಜಾಗೃತರಾದರೆ, ಮತದಾನದ ಪ್ರಮಾಣ ಏರಿಕೆಯಾಗುತ್ತದೆ. ಯಾರಿಗೆ ಮತದಾನ ಮಾಡಿ ಎಂದು ನಾವೂ ಎಲ್ಲಿಯೂ ಹೇಳುವುದಿಲ್ಲ. ಆದರೆ, ಮತದಾನದ ದಿನ ಮತದಾನ ಕೇಂದ್ರಕ್ಕೆ ಹೋಗಿ ಮತಚಾಲಾಯಿಸುವಂತೆ ಅರಿವು ಮೂಡಿಸುತ್ತಿದ್ದೇವೆ. ಹಾಸ್ಟೆಲ್ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಇದನ್ನು ಹೇಳಿದ್ದೇವೆ ಹಾಗೂ ಸ್ನೇಹಿತರು, ಕುಟುಂಬ ಸದಸ್ಯರನ್ನೂ ಮತದಾನಕ್ಕೆ ಕರೆದೊಯ್ಯುವಂತೆ ತಿಳಿಸುತ್ತಿದ್ದೇವೆ ಎಂದು ಪ್ರಾಧ್ಯಾಪಕರು ಮಾಹಿತಿ ನೀಡಿದರು.
ಹಾಗೇ ವಿಶ್ವವಿದ್ಯಾಲಯ ವ್ಯಾಪ್ತಿಯ ಹಲವು ಕಾಲೇಜುಗಳಲ್ಲೂ ಅರಿವು ಕಾರ್ಯ ಆರಂಭಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಇದರಲ್ಲಿ ತೊಡಗಿಸಿಕೊಂಡಿವೆ. ಈ ಹಿಂದೆ ಕಾಲೇಜುಗಳಿಂದಲೇ ನೇರವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಿತ್ತು. ಬಹುತೇಕ ವಿದ್ಯಾರ್ಥಿಗಳು ಕಾಲೇಜಿನಲ್ಲೇ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡಿದ್ದರು.
ಮತದಾನ ಜಾಗೃತಿಗೆ ಈಗಾಗಲೇ ಬೃಹತ್ ಕಾರ್ಯಕ್ರಮ ಮಾಡಿದ್ದೇವೆ. ವಿಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಚುನಾವಣೆಗೆ ಮುನ್ನ ಮತ್ತೂಂದು ಕಾರ್ಯಕ್ರಮ ಆಯೋಜಿಸಲು ಚರ್ಚಿಸುತ್ತಿದ್ದೇವೆ.
-ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ
* ರಾಜು ಖಾರ್ವಿ ಕೊಡೇರಿ