ಮಂಗಳೂರು: ಪ್ರಯಾಣಿಕರಿಗೆ ಸದಾ ಉತ್ತಮ ಸೇವೆ ನೀಡುತ್ತಿರುವ ನಂ. 1 ಸಾರಿಗೆ ಇಲಾಖೆಯಾದ ಕೆಎಸ್‌ಆರ್‌ಟಿಸಿ ಇದೀಗ ಸಾರ್ವಜನಿಕರಿಗೆ ಮತದಾರರ ಜಾಗೃತಿ ಮೂಡಿಸಲು ಮುಂದಾಗಿದೆ.
ಕೆಎಸ್‌ಆರ್‌ಟಿಸಿ ಎಲ್ಲ ಡಿಪೋಗಳಿಂದ ಹೊರಡುವ ಬಸ್ ಟಿಕೆಟ್‌ನಲ್ಲಿ “ಮೇ 12ರಂದು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ’ ಎಂದು ನಮೂದು ಮಾಡಲು ನಿಗಮ ತೀರ್ಮಾನ ಮಾಡಿದೆ.
ಈ ಬಗ್ಗೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಅಧಿಕಾರಿ ದೀಪಕ್ ಕುಮಾರ್ ಅವರು “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿ “ಮಂಗಳೂರು ಡಿಪೋದಿಂದ ಹೊರಡುವ ಎಲ್ಲ ಬಸ್‌ಗಳಲ್ಲಿ ನೀಡುವ ಟಿಕೆಟ್‌ನಲ್ಲಿ ಮತದಾರ ಜಾಗೃತಿ ಅರಿವು ಮೂಡಿಸುವ ಬರಹ ಅಳವಡಿಸಲಾಗುತ್ತಿದೆ. ಸದ್ಯ ಕೆಲವು ರೂಟ್‌ಗಳಲ್ಲಿ ಅಳವಡಿಸಲಾಗಿದೆ. ಉಳಿದ ರೂಟ್‌ನ ಬಸ್ ಇಟಿಎಂ ಯಂತ್ರಗಳಿಗೆ ಅಪ್‌ಡೇಟ್ ಮಾಡಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಪ್ರತೀ ದಿನ ಕೆಎಸ್‌ಆರ್‌ಟಿಸಿ 8,800 ಬಸ್‌ಗಳು ಕಾರ್ಯಾಚರಿಸುತ್ತಿವೆ. ಒಟ್ಟಾರೆಯಾಗಿ 28.45 ಲಕ್ಷ ಮಂದಿ ಪ್ರಯಾಣಿಕರು ದಿನಂಪ್ರತಿ ಪ್ರಯಾಣ ಮಾಡುತ್ತಿದ್ದಾರೆ. ಇದರಲ್ಲಿ ಶೇ. 20ರಷ್ಟು ಮಂದಿ ಮುಂಗಡ ಬುಕ್ಕಿಂಗ್ ಮುಖಾಂತರ ಟಿಕೆಟ್ ಕಾಯ್ದಿರಿಸಿ ಪ್ರಯಾಣ ಮಾಡುತ್ತಾರೆ. ಉಳಿದ 22 ಲಕ್ಷ ಪ್ರಯಾಣಿಕರು ನಿರ್ವಾಹಕರಿಂದ ಟಿಕೆಟ್ ಪಡೆದು ಪ್ರಯಾಣ ಮಾಡುತ್ತಾರೆ. ಮತದಾನ ಸಂದೇಶವು ಪ್ರತೀ ದಿನ 22 ಲಕ್ಷ ಟಿಕೆಟ್‌ಗಳಲ್ಲಿ ಮುದ್ರಿತವಾಗುತ್ತದೆ. ಜಿಲ್ಲಾಡಳಿತದಿಂದಲೂ ಮತದಾನ ಜಾಗೃತಿಗೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಬಸ್ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಮತದಾನದ ಅರಿವು ಮೂಡಿಸುವ ಪೋಸ್ಟರ್ ಅಂಟಿಸಲಾಗಿದೆ.