ರಾಮನಗರ: ವಿಧಾನಸಭೆ ಚುನಾವಣೆ ಸಮೀಪಿಸು ತ್ತಿದ್ದು, ಮತಬೇಟೆಗೆ ದೇವರ ಹೆಸರಲ್ಲೇ ರಾಜಕಾರಣ ಜೋರಾಗಿದೆ. ಜಿಲ್ಲೆಯಲ್ಲಿ ರಾಜಕಾರಣದ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದೆ.
ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರದಲ್ಲಿ ತನ್ನ ಪ್ರಾಬಲ್ಯ ಮೆರೆಯಲೇಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಇನ್ನಿಲ್ಲದ ತಂತ್ರ ರಣತಂತ್ರಗಳನ್ನು ರೂಪಿಸುತ್ತಿದೆ. ಅದಕ್ಕಾಗಿ ಮತದಾರರ ಓಲೈಕೆಗೆ ಮುಂದಾಗಿದ್ದು, ಜನರಿಗೆ ಯಾತ್ರಾಸ್ಥಳ ದರ್ಶನ ದೊರಕಿಸುವ ಪ್ರವಾಸ ಭಾಗ್ಯಗಳ ಆಮಿಷವೊಡ್ಡಲಾಗುತ್ತಿದೆ. ರಾಮನಗರ ಜಿಲ್ಲೆ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಎಂದರೂ ತಪ್ಪಲ್ಲ, ಇಲ್ಲಿ ಗೆದ್ದವರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಸುಯೋಗ ಇದೆ. ಇಲ್ಲಿಂದ ಸ್ಪರ್ಧೆಗೆ ಡಿಮ್ಯಾಂಡ್ ಕೂಡ ಹೆಚ್ಚಿದೆ.
ಅಲ್ಲದೆ ರಾಜ್ಯದ ಪ್ರಭಾವಿಗಳ ತವರು ಕ್ಷೇತ್ರ ಇದಾಗಿದ್ದು ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರವಾದ ವಿಧಾನ ಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯನವರು ಜಿಲ್ಲೆಯಿಂದ ಗೆದ್ದಿದ್ದ ಪ್ರಥಮ ಮುಖ್ಯಮಂತ್ರಿಗಳಾಗಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ದೇಶದ ಪ್ರಧಾನಿ ಹುದ್ದೆಗೇರಿದ ದಕ್ಷಿಣ ಭಾರತದ ಏಕೈಕ ಪ್ರಧಾನಿ ಎಚ್.ಡಿ. ದೇವೇಗೌಡರು ಇಲ್ಲಿಯೇ ಗೆದ್ದಿದ್ದರು. ಇನ್ನು ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದ ಎಚ್ .ಡಿ.ಕುಮಾರಸ್ವಾಮಿ ಕೂಡ ಇಲ್ಲಿಂದಲೇ ಗೆದ್ದಿದ್ದರು. ಇನ್ನು ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಗದ್ದುಗೆಗೇರಿ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಕಂಡಿರುವ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರವನ್ನೇ ಅಸ್ತಿರಗೊಳಿಸಿ ಬಿಜೆಪಿ ಸರ್ಕಾರದ ಉದಯಕ್ಕೆ ಕಾರಣವಾಗಿದ್ದ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೂಡ ಇದೇ ಜಿಲ್ಲೆಯವರು. ಈ ಮೂವರಿಗೆ ಜಿಲ್ಲೆಯಲ್ಲಿ ತಮ್ಮ ತಮ್ಮ ಪ್ರಾಬಲ್ಯ ಬೆಳೆಸಿಕೊಳ್ಳುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಕೂಡ ಇಲ್ಲದೆ.
ಯಾತ್ರಾಸ್ಥಳ ದರ್ಶನ ಕಸರತ್ತು: ಮಾಜಿ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಅವರು ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಜಿಲ್ಲೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸಿದ್ದು, ಇದೀಗ ಹಳೆಯದಾಯ್ತು. ಅದಕ್ಕಾಗಿ ಕೌಂಟರ್ ರೂಪದಲ್ಲಿ ಸದ್ದಿಲ್ಲದೆ ಸುದ್ದಿಯಾಗಿದ್ದು, ದಕ್ಷಿಣ ಅಯೋಧ್ಯೆ ಮಾದರಿಯನ್ನಾಗಿ ರಾಮದೇವರ ಬೆಟ್ಟವನ್ನು ಅಭಿವೃದ್ಧಿಗೆ ಪಣತೊಟ್ಟ ಬಿಜೆಪಿ ಹಿಂದುತ್ವ ಪ್ರತಿಪಾದನೆಯೊಂದಿಗೆ ಹಳೇ ಮೈಸೂರು ಭಾಗದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಶತಪ್ರಯತ್ನ ಮುಂದುವರಿಸಿದೆ. ಇನ್ನು ರಾಮಗನರ ಕ್ಷೇತ್ರದ ಜೆಡಿಎಸ್ ಹುರಿಯಾಳು ನಿಖಿಲ್ ಕುಮಾರಸ್ವಾಮಿ ಹಾಗೂ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಪ್ರಸನ್ನ.ಪಿಗೌಡ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಧರ್ಮಸ್ಥಳ, ತಮಿಳುನಾಡಿನ ಓಂಶಕ್ತಿ ಸೇರಿದಂತೆ ಇತರ ದೇವಾಲಯಗಳಿಗೆ ಕಳುಹಿಸಿಕೊಡುವ ಮೂಲಕ ಮಹಿಳಾ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯ ನಡೆಯುತ್ತಿದ್ದರೆ, ಪುರುಷರಿಗೆ ಇವುಗಳ ಜೊತೆಗೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಉಚಿತವಾಗಿ ಕಳುಹಿಸಿಕೊಡುವ ಮೂಲಕ ತಮ್ಮ ತಮ್ಮ ಪರ ಮತದಾರರನ್ನು ಹಿಡಿದಿಟ್ಟುಕೊಳ್ಳು ಕಾರ್ಯ ನಡೆಯುತ್ತಿದೆ. ರಾಮನಗರದಲ್ಲಿ ಜೆಡಿಎಸ್ ಯಾತ್ರೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಒತ್ತು ನೀಡಿದ್ದರೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಇಕ್ಬಾಲ್ ಹುಸೇನ್ ತವಾಭಾಗ್ಯ ರೂಪಿಸಿ ಕಾಲ್ನಡಿಗೆ ಹೆಸರಲ್ಲಿ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಇನ್ನು ಚುನಾವಣಾ ವರ್ಷವಾಗಿದ್ದು ಹಲವು ಕಾಮಗಾರಿಗಳಿಗೆ ಪೂಜೆ ಶಂಕುಸ್ಥಾಪನೆ ಕಾರ್ಯಕ್ರಮಗಳ ಮಹಾಪೂರವೇ ಹಮ್ಮಿಕೊಂಡಿದ್ದು ಅದರ ಜೊತೆಗೆ ಯಾತ್ರಾಸ್ಥಳ ದರ್ಶನ ಭಾಗ್ಯ ಸದ್ಯಕ್ಕೆ ಚಾಲ್ತಿಯಲ್ಲಿದೆ. ಚುನಾವಣೆ ಘೋಷಣೆ ಬಳಿಕ ಮತದಾರರನ್ನ ಸೆಳೆಯಲು ಏನೆಲ್ಲಾ ಆಸೆ ಆಮಿಷಗಳು ಬರುತ್ತವೋ ಕಾದು ನೋಡಬೇಕಿದೆ.
ಖಾಸಗಿ ಬಸ್‌ಗಳಿಗೆ ಹೆಚ್ಚಿದ ಬೇಡಿಕೆ: ಜಿಲ್ಲೆಯಲ್ಲಿ ಸಾಕಷ್ಟು ಖಾಸಗಿ ಮಿನಿ ಮತ್ತು ದೊಡ್ಡ ಬಸ್‌ಗಳಿವೆ. ಅವುಗಳ ಜತೆಗೆ 12 ಆಸನ, 24 ಆಸನದ ಲಘು ಮೊಟಾರು ವಾಹನಗಳು ಇವೆ. ರಾಜಕಾರಣಿಗಳ ಪ್ರವಾಸ ಆಯೋಜನೆ ಪರಿಪಾಠದಿಂದಾಗಿ ಈ ಬಸ್ ಗಳು, ಲಘು ಮೋಟಾರು ವಾಹನಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ಜನವರಿ ಆರಂಭದಿಂದ ಬಹುತೇಕ ವಾಹನಗಳು ತಮಿಳುನಾಡಿನ ಓಂ ಶಕ್ತಿ ದೇವಸ್ಥಾನ, ಕೇರಳದ ಶಬರಿಮಲೆ, ಆಂಧ್ರಪ್ರದೇಶದ ತಿರುಪತಿ, ರಾಜ್ಯದ ಧರ್ಮಸ್ಥಳ ಸೇರಿ ಇನ್ನಿತರ ದೇವಸ್ಥಾನಗಳಿಗೆ ಜನರನ್ನು ಕರೆದೊಯ್ಯಲು ಬಸ್, ವಾಹನಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಮತದಾರರನ್ನು ದೇವರ ದರ್ಶನ ಭಾಗ್ಯದ ಹೆಸರಲ್ಲಿ ಯಾತ್ರೆಗೆ ಕಳುಹಿಸಲಾಗುತ್ತಿದೆ. ಅಭ್ಯರ್ಥಿಗಳು ತಮ್ಮ ಸ್ವ ಸಾಮರ್ಥ್ಯ ಹಾಗೂ ತಮ್ಮ ದೂರದೃಷ್ಟಿ ಯೋಜನೆಗಳನ್ನು ಮುಂದಿಟ್ಟು ಮತಕೇಳಬೇಕು. ಆಸೆ ಆಮಿಷಗಳನ್ನು ಒಡ್ಡುವುದು ಸರಿಯಲ್ಲ.
– ಶಿವಲಿಂಗಯ್ಯ ಸಮಾಜಿಕ ಕಾರ್ಯಕರ್ತ
ಈ ಹಿಂದೆ ಸ್ತ್ರೀ ಶಕ್ತಿ ಸಂಘಗಳಿಗೆ ಹಣ ನೀಡಿ ಭ್ರಷ್ಟರನ್ನಾಗಿಸಿದ್ದರು. ಇದೀಗ ದೇಗುಲಗಳ ಪ್ರವಾಸ ಹೆಸರಲ್ಲಿ ಜನರನ್ನು ಸೆಳೆಯಲಾಗುತ್ತಿದೆ. ಇದಕ್ಕೆ ಜನರು ಮರುಳಾಗಬಾರದು. ಯೋಗ್ಯ ಅಭ್ಯರ್ಥಿ ಆರಿಸಲು ಮುಂದಾಗಬೇಕು.
-ಶಿವನಾಗಸ್ವಾಮಿ , ಸ್ಥಳೀಯ ನಾಗರಿಕ
-ಎಂ.ಎಚ್.ಪ್ರಕಾಶ್ ರಾಮನಗರ