ದೇಶದ ಯುವಪೀಳಿಗೆ ಪ್ರಜಾಪ್ರಭುತ್ವ ಮತ್ತು ಮತದಾನದ ಬಗೆಗೆ ಅರ್ಥೈಸಿಕೊಂಡು, ಹಕ್ಕು ಚಲಾವಣೆಯ ಸಂದರ್ಭದಲ್ಲಿ ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗ ವಿನೂತನ ಚಿಂತನೆಯೊಂದನ್ನು ದೇಶದ ಮುಂದಿಟ್ಟಿದೆ. ಪ್ರಜಾಪ್ರಭುತ್ವದ ಮೂಲೋದ್ದೇಶ, ಇದರ ಪ್ರಯೋಜನ, ಮಹತ್ವ ಮತ್ತು ದೇಶದ ಭವಿಷ್ಯ ರೂಪಣೆಯಲ್ಲಿ ಮತದಾನ ವಹಿಸುವ ಪಾತ್ರದ ಕುರಿತಂತೆ 9ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಂಬಂಧ ಶಿಕ್ಷಣ ಇಲಾಖೆಯೊಂದಿಗೆ ಅತೀ ಶೀಘ್ರದಲ್ಲಿಯೇ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚಿನ ದಶಕಗಳಲ್ಲಿ ಯುವ ಮತದಾರರನ್ನು ಮತದಾನ ಕೇಂದ್ರಗಳತ್ತ ಸೆಳೆಯುವ ಸಲುವಾಗಿ ಆಯೋಗ, ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಚುನಾವಣೆ ಸಂದರ್ಭದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಆಯೋಗದ ಈ ಪ್ರಯತ್ನದಿಂದಾಗಿ ಕಳೆದ ಕೆಲವು ವರ್ಷಗಳಿಂದೀಚೆಗೆ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇದೇ ವೇಳೆ ಮತದಾನಕ್ಕೆ ನಿಗದಿಪಡಿಸಲಾಗಿರುವ 18 ವರ್ಷ ತಲುಪುವ ವೇಳೆಗೆ ಪ್ರತಿಯೋರ್ವನೂ ಪ್ರಜಾಪ್ರಭುತ್ವ, ಮತದಾನ ಮತ್ತಿತರ ವಿಷಯಗಳ ಬಗೆಗೆ ಪ್ರಾಥಮಿಕ ಜ್ಞಾನವನ್ನು ಹೊಂದಿದ್ದರೆ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಸದೃಢವಾಗಿ ಬೆಳೆಯಲು ಸಾಧ್ಯ. ನೂರು ಪ್ರತಿಶತ ಮತದಾನದ ಗುರಿಯ ಜತೆಜತೆಯಲ್ಲಿ ಅರ್ಹ ಮತ್ತು ಸಮರ್ಥ ಅಭ್ಯರ್ಥಿಗಳ ಆಯ್ಕೆಯೂ ಅತೀಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಈ ಚಿಂತನೆ ಸ್ವಾಗತಾರ್ಹ ಮಾತ್ರವಲ್ಲದೆ ದೂರದೃಷ್ಟಿಯಿಂದ ಕೂಡಿದ್ದಾಗಿದೆ.
ಪ್ರಜಾಪ್ರಭುತ್ವ ಮಾದರಿ ಆಡಳಿತದಲ್ಲಿ ಮತದಾನ ದೇಶದ ಪ್ರತಿಯೋರ್ವ ವಯಸ್ಕ ಪ್ರಜೆಯ ಹಕ್ಕಾಗಿದ್ದು ಚುನಾವಣೆ ವೇಳೆ ಪ್ರತಿಯೋರ್ವ ಅರ್ಹ ಮತದಾರ ತನ್ನ ಹಕ್ಕನ್ನು ತಪ್ಪದೆ ಚಲಾಯಿಸಬೇಕು. ಅಲ್ಲದೆ ಮತ ಚಲಾವಣೆ ವೇಳೆ ತನ್ನ ಪ್ರತಿನಿಧಿಯಾಗಲು ಯಾರು ಅರ್ಹ ಎಂಬುದನ್ನು ನಿರ್ಧರಿಸುವಷ್ಟು ಸಾಮರ್ಥ್ಯವನ್ನು ಆತ ಹೊಂದಿರಬೇಕು. ಇದೇ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಪ್ರೌಢ ಶಾಲಾ ಹಂತದ ಪಠ್ಯಗಳಲ್ಲಿ ಸೇರ್ಪಡೆಗೊಳಿಸುವ ಇಂಗಿತವನ್ನು ಮುಖ್ಯ ಚುನಾವಣಾ ಆಯುಕ್ತರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆಯೊಂದಿಗೆ ತಿಳಿವಳಿಕಾ ಒಪ್ಪಂದಕ್ಕೆ ಆಯೋಗ ಅಂಕಿತ ಹಾಕಲಿದೆ ಎಂದವರು ತಿಳಿಸಿದ್ದಾರೆ.
ಪ್ರೌಢ ಹಂತದಲ್ಲಿಯೇ ಮಕ್ಕಳಿಗೆ ಪ್ರಜಾಪ್ರಭುತ್ವ ಸರ್ಕಾರ, ಚುನಾವಣೆ, ಮತದಾನದ ಮಹತ್ವ, ಹಕ್ಕು ಚಲಾವಣೆ ಸಂದರ್ಭದಲ್ಲಿನ ಅವರ ಹೊಣೆಗಾರಿಕೆಗಳು ಮತ್ತಿತರ ವಿಷಯಗಳ ಬಗೆಗೆ ಸಮರ್ಪಕವಾಗಿ ಅರಿವು ಮೂಡಿಸಿದ್ದೇ ಆದಲ್ಲಿ ಕೇವಲ ಯುವಜನತೆಯ ಮತದಾನ ಪ್ರಮಾಣವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಸಮರ್ಥ ಮತ್ತು ಸುಸ್ಥಿರ ಸರಕಾರ ರಚನೆಯ ನಿಟ್ಟಿನಲ್ಲಿ ಮುಂದಡಿ ಇಟ್ಟಂತಾಗಲಿದೆ. ಪ್ರೌಢ ಹಂತದಲ್ಲಿಯೇ ಮಕ್ಕಳನ್ನು ದೇಶದ ಭಾವೀ ಹೊಣೆಗಾರಿಕೆಯುತ ಪ್ರಜೆಗಳನ್ನಾಗಿ ರೂಪಿಸುವ ದೂರಾಲೋಚನೆಯೂ ಆಯೋಗದ ಈ ಚಿಂತನೆಯ ಹಿಂದೆ ಅಡಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಇದರಿಂದ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಭಾರತದ ಪ್ರಜಾಡಳಿತ ವ್ಯವಸ್ಥೆ ಇನ್ನಷ್ಟು ಸಶಕ್ತವಾಗಿ ಬೆಳೆಯಲು ಸಾಧ್ಯ.