Advertisement

ರೈಲು ನಿಲ್ದಾಣದಲ್ಲಿ ಮತದಾನ ಜಾಗೃತಿ

12:37 AM Apr 13, 2019 | Lakshmi GovindaRaju |

ಬೆಂಗಳೂರು: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಕೇಂದ್ರ ಹಾಗೂ ಚುನಾವಣಾ ಆಯೋಗದ ಸಹಯೋಗದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಶುಕ್ರವಾರ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Advertisement

ಭಾನುವಾರದವರೆಗೆ ನಡೆಯುವ ಕಾರ್ಯಕ್ರಮಕ್ಕೆ ಬಿಬಿಎಂಪಿ ಹಾಗೂ ರೈಲ್ವೆ ಇಲಾಖೆ ಸಹಕಾರ ನೀಡಿದ್ದು, ನಿಲ್ದಾಣದ ವಿವಿಧ ಭಾಗಗಳಲ್ಲಿ ಜಾಗೃತಿ ಮೂಡಿಸುವ ಛಾಯಾಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಜತೆಗೆ ಮತದಾನ ದಿನದಂದು ಹೊಸ ಮತದಾರರಿಗೆ ಉಂಟಾಗುವ ಗೊಂದಲ ನಿವಾರಣೆಗಾಗಿ ಅಣುಕು ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ.

ಜಾಗೃತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಮತದಾನವು ಸಂವಿಧಾನ ಕೊಟ್ಟಿರುವ ಹಕ್ಕು ಮಾತ್ರವಲ್ಲ, ಪ್ರತಿಯೊಬ್ಬರ ಕರ್ತವ್ಯ ಕೂಡ.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಮತವೂ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದಿನ ನಿತ್ಯದ ಸಾಕಷ್ಟು ಚಟುವಟಿಕೆಗಳ ಕುರಿತು ನೀತಿ-ನಿಯಮ ರೂಪಿಸುವಲ್ಲಿ, ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಪ್ರಮುಖ ಪಾತ್ರವಹಿಸುತ್ತಾರೆ.

ಹೀಗಾಗಿ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲಿದೆ. ಕರ್ನಾಟಕದಲ್ಲಿ ಏ.18ರಂದು 14 ಲೋಕಸಭಾ ಕ್ಷೇತ್ರದಲ್ಲಿ, ಏ.23ರಂದು ಉಳಿದ 14 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಈ ಪ್ರಜಾತಂತ್ರ ಹಬ್ಬದಲ್ಲಿ ಭಾಗವಹಿಸಬೇಕು ಎಂದರು.

Advertisement

ನಗರದ ಮತದಾರರು ಎಚ್ಚೆತ್ತುಕೊಳ್ಳಿ: ನೈತಿಕ ಮತದಾನ ಮುಖ್ಯವಾಗಿದ್ದು, ಆ ದಿಸೆಯಲ್ಲಿ ಎಲ್ಲಾ ಮತದಾರರು ಯೋಚಿಸಬೇಕು. ಮತದಾನದ ಗೌಪ್ಯತೆ ವಿಚಾರದಲ್ಲಿ ಚುನಾವಣಾ ಆಯೋಗ ಸಾಕಷ್ಟು ಜಾಗೃತಿ ವಹಿಸಲಿದೆ. ನಿಮ್ಮ ಮತ ಕುರಿತು ಯಾರಿಗೂ ಗೊತ್ತಾಗುವುದಿಲ್ಲ. ಹೀಗಾಗಿ, ಯಾರೂ ಭಯಪಡದೆ, ಆಮಿಷಕ್ಕೆ ಒಳಗಾಗಗದೇ ಮತದಾನ ಮಾಡಬೇಕು.

ಅಂತೆಯೇ ಮತದಾರರು ಕೂಡ ತಮ್ಮ ಮತದ ಗೌಪ್ಯತೆ ಕಾಪಾಡಿಕೊಳ್ಳಬೇಕು. ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಸಾಕಷ್ಟು ಕಡಿಮೆ ಇದೆ. ಈ ಬಾರಿಯಾದರೂ ಸಿಲಿಕಾನ್‌ ಸಿಟಿ ಮತದಾರರು ಎಚ್ಚೆತ್ತುಕೊಂಡು ಮತ ಚಲಾಯಿಸಬೇಕು ಎಂದು ತಿಳಿಸಿದರು.

ವೆಬ್‌ಸೈಟ್‌ಗೆ ಭೇಟಿ ನೀಡಿ ಪರಾಮರ್ಶಿಸಿ: ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌; https://ceokarnataka.kar.nic.in/ನಲ್ಲಿ ಕ್ಷೇತ್ರವಾರು ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಸಲ್ಲಿಸಿರುವ ಆಫಿಡವಿಟ್‌ ಇದೆ. ಇದರಲ್ಲಿ ಅಭ್ಯರ್ಥಿಯ ಹಿನ್ನೆಲೆ, ಆಸ್ತಿ ವಿವರ, ಕಳೆದ ಐದು ವರ್ಷಗಳಲ್ಲಿ ಗಳಿಸಿದ ಆದಾಯ ಸೇರಿದಂತೆ ಕ್ರಿಮಿನಲ್‌ ಅಪರಾಧಗಳ ಕುರಿತು ಮಾಹಿತಿ ಇರುತ್ತದೆ. ಸುಶಿಕ್ಷಿತರು ಜಾಲತಾಣಕ್ಕೆ ಭೇಟಿ ನೀಡಿ ಎಲ್ಲ ಮಾಹಿತಿ ಪರಾಮರ್ಶಿಸಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.

ಪಿಐಬಿ ಹೆಚ್ಚುವರಿ ನಿರ್ದೇಶಕ ಎಂ.ನಾಗೇಂದ್ರ ಸ್ವಾಮಿ ಮಾತನಾಡಿ, ಕಾಂತ್ರಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣದಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬಂದು ಹೋಗುತ್ತಾರೆ. ಹೀಗಾಗಿ, ಇಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡು ಈ ಬಾರಿಯ ಚುನಾವಣೆ ಮಾಹಿತಿ, ಹೊಸ ನಿಯಮಗಳು ಹಾಗೂ ಮತದಾನ ಎಷ್ಟು ಸರಳ ಎಂಬ ಕುರಿತು ಜನರಿಗೆ ಸಂಪೂರ್ಣ ಮಾಹಿತಿ ನೀಡಬಹುದು ಎಂದರು.

ಜಾನಪದ ಗೀತೆ ಮೂಲಕ ಜಾಗೃತಿ: “ಮತದಾನ ಮಾಡೋಣ ನಾವೆಲ್ಲ… ಬನ್ನಿರಿ ತಪ್ಪದೆ ನೀವೆಲ್ಲ’, “ಮತದಾನ ಮಾಡೋಣ…’, “ಉಘೇ ಎನ್ನಿರಿ ಪ್ರಜಾಪ್ರಭುತ್ವಕ್ಕೆ…’ ಎಂಬಿತ್ಯಾದಿ ಕಸಾಳೆ ಹಾಡುಗಳು ನಗರದ ರೈಲು ನಿಲ್ದಾಣದಲ್ಲಿ ಇನ್ನು ಮೂರು ದಿನ ಮೊಳಗಲಿವೆ. ಮತದಾನ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಜಾನಪದ ತಂಡವು ವಿಶೇಷ ಹಾಡುಗಳ ಮೂಲಕ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಈಗಾಗಲೇ ಇರುವ ಜಾನಪದ ಹಾಡುಗಳ ಸಾಹಿತ್ಯವನ್ನು ಬದಲಿಸಿರುವ ಜಾನಪದ ಕಲಾವಿದ ಲಿಂಗಯ್ಯ ಮತ್ತು ತಂಡದವರು ಅವುಗಳನ್ನು ಹಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಇದೇ ವೇಳೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲದ ಯೋಜನಾ ಪುಸ್ತಕ ಹಾಗೂ ಕೇಂದ್ರ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಸೇರಿದಂತೆ 2019ರ ಲೋಕಸಭಾ ಚುನಾವಣೆಯ ಸಂಪೂರ್ಣ ಮಾಹಿತಿ ಕುರಿತಂತೆ ಬಿಡುಗಡೆ ಮಾಡಿರುವ ಮಾಹಿತಿ ಪುಸ್ತಕದ ಕನ್ನಡ ಆವೃತಿಯನ್ನು ಬಿಡುಗಡೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next