Advertisement

ಚಿತ್ರಕಲೆಯಿಂದ ಮತದಾರರಿಗೆ ಅರಿವು ಕಾರ್ಯಕ್ರಮ

09:52 PM Apr 07, 2019 | Lakshmi GovindaRaju |

ತುಮಕೂರು: ಚಿತ್ರಕಲೆ ಸಾರ್ವಜನಿಕರ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಸಂದೇಶ ತಲುಪಿಸು ಉತ್ತಮ ಸಾಧನವಾಗಿದ್ದು, ಕಲಾವಿದರು ಚಿತ್ರಕಲೆಯ ಮೂಲಕ ಜನರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್‌ ತಿಳಿಸಿದರು.

Advertisement

ನಗರದ ಟೌನ್‌ಹಾಲ್‌ ಬಳಿಯ ಮಹಾನಗರ ಪಾಲಿಕೆಯ ಉದ್ಯಾನವನದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ, ಚಿತ್ರಕಲಾ ಪರಿಷತ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಚಿತ್ರಕಲಾ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಚಿತ್ರಕಲೆಗೆ ಬೆಲೆಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಸ್ತುತ ನಡೆಯುತ್ತಿರುವ 2019ರ ಲೋಕಸಭಾ ಚುನಾವಣೆಯಲ್ಲಿ ಚಿತ್ರ ಕಲಾವಿದರು ತಮ್ಮ ಕುಂಚಗಳಲ್ಲಿ ಕಲೆ ಅರಳಿಸುವ ಮೂಲಕ ಚುನಾವಣಾ ಮಹತ್ವ ಸಾರುವ ಕೆಲಸ ಮಾಡುತ್ತಿರುವುದು ಸಂತಸದ ಮಹತ್ವದ ಕಾರ್ಯ ಎಂದರು.

ಶುಭ ಹಾರೈಕೆ: ಚಿತ್ರಕಲೆಯು ಜನರನ್ನು ಸುಲಭವಾಗಿ ತಲುಪುವ ಸಾಧನವಾಗಿದ್ದು, ಕಲಾವಿದರು ತಮ್ಮ ಯೋಚನಾ ಶಕ್ತಿ ಉಪಯೋಗಿಸಿಕೊಂಡು ಸಂದೇಶ ಸಾರುವ ಸುಂದರ ಚಿತ್ರಗಳನ್ನು ರಚಿಸಬೇಕೆಂದು ಶುಭ ಹಾರೈಸಿದರು.

ಸ್ಪರ್ಧೆ ನಿಯಮ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಸದಸ್ಯೆ ವಾಸಂತಿ ಉಪ್ಪಾರ್‌ ಮಾತನಾಡಿ, ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಆಯೋಜಿಸಿರುವ ವಿನೂತನವಾದ ಈ ಕಾರ್ಯಕ್ರಮದಲ್ಲಿ ಕಲಾವಿದರು ಆಮಿಷವಿಲ್ಲದ ಮತದಾನ, ಸಮಾಜದ ಎಲ್ಲಾ ಸ್ತರದ ಜನರ ಚುನಾವಣೆಯಲ್ಲಿ ಭಾಗವಹಿಸುವಿಕೆ,

Advertisement

ವಿಕಲಚೇತನರಿಗೆ ಮತದಾನಕ್ಕಾಗಿ ಒದಗಿಸಿರುವ ವಿಶೇಷ ಸೌಲಭ್ಯಗಳು, ಗರ್ಭಿಣಿ, ಬಾಣಂತಿ, ವಿಕಲಚೇತನರಿಗೆ ಹಾಗೂ ತೃತೀಯ ಲಿಂಗಗಳಿಗೆ ಮತದಾನ ಮಾಡಲು ನೀಡಲಾಗಿರುವ ಆದ್ಯತೆ ಹಾಗೂ ಆಮಿಷ ತೋರುವ ಜನರ ವಿರುದ್ಧ ಸಿ-ವಿಜಿಲ್‌ ಆ್ಯಪ್‌ ಮುಖಾಂತರ ದೂರು ದಾಖಲಿಸುವ ಸಂದೇಶಗಳನ್ನು ಸಾರುವ ಚಿತ್ರ ಬಿಡಿಸಬೇಕೆಂದು ಸ್ಪರ್ಧೆ ನಿಯಮ ತಿಳಿಸಿದರು.

ಹೆಮ್ಮೆ, ಗೌರವ ತರುವ ವಿಷಯ: ಚಿತ್ರಕಲಾ ಪರಿಷತ್‌ನ ರಮೇಶ್‌ ಮಾತನಾಡಿ, ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಕಲಾವಿದರನ್ನು ದೇಶದ ಹಿತಕ್ಕಾಗಿ ಚುನಾವಣೆ ಮಹತ್ವ ಸಾರುವ ಸಂದೇಶಗಳನ್ನು ಎಲ್ಲೆಡೆ ಪ್ರಚಾರ ಪಡಿಸಲು ಚಿತ್ರ ಕಲಾವಿದರನ್ನು ಬಳಸಿಕೊಳ್ಳುತ್ತಿರುವುದು ತಮಗೆ ಹೆಮ್ಮೆಯ ಹಾಗೂ ಗೌರವ ತರುವ ವಿಷಯವಾಗಿದ್ದು, ಈ ಅಧಿಕಾರವನ್ನು ಕೇವಲ ಬಹುಮಾನಕ್ಕಾಗಿ ಮಾತ್ರವಲ್ಲದೆ ದೇಶಾಭಿಮಾನಕ್ಕಾಗಿ ಬಳಸಿಕೊಂಡು ಉತ್ತಮ ಚಿತ್ರಪಟಗಳನ್ನು ರಚಿಸಲಾಗುವುದೆಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕಾಮಾಕ್ಷಿ ಮಾತನಾಡಿ, ಜಿಲ್ಲೆಯ ಕಲಾವಿದರು ತಮ್ಮ ಮನಸ್ಸಿನಲ್ಲಿ ಅರಳುವ ಚಿತ್ರಗಳನ್ನು ಕುಂಚಗಳ ಮುಖಾಂತರ ಕ್ಯಾನ್ವಸ್‌ ಮೇಲೆ ಅರಳಿಸುವ ಮೂಲಕ ಜನರ ಹೃದಯಗಳನ್ನು ತಲುಪಿ ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಬೇಕೆಂದು ಕೋರಿದರು.

ಕಲಾವಿದರಿಗೆ ಅಭಿನಂದನೆ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್‌ ಮಾತನಾಡಿ, ಎಲ್ಲಾ ಕಲಾವಿದರು ಒಬ್ಬರಿಗಿಂತ ಒಬ್ಬರು ಉತ್ತಮವಾದ ಹಾಗೂ ಅರ್ಥಗರ್ಭಿತ ಸಂದೇಶಗಳನ್ನು ಚಿತ್ರಿಸಿದ್ದು, ಎಲ್ಲಾ ಚಿತ್ರಗಳು ಉತ್ಕೃಷ್ಟವಾಗಿವೆ ಎಂದು ಎಲ್ಲಾ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು.

ಸದರಿ ಎಲ್ಲಾ ಚಿತ್ರಪಟಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗಳಲ್ಲಿ ಪ್ರದರ್ಶಿಸಿ, ಆ ಮೂಲಕ ಚುನಾವಣೆ ಮಹತ್ವವನ್ನು ಸಾರ್ವಜನಿಕರಿಗೆ ತಲುಪಿಸಲಾಗುವುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಚಿತ್ರಗಳನ್ನು ರಚಿಸಿದ ಕಲಾವಿದರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು. ಪ್ರಥಮ ಬಹುಮಾನವನ್ನು ಓಂಕಾರ್‌, ದ್ವೀತಿಯ ಬಹುಮಾನವನ್ನು ಎಸ್‌.ವಿ.ಆನಂದ್‌, ತೃತೀಯ ಬಹುಮಾನವನ್ನು ಪಿ.ಹೇಮಾ ಹಾಗೂ ಸಮಾಧಾನಕರ ಬಹುಮಾನಗಳನ್ನು ಹೀನಾಕೌಸರ್‌, ಕೆ.ಸಿ.ಮಂಜುಳಾ, ಜಿ.ಟಿ.ರಂಗಸ್ವಾಮಿ, ಪಿ.ಜಿ.ಜಗದೀಶ್‌ ಹಾಗೂ ಶಿವಾನಂದಾರಾಧ್ಯ ಪಡೆದರು.

ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳ ಚಿತ್ರಕಲಾ ಶಿಕ್ಷಕರು ರಚಿಸಿದ ಚಿತ್ರಗಳು ಸಾರ್ವಜನಿಕರ ಮನಸೂರೆಗೊಂಡವು. ಈ ಸಂದರ್ಭದಲ್ಲಿ ತೀರ್ಪುಗಾರರಾಗಿ ಪ್ರಭು ಹೊಸೂರು, ಕೆ.ಎನ್‌.ಮನು ಚಕ್ರವರ್ತಿ, ಕೆ.ಎಂ.ರವೀಶ್‌ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಸದಸ್ಯ ಮಹಂಕಾಳಪ್ಪ, ರಾಜಶೇಖರ್‌, ರಾಜ್‌ಕುಮಾರ್‌, ವಾಸಂತಿ ಉಪ್ಪಾರ್‌, ದೇವರಾಜ್‌, ಶ್ರೀನಿವಾಸ್‌, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್‌ಕುಮಾರ್‌ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next