ನವದೆಹಲಿ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ 99 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಕಳೆದ 10 ವರ್ಷಗಳಿಂದ ಖಾಲಿ ಇದ್ದ ಲೋಕಸಭೆಯ ಪ್ರತಿಪಕ್ಷ ನಾಯಕ ಸ್ಥಾನವನ್ನು ಅಧಿಕೃತವಾಗಿ ಪಡೆದುಕೊಂಡಿದೆ.
ಇದನ್ನೂ ಓದಿ:ಜೂನ್‌ನಲ್ಲಿ ಕಾಲಿವುಡ್/ಟಾಲಿವುಡ್ ಫುಲ್ ಬ್ಯುಸಿ: ರಿಲೀಸ್ ಆಗಲಿದೆ ಸಾಲು ಸಾಲು ಚಿತ್ರಗಳು
2014ರಲ್ಲಿ 44 ಹಾಗೂ 2019ರಲ್ಲಿ 52 ಸ್ಥಾನ ಪಡೆದುಕೊಂಡಿದ್ದ ಕಾಂಗ್ರೆಸ್, ವಿಪಕ್ಷ ನಾಯಕನ ಸ್ಥಾನ ಪಡೆಯಲು ವಿಫಲಗೊಂಡಿತ್ತು. ಲೋಕಸಭೆಯ ಮೊದಲ ಅಧ್ಯಕ್ಷ ಜಿ.ವಿ. ಮಾಳವಂಕರ್ ಅವರು ವಿಧಿಸಿದ ನಿಯಮದಂತೆ, ಯಾವ ಪಕ್ಷ ಲೋಕಸಭೆಯ ಶೇ.10ರಷ್ಟು ಸದಸ್ಯರು ಅಂದರೆ 55 ಸ್ಥಾನ ಹೊಂದಿರುತ್ತಾರೋ ಆ ಪಕ್ಷದವರು ವಿಪಕ್ಷ ನಾಯಕನ ಹುದ್ದೆ ಅಲಂಕರಿಸಬಹುದು. ಲೋಕಸಭೆಯ ಕೋರಮ್ ಸಹ ಇದೇ ಪ್ರಮಾಣದಲ್ಲಿದೆ. ಅಂದರೆ, ಲೋಕಸಭೆ ಕಲಾಪ ನಡೆಸಲು ಶೇ.10ರಷ್ಟು ಸದಸ್ಯರು ಸದನದಲ್ಲಿ ಇರಬೇಕು.
2019ರ ಚುನಾವಣೆಯಲ್ಲಿ ಕೇವಲ 3 ಸ್ಥಾನಗಳ ಕೊರತೆಯಿಂದ ಕಾಂಗ್ರೆಸ್ ವಿಪಕ್ಷ ನಾಯಕ ಹುದ್ದೆ ಅಲಂಕರಿಸಿರಲಿಲ್ಲ. ಬದಲಾಗಿ, ಅಧಿರ್ ರಂಜನ್ ಚೌಧರಿ ಅವರನ್ನು ಲೋಕಸಭೆಯ ಕಾಂಗ್ರೆಸ್ ನಾಯಕನನ್ನಾಗಿ ಮಾಡಲಾಗಿತ್ತು. ಆದರೆ, ಈ ಬಾರಿ ಮತದಾರರು ಕಾಂಗ್ರೆಸ್‌ಗೆ ಸಂಪೂರ್ಣ ಅಧಿಕಾರವಲ್ಲವಾದರೂ, ವಿಪಕ್ಷ ನಾಯಕ ಹುದ್ದೆಯನ್ನು ದೊರಕಿಸಿಕೊಟ್ಟಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷ ನಾಯಕ ಸ್ಥಾನಕ್ಕೂ ಮಹತ್ವ ಹಾಗೂ ಪ್ರಮುಖ ಜವಾಬ್ದಾರಿಗಳಿವೆ.