Advertisement

ಪ್ರತಿ ಚುನಾವಣೆಗೂ ಹೆಚ್ಚುತ್ತಿದೆ ಮತದಾನ

04:08 PM May 16, 2023 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇತ್ತೀಚೆಗೆ ತೆರೆ ಕಂಡ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಕ್ಕೆ ಶೇಕಡವಾರು ಮತದಾನ ಪ್ರಮಾಣದಲ್ಲಿ ಈ ಬಾರಿ ದಾಖಲೆಯ ಮತದಾನಕ್ಕೆ ಸಾಕ್ಷಿಯಾಗಿ ಗಮನ ಸೆಳೆದ ಜಿಲ್ಲೆಯಲ್ಲಿ ಪ್ರತಿ ಚುನಾವಣೆಯಿಂದ ಚುನಾವಣೆಗೆ ಮತದಾನ ಪ್ರಮಾಣ ಹೆಚ್ಚಳ ಕಂಡು ಬರುತ್ತಿರುವುದು ಎದ್ದು ಕಾಣುತ್ತಿದೆ.

Advertisement

ಈ ಬಾರಿ ಶೇ.86.47 ರಷ್ಟು ಮತದಾನವಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಜಿಲ್ಲೆಯು, ಹಿಂದಿನ 2013 ಹಾಗೂ 2018 ರಲ್ಲಿಯೂ ಕೂಡ ಮತದಾನ ಪ್ರಮಾಣದಲ್ಲಿ ಹೆಚ್ಚಳ ಕಂಡು ಗಮನ ಸೆಳೆದಿದೆ.

ಟಜಿಲ್ಲೆಯಲ್ಲಿ 2013ರಲ್ಲಿ ಒಟ್ಟಾರೆ ಮತದಾನದಲ್ಲಿ ಶೇ.84.06 ದಾಖಲಾದರೆ, 2018 ರಲ್ಲಿ ಶೇ.84.80 ರಷ್ಟು ಶೇಕಡಾವಾರು ಮತದಾನ ಆಗಿದೆ. ಹಿಂದಿನ ಚುನಾವಣೆಗಳ ಮತದಾನ ಗಮನಿಸಿದರೆ ಪ್ರತಿ ಚುನಾವಣೆಯಿಂದ ಚುನಾವಣೆಗೆ ಜಿಲ್ಲೆಯಲ್ಲಿ ಶೇಕಡವಾರು ಮತದಾನ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಾ ರಾಜ್ಯದ ಗಮನ ಸೆಳೆಯುತ್ತಿದೆ.

ಸಾಮಾನ್ಯವಾಗಿ ನಗರ ಭಾಗದಲ್ಲಿ ಬುದ್ಧಿವಂತರು, ವಿದ್ಯಾವಂತರು ಹೆಚ್ಚಿನ ಪ್ರಮಾಣದಲ್ಲಿದ್ದರೂ ಕೆಲವೊಮ್ಮೆ ಮತಗಟ್ಟೆಗೆ ಬರಲು ಹಿಂದೇಟು ಹಾಕುತ್ತಾರೆ. ಮತದಾನಕ್ಕೆ ರಜೆ ಸಿಕ್ಕಿತು ಅಂತ ಮತದಾರರು ಮೋಜು, ಮಸ್ತಿಯಲ್ಲಿ ಪ್ರವಾಸಿ ತಾಣಗಳಿಗೆ ತೆರಳುವುದು ಸಾಮಾನ್ಯವಾಗಿದೆ.

ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡ ರಾಜಧಾನಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಆದರೆ, ಗ್ರಾಮೀಣ ಭಾಗದ ಜನತೆ ಮತದಾನಕ್ಕೆ ಹೆಚ್ಚು ಉತ್ಸಾಹ ತೋರುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವುದು ಜಿಲ್ಲೆಯ ಹಿಂದಿನ ಚುನಾವಣೆಗಳ ಮತದಾನ ಪ್ರಮಾಣ ಗಮನಿಸಿದರೆ ಸ್ಪಷ್ಟವಾಗಿ ಗೋಚರಿಸುತ್ತದೆ. ಜಿಲ್ಲೆಯಲ್ಲಿ 10.50 ಲಕ್ಷಕ್ಕೂ ಅಧಿಕ ಮತದಾರರಿದ್ದು, ಈ ಬಾರಿ ಚುನಾವಣೆಯಲ್ಲಿ 8.90 ಲಕ್ಷಕ್ಕೂ ಅಧಿಕ ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅಂದರೆ ಜಿಲ್ಲಾವಾರು ಮತದಾನ ಪ್ರಮಾಣದಲ್ಲಿ ಜಿಲ್ಲೆ ಹೆಚ್ಚಳ ಕಂಡಂತೆ ಜಿಲ್ಲೆಯ ತಾಲೂಕುಗಳು ಕೂಡ ಚುನಾವಣೆಯಿಂದ ಚುನಾವಣೆಗೆ ಹೆಚ್ಚಳ ಕಂಡಿವೆ.

Advertisement

ಜಿಲ್ಲೆಯು ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾಗಿರುವುದರ ಜೊತೆಗೆ ಮತದಾನ ಜಾಗೃತಿಗೆ ಕೈಗೊಂಡ ಹಲವು ಪರಿಣಾಮಕಾರಿ ಕಾರ್ಯಕ್ರಮಗಳ ಭಾಗವಾಗಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾನಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮನೆಯಿಂದಲೇ ಹಿರಿಯ ನಾಗರಿಕರಿಗೆ ಮತದಾನಕ್ಕೆ ಅವಕಾಶ ಕೊಟ್ಟರೂ ಬಹುತೇಕ ಹಿರಿಯ ನಾಗರಿಕರು ಮತಗಟ್ಟೆಗೆ ಬಂದು ಉತ್ಸಾಹದಿಂದ ಮತದಾನ ಮಾಡಿರುವುದು ಇದಕ್ಕೆ ತಾಜಾ ಉದಾಹಣೆ ಆಗಿದೆ.

ಜಿಲ್ಲಾದ್ಯಂತ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಜಾಗೃತಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಜಿಲ್ಲಾ ಸ್ವೀಪ್‌ ವತಿಯಿಂದ ನಡೆಸಲಾಗಿತ್ತು. ವಿಭಿನ್ನವಾಗಿ ಪಂಜಿನ ಮೆರವಣಿಗೆ, ಸೈಕಲ್‌, ಬೈಕ್‌ ರ್ಯಾಲಿ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಿದ್ದರ ಪರಿಣಾಮ ಈ ಬಾರಿ ಜಿಲ್ಲೆಯೂ ಶೇಕಡವಾರು ಮತದಾನದಲ್ಲಿ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ. ● ಪ್ರಕಾಶ್‌ ನಿಟ್ಟಾಲಿ, ಜಿಪಂ ಸಿಇಒ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next