Advertisement

ಮತದಾರರು ಪ್ರಜಾಪ್ರಭುತ್ವದ ಬುನಾದಿ

08:23 PM Jan 25, 2020 | Lakshmi GovindaRaj |

ಚಿಕ್ಕಬಳ್ಳಾಪುರ: ದೇಶದ ಸಂವಿಧಾನವು ನೀಡಿರುವ ಮತದಾನವು ಮೂಲಭೂತ ಹಕ್ಕು. ಹೊಸದಾಗಿ ಮತಪಟ್ಟಿಗೆ ಸೇರ್ಪಡೆಯಾಗುವ ಯುವ ಮತದಾರರು ಕಡ್ಡಾಯವಾಗಿ ತಮ್ಮ ಮತ ಚಲಾಯಿಸುವ ಮೂಲಕ ಸುಭದ್ರವಾದ ಸರ್ಕಾರ ನಿರ್ಮಾಣಕ್ಕೆ ಪಣತೊಡಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಅಮರನಾರಾಯಣ ತಿಳಿಸಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಶನಿವಾರ ಭಾರತೀಯ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 10ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾರರು ಪ್ರಜಾಪ್ರಭುತ್ವದ ಬುನಾದಿ: ಮತದಾನ ಎಂದರೆ ಒಪ್ಪಿಗೆಯಿಂದ ಕೊಡುವುದು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಬಹಳ ಮುಖ್ಯ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ತಮ್ಮ ಮತವನ್ನು ನಿರ್ಭೀತವಾಗಿ ನೈತಿಕವಾಗಿ ಚಲಾಯಿಸಿದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವದಡಿ ಸುಭದ್ರ ಸರ್ಕಾರ ರಚನೆ ಸಾಧ್ಯ. ಮತದಾರರು ಪ್ರಜಾಪ್ರಭುತ್ವದ ಬುನಾದಿ ಎಂದರು.

ಮನೆಯವ್ರನ್ನು ಪ್ರೇರೇಪಿಸಿ: ಜಿಲ್ಲಾಧಿಕಾರಿ ಆರ್‌.ಲತಾ ಮಾತನಾಡಿ, ಮತದಾನಕ್ಕೆ ಅರ್ಹರಾದ ಯಾರೊಬ್ಬರು ಮತದಾನದಿಂದ ಹೊರಗುಳಿಯಬಾರದು ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗವು 18 ವರ್ಷ ತುಂಬಿದ ಯುವ ಮತದಾರರನ್ನು ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ತಮ್ಮ ಮತವನ್ನು ಯಾರೂ ಮಾರಾಟ ಮಾಡಿಕೊಳ್ಳಬಾರದು. ಯುವ ಮತದಾರರು ನಿಮ್ಮ ಮನೆಯವರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ ಪ್ರೇರೇಪಿಸಬೇಕು ಎಂದರು.

ಬಹುಮಾನ ವಿತರಣೆ: ರಾಷ್ಟ್ರೀಯ ಮತದಾರ ದಿನಾಚರಣೆ ಪ್ರಯುಕ್ತ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತದ ವತಿಯಿಂದ ಬಹುಮಾನ ಹಾಗೂ ಹೊಸ ಯುವ ಮತದಾರರಿಗೆ ಕಾರ್ಯಕ್ರಮದಲ್ಲಿ ಮತದಾನದ ಗುರುತಿನ ಚೀಟಿ ವಿತರಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ 3ನೇ ಜಿಲ್ಲಾ ಸಿವಿಲ್‌ ನ್ಯಾಯಾಧೀಶರರಾದ ಭಾನುಮತಿ, ಅರುಟಗಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್‌. ದೇವರಾಜು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ಅಪರ ಜಿಲ್ಲಾಧಿಕಾರಿ ಆರತಿ, ಉಪವಿಭಾಗಾಧಿಕಾರಿ ಎ.ಎನ್‌.ರಘುನಂದನ್‌, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ಜಿಲ್ಲಾ ಕ್ರೀಡಾ ಮತ್ತು ಯುವ ಜನ ಸೇವಾ ಇಲಾಖೆ ಸಹಾಯಕ ಉಪ ನಿರ್ದೇಶಕಿ ಜಯಲಕ್ಷ್ಮೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವ ಬಲವರ್ಧನೆಗೆ ಮತ ಚಲಾಯಿಸಿ: ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಝೀಯಾ ತರುನ್ನುಮ್‌ ಮಾತನಾಡಿ, ರಾಷ್ಟ್ರೀಯ ಮತದಾರರ ದಿನಾಚರಣೆಯ ಮಹತ್ವವನ್ನು ಸಾರ್ವಜನಿಕರು ಅರಿಯಬೇಕು. ಜಿಲ್ಲೆಯಲ್ಲಿ ಸ್ವೀಪ್‌ ಸಮಿತಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಯುವ ಮತದಾರರು, ವಿದ್ಯಾರ್ಥಿಗಳು ಹಾಗೂ ಅಂಗವಿಕಲರನ್ನು ಹೊಸದಾಗಿ ಮತಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಜಾಗೃತಿ ಮೂಡಿಸಿದೆ ಎಂದರು. ಸಂವಿಧಾನ ಕಲ್ಪಿಸಿರುವ ಹಕ್ಕುಗಳಲ್ಲಿ ಮತದಾನ ಕೂಡ ಶ್ರೇಷ್ಠವಾಗಿದ್ದು, ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸಬೇಕೆಂದರು.

ಮುಖ್ಯ ರಸ್ತೆಗಳಲ್ಲಿ ಜನ ಜಾಗೃತಿ ಜಾಥಾ: ರಾಷ್ಟ್ರೀಯ ಯುವ ಮತದಾರರ ದಿನಾಚರಣೆ ಪ್ರಯುಕ್ತ ನಗರದ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಕಡ್ಡಾಯವಾಗಿ ಚುನಾವಣೆಗಳಲ್ಲಿ ಮತದಾನ ಮಾಡಬೇಕು, ಉತ್ತಮ ಜನಪ್ರತಿನಿಧಿಯನ್ನು ಆರಿಸಬೇಕೆಂಬ ಘೋಷಣೆಯ ನಾಮಫ‌ಲಕಗಳನ್ನು ನೂರಾರು ವಿದ್ಯಾರ್ಥಿಗಳು ಕೈಯಲ್ಲಿಡಿದು ಜಿಲ್ಲಾ ಕೇಂದ್ರದ ಮುಖ್ಯ ರಸ್ತೆಗಳಲ್ಲಿ ಜನ ಜಾಗೃತಿ ಜಾಥಾ ನಡೆಸುವ ಮೂಲಕ ಪ್ರಜಾಪ್ರಭುತ್ವ ಸರ್ಕಾರ ರಚನೆಯಲ್ಲಿ ಮತದಾರರ ಪಾತ್ರದ ಬಗ್ಗೆ ಅರಿವು ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next