Advertisement

ಚುನಾವಣಾ ಯಾತ್ರೆಗೆ ಮರುಳಾದಾನೇ ಮತದಾರ..! 

10:51 AM Nov 03, 2017 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಾಲೀಮು ಆರಂಭಿಸಿರುವ ಮೂರು ಪ್ರಮುಖ ರಾಜಕೀಯ ಪಕ್ಷಗಳು ಮತದಾರ ಪ್ರಭುವನ್ನು ಓಲೈಸಲು ಚುನಾವಣಾ ಯಾತ್ರೆಗಳ ಮೊರೆ ಹೋಗಿವೆ. ಆದರೆ, ಯಾತ್ರೆಗೆ ಮತದಾರ ಮರುಳಾಗುವನೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ನಡೆದ ಹಲವಾರು ಯಾತ್ರೆಗಳಲ್ಲಿ ದೊಡ್ಡ ಪ್ರಮಾಣದ ಮತ್ತು ಗಂಭೀರವಾಗಿ ಸಂಘಟಿಸಿದ ರಾಜಕೀಯ ಯಾತ್ರೆಗಳು ಮಾತ್ರ ಉತ್ತಮ ಫ‌ಲಿತಾಂಶವನ್ನು ನೀಡಿವೆ.

Advertisement

ರಾಜಕೀಯ ಉದ್ದೇಶದಿಂದ ಕೂಡಿದ ಹಲವಾರು ಯಾತ್ರೆಗಳು ನಿರೀಕ್ಷಿತ ಫ‌ಲ ನೀಡದೇ ವೈಫ‌ಲ್ಯ ಕಂಡ ನಿದರ್ಶನಗಳೂ ಇತಿಹಾಸದ ಪುಟಗಳಲ್ಲಿವೆ. ಕಿ 1984ರಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹೀನಾಯ ಸೋಲು ಕಂಡಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ರಾಜ್ಯಾದ್ಯಂತ ದಶದಿಕ್ಕುಗಳಿಂದ ದಾವಣಗೆರೆಗೆ ಎಂಬ ಯಾತ್ರೆ ಕೈಗೊಂಡು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫ‌ಲರಾದರು.

1999ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್‌.ಎಂ.ಕೃಷ್ಣ ಅವರು, ಪಾಂಚಜನ್ಯ ಮೊಳಗಿಸಿ ರಾಜ್ಯಾದ್ಯಂತ ರಥ ಯಾತ್ರೆ ನಡೆಸಿದರು. ಅದರ ಪರಿಣಾಮ 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಯಿತು. ರಾಜ್ಯದ ಮಟ್ಟಿಗೆ ಚುನಾವಣೆಗಾಗಿಯೇ ಯಾತ್ರೆಯನ್ನು ಘೋಷಣೆ ಮಾಡಿ, ರಾಜ್ಯಾದ್ಯಂತ ಪ್ರವಾಸ ನಡೆಸಿದ ಮೊದಲ ಚುನಾವಣಾ ಯಾತ್ರೆ ಇದಾಗಿತ್ತು. 

ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡೇ ಮಾಜಿ ಪ್ರಧಾನಿ ದೇವೇಗೌಡರು ನೀರಾ ಚಳವಳಿ ಹೆಸರಿನಲ್ಲಿ ವಿಠಲೇನಹಳ್ಳಿ ಗೋಲಿಬಾರ್‌ ಖಂಡಿಸಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸರ್ಕಾರದ ವಿರುದ್ಧ ಕೈಗೊಂಡ ಪಾದಯಾತ್ರೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮಾರಕವಾಗಿ ಜೆಡಿಎಸ್‌ ಹೆಚ್ಚಿನ ಸ್ಥಾನ ಗೆಲ್ಲಲು ಸಹಾಯಕವಾಯಿತು.

ಅಕ್ರಮ ಗಣಿಗಾರಿಕೆ ವಿರೋಧಿಸಿ 2010ರಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೂ “ನಾಡ ರಕ್ಷಣಾ ನಡಿಗೆ’ 320 ಕಿಲೋ ಮೀಟರ್‌ ಪಾದಯಾತ್ರೆ ನಡೆಸಿ ರೆಡ್ಡಿಗಳ ನಾಡಿನಲ್ಲಿಯೇ ಹೋಗಿ ಅವರ ವಿರುದ್ಧ ಕಾಂಗ್ರೆಸ್‌ ಘರ್ಜಿಸಿತ್ತು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಹೊಸಪೇಟೆಯಿಂದ ಕೂಡಲ ಸಂಗಮದವರೆಗೆ “ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ’ “ಉಲ್ಲಾಳದಿಂದ ಉಡುಪಿವರೆಗೂ’ ಕಾಂಗ್ರೆಸ್‌ ನಡಿಗೆ ಸಾಮರಸ್ಯದ ಕಡೆಗೆ ಎಂದು ಚುನಾವಣಾ ಯಾತ್ರೆಗಳನ್ನು ಕಾಂಗ್ರೆಸ್‌ ಮಾಡಿತ್ತು. ಅದು 2013ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಲು ಕಾರಣವಾಯಿತು. ಬಳ್ಳಾರಿ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.

Advertisement

ಚುನಾವಣೆ ಯಾತ್ರೆ ನಡೆಸಿ ಹಿರೋಗಳಾದವರು ಪಾಂಚಜನ್ಯ ಯಾತ್ರೆಯ ಸಾರಥಿ ಕೃಷ್ಣ, ಬಳ್ಳಾರಿ ಪಾದಯಾತ್ರೆಯ ಸಾರಥಿ ಸಿದ್ದರಾಮಯ್ಯ, ದಶದಿಕ್ಕುಗಳಿಂದ ದಾವಣಗೆರೆ ಯಾತ್ರೆ ನಡೆಸಿದ್ದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿ ರಾಜ್ಯವಾಳಿದರು. 

ಫ‌ಲ ನೀಡಲಿಲ್ಲ
2008ರಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೈದರಾಬಾದ್‌ ಮತ್ತು ಮುಂಬೈ ಪ್ರಾಂತವಾರು ಪ್ರತ್ಯೇಕ ಯಾತ್ರೆಗಳನ್ನು ಮಾಡಿದ್ದರು. ಆದರೆ, ಬಿಜೆಪಿಯವರಿಗೆ ಅಧಿಕಾರ ಹಸ್ತಾಂತರ ಮಾಡದ ಆರೋಪ ಹಿನ್ನೆಲೆಯಲ್ಲಿ ಎಚ್‌ಡಿಕೆ ಯಾತ್ರೆ ಅಷ್ಟೊಂದು ಪರಿಣಾಮ ಬೀರಲಿಲ್ಲ. 

ಬಿಜೆಪಿಯಿಂದ ಸಿಡಿದು ಹೋಗಿ
ಬಿಎಸ್‌ಆರ್‌ ಪಕ್ಷ ಕಟ್ಟಿದ್ದ ಶ್ರೀರಾಮುಲು ಕೂಡ 2013ರ ಚುನಾವಣೆ ಮುಂದಿಟ್ಟುಕೊಂಡು ರಾಜ್ಯದಲ್ಲಿ ಎರಡು ಬಾರಿ ಯಾತ್ರೆ ನಡೆಸಿದರು. ಬಸವಕಲ್ಯಾಣದಿಂದ ಬೆಂಗಳೂರುವರೆಗೆ 921 ಕಿಲೋ ಮೀಟರ್‌ ಯಾತ್ರೆ, ಮತ್ತು ಕರಾವಳಿಯಲ್ಲಿ ಮತ್ತೂಂದು ಯಾತ್ರೆ ನಡೆಸಿದರು. ಆದರೆ, ಅವರ ಪ್ರಯತ್ನಕ್ಕೆ ಪ್ರತಿಫ‌ಲ ದೊರೆಯಲಿಲ್ಲ. 

ಈಗಿನ ಕಾಲದಲ್ಲಿ ರಥಯಾತ್ರೆಗಳ ಮೂಲಕ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಈಗ ಎಲ್ಲ ಜನ ಜಾಣರಾಗಿದ್ದಾರೆ. ಯಾವ ಪಕ್ಷ ಏನು ಕೆಲಸ ಮಾಡುತ್ತಿದೆ ಎನ್ನುವುದನ್ನು ನೋಡಿಕೊಂಡು ಮತ ಹಾಕುತ್ತಾರೆ. ಆದರೆ, ರಾಜಕೀಯ ಪಕ್ಷಗಳು ಜನರನ್ನು ಸೆಳೆಯಲು ಏನಾದ್ರೂ ಮಾಡಬೇಕಲ್ಲಾ. ಅದಕ್ಕಾಗಿ ಈ ಯಾತ್ರೆಗಳು ನಡೆಯುತ್ತವೆ ಅಷ್ಟೆ.
 ● ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

ರಾಜಕೀಯ ಲಾಭದ ಉದ್ದೇಶವಿರುವ ಯಾತ್ರೆಗಳು ಯಶಸ್ವಿ ಆಗುವುದು ವಿರಳ. ಜನರ ಬದುಕಿಗೆ ಸಂಬಂಧಿಸಿದ ಯಾತ್ರೆಗಳಾದರೆ, ಅದಕ್ಕೆ ಜನರಿಂದ ಸ್ಪಂದನೆ ದೊರೆಯುತ್ತದೆ. ರಾಜಕೀಯ ಪ್ರೇರಿತ ಯಾತ್ರೆಗಳನ್ನು ಜನರು ಮನರಂಜನೆಯಾಗಿ ನೋಡುತ್ತಾರೆ. ಜೆಪಿ, ವಿನೊಭಾ ಭಾವೆ, ಅಣ್ಣಾ ಹಜಾರೆ, ಇತ್ತೀಚೆಗೆ ಜಗ್ಗಿ ವಾಸುದೇವ ಅವರ ಯಾತ್ರೆಗಳು ಜನರ ಸಮಸ್ಯೆಗೆ ಕುರಿತಾಗಿದ್ದರಿಂದ ಜನತೆ ಸ್ಪಂದಿಸಿದ್ದು, ಯಶಸ್ವಿಯಾಗಿದ್ದವು.
 ● ಬಿ.ಎಲ್‌. ಶಂಕರ್‌, ಕೆಪಿಸಿಸಿ ಉಪಾಧ್ಯಕ್ಷ

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next