Advertisement

ಮತಯಂತ್ರಗಳು ಭದ್ರತಾ ಕೋಣೆಯಲ್ಲಿ; ನಾಳೆ ಅಂತಿಮ ತೀರ್ಪು

12:10 PM May 14, 2018 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಎಲ್ಲ 1,858 ಮತಗಟ್ಟೆಗಳಿಂದ ವಿದ್ಯುನ್ಮಾನ ಮತಯಂತ್ರಗಳು ಹಾಗೂ ವಿವಿಪ್ಯಾಟ್‌ ಯಂತ್ರಗಳನ್ನು ಮಂಗಳೂರಿನ ಬೋಂದೆಲ್‌ ಮಹಾತ್ಮಾ ಗಾಂಧಿ ಶತಾಬ್ದ ಹಿರಿಯ ಪ್ರಾಥಮಿಕ ಶಾಲೆಯ ಸ್ಟ್ರಾಂಗ್‌ ರೂಂನಲ್ಲಿ ಇರಿಸಲಾಗಿದ್ದು, ಮೇ 15ರಂದು ಮತ ಎಣಿಕೆ ನಡೆಯಲಿದೆ. ಪೊಲೀಸ್‌, ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬಂದಿಯ ತಂಡಗಳಿಂದ ಭದ್ರತಾ ಕೇಂದ್ರಕ್ಕೆ ಮೂರು ಹಂತದಲ್ಲಿ ಭದ್ರತೆ ಒದಗಿಸಲಾಗಿದೆ. 

Advertisement

ಶನಿವಾರ ಸಂಜೆ ಮತದಾನ ಮುಗಿದ ಬಳಿಕ ಎಲ್ಲ ಮತಗಟ್ಟೆಗಳಿಂದ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಆಯಾ ಕ್ಷೇತ್ರಗಳ ಮಸ್ಟರಿಂಗ್‌ ಕೇಂದ್ರಗಳಿಗೆ ತಂದು, ಅಲ್ಲಿ ಕ್ಷೇತ್ರ ಚುನಾವಣಾಧಿಕಾರಿಗಳ ಸಮ್ಮುಖ ದಲ್ಲಿ ಡಿ-ಮಸ್ಟರಿಂಗ್‌ ಪ್ರಕ್ರಿಯೆ ನಡೆಸಲಾಯಿತು. 

ಮೇ 15ರಂದು 14 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಒಟ್ಟು 112 ಮೇಜುಗಳನ್ನು ಜೋಡಿಸಿಡಲಾಗುತ್ತದೆ. ಸುಮಾರು 600ಕ್ಕೂ ಅಧಿಕ ಅಧಿಕಾರಿಗಳು/ಸಿಬಂದಿಗಳು ಮತ ಎಣಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌ ಫೋನ್‌ಗಳ ಬಳಕೆಗೆ ಅವಕಾಶವಿಲ್ಲ.

ಮತ ಎಣಿಕೆ ಬಗ್ಗೆ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ “ಉದಯವಾಣಿ’ ಜತೆಗೆ ಮಾತನಾಡಿ, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಅಂಚೆಯ ಮೂಲಕ ಸ್ವೀಕೃತ ಮತಗಳ ಎಣಿಕೆಯನ್ನು ಚುನಾವಣಾಧಿಕಾರಿ ಮೇಜಿನಲ್ಲಿ ನಡೆಸಲಾಗುತ್ತದೆ. ಈ ಬಾರಿ ಬಾರ್‌ಕೋಡ್‌ ಇರುವ ಮತ ಪತ್ರಗಳನ್ನು ಕಳುಹಿಸಲಾಗಿದ್ದು, ಮತ ಎಣಿಕೆಯಂದು ಅದೇ ಪತ್ರ ನಮಗೆ ಬಂದಿದೆಯೇ ಎಂದು ತಿಳಿಯಲು ಬಾರ್‌ಕೋಡ್‌ ಪರಿಶೀಲನೆ ನಡೆಯಲಿದೆ. ಇದು ಈ ಬಾರಿಯ ಹೊಸತು. ಅದರೊಂದಿಗೆ ಪ್ರತೀ ಕ್ಷೇತ್ರದ ತಲಾ ಒಂದೊಂದು ವಿವಿಪ್ಯಾಟ್‌ ಅನ್ನು ತೆರೆದು ಅದರಲ್ಲಿರುವ ಮತದಾಖಲೆ ಹಾಗೂ ಇವಿಎಂ ದಾಖಲೆಯನ್ನು ತಾಳೆ ಮಾಡಿ ನೋಡಲಾಗುತ್ತದೆ. ಮತ ಎಣಿಕೆ ಸಂಬಂಧ ವ್ಯಾಪಕ ಭದ್ರತೆ ಹಾಗೂ ಸಿದ್ಧತೆಗಳನ್ನು ಜಿಲ್ಲಾಡಳಿತದ ವತಿಯಿಂದ ನಡೆಸಲಾಗಿದೆ ಎಂದರು.
**
ಉಡುಪಿ:  ಮತದಾರರು ಬರೆದಿರುವ ಹಣೆಬರಹ ಈಗ ಶಾಲೆ ಸೇರಿದೆ! ಅದನ್ನು ಓದುವ ಕೆಲಸ ಮೇ 15ರಂದು ನಡೆಯಲಿದೆ. ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ ಮತ್ತು ಕಾಪು ಕ್ಷೇತ್ರಗಳ ಅಭ್ಯರ್ಥಿಗಳಿಗೆ ದೊರೆತಿರುವ ಮತಗಳ ಎಣಿಕೆ ಕೇಂದ್ರವಾಗಿರುವ ಉಡುಪಿ ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ ಮಾಧ್ಯಮ ಶಾಲೆಯೊಳಗೆ ಮತಯಂತ್ರಗಳನ್ನು ಸುಭದ್ರವಾಗಿ ಇರಿಸಲಾಗಿದೆ. 

ಲೋಕಸಭಾ ಚುನಾವಣೆ ಸೇರಿದಂತೆ ಹಲವಾರು ಚುನಾವಣೆಗಳಲ್ಲಿ ಮತ ಎಣಿಕೆ ಕೇಂದ್ರವಾಗಿ ಬಳಕೆಯಾಗಿರುವ ಟಿ.ಎ.ಪೈ ಆಂಗ್ಲಮಾಧ್ಯಮ ಶಾಲೆ ಉತ್ತಮ ಸೌಲಭ್ಯಗಳು, ಸಂಪರ್ಕ, ವಿಶೇಷವಾಗಿ ಭದ್ರತೆಗೆ ಹೆಚ್ಚು ಸೂಕ್ತವಾಗಿದೆ. ಅದೇ ಕಾರಣಕ್ಕೆ ಇದು ಈ ಹಿಂದಿನಿಂದಲೂ ಮತ ಎಣಿಕೆ ಕೇಂದ್ರವಾಗಿ ಗುರುತಿಸಿಕೊಂಡಿದೆ.

Advertisement

ಮೈಕ್‌ ಘೋಷಣೆಯ ಕುತೂಹಲ
ಈ ಹಿಂದೆ ಇಂತಹ ಮತ ಎಣಿಕೆ ಕೇಂದ್ರಗಳ ಎದುರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸುತ್ತಿದ್ದರು. ಪ್ರತಿ ಸುತ್ತಿನ ಅನಂತರವೂ ಘೋಷಣೆಯಾಗುವ ಫ‌ಲಿತಾಂಶಕ್ಕಾಗಿ ಕಾದು ಕುಳಿತು ಕೊಳ್ಳುತ್ತಿದ್ದರು. ಆದರೆ ಈಗ ಟಿ.ವಿ. ಮಾಧ್ಯಮ, ಸಾಮಾಜಿಕ ಜಾಲತಾಣಗಳ ವೇಗದ ಮಾಹಿತಿಯ ಕಾರಣದಿಂದ ಮತ ಎಣಿಕೆ ಕೇಂದ್ರಗಳತ್ತ ಆಗಮಿಸುವವರ ಸಂಖ್ಯೆ ಕಡಿಮೆ. ಆದಾಗ್ಯೂ ಮತ ಎಣಿಕೆ ಕೇಂದ್ರಗಳ ಎದುರು ಖುದ್ದು ನಿಂತು ಪಕ್ಕಾ ಫ‌ಲಿತಾಂಶ ತಿಳಿದುಕೊಳ್ಳಬೇಕು ಎಂಬ ಕುತೂಹಲಿಗಳು ಇದ್ದೇ ಇದ್ದಾರೆ. ಈ ಬಾರಿ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಸೇರಿದಂತೆ ಜಿಲ್ಲೆಯಾದ್ಯಂತ ಮೇ 15ರ ಬೆಳಗ್ಗೆ 6ರಿಂದ ಮೇ 17ರ ಬೆಳಗ್ಗೆ 6ರವರೆಗೆ ಸೆ. 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿರುವುದು ಇಂತಹ ಕಾರ್ಯಕರ್ತರು, ಬೆಂಬಲಿಗರ ಉತ್ಸಾಹದ ಮೇಲೆ ಪ್ರಭಾವ ಬೀರುವುದೇ ಎಂದು ಕಾದು ನೋಡಬೇಕಿದೆ.

ಮೇ 15ರ ಮಧ್ಯಾಹ್ನದ ವೇಳೆಗೆ ಪೋಸ್ಟಲ್‌ ಬ್ಯಾಲೆಟ್‌ ಸಹಿತ ಎಲ್ಲ ಮತಗಳ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next