Advertisement
ನಗರದಲ್ಲಿ ಮತದಾರರ ಸಂಖ್ಯೆ 91.13 ಲಕ್ಷವಿದ್ದು, ಅವರಿಗೆ ಮತದಾರರ ಚೀಟಿ ತಲುಪಿಸುವ ಬೂತ್‌ಮಟ್ಟದ ಅಧಿಕಾರಿಗಳಿರುವುದು ಬರೀ 8,278 ಮಾತ್ರ. ಅಲ್ಲದೆ, ಇರುವ ಕಾಲಾವಕಾಶ ಕೇವಲ ಮೂರು ದಿನಗಳು. ಈ ಅಲ್ಪಾವಧಿಯಲ್ಲಿ ಬೆಂಗಳೂರಿನಂತಹ ನಗರದಲ್ಲಿ ನಿತ್ಯ ಸರಾಸರಿ 350 ಮತದಾರರನ್ನು ಭೇಟಿ ಮಾಡಿ, ಸ್ಲಿಪ್ ತಲುಪಿಸುವುದು ಅಕ್ಷರಶಃ ಸವಾಲಾಗಿದೆ. ಹಾಗಾಗಿ, ಈ ಪ್ರಕ್ರಿಯೆ ಸಮರ್ಪಕವಾಗಿ ನಡೆಯವುದು ಅನುಮಾನ ಎನ್ನಲಾಗುತ್ತಿದೆ.
Related Articles
Advertisement
ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳಲ್ಲಂತೂ ಬೂತ್‌ಮಟ್ಟದ ಅಧಿಕಾರಿಗಳನ್ನು ಒಳಗೆ ಕೂಡ ಬಿಟ್ಟುಕೊಳ್ಳುವುದಿಲ್ಲ. ಇಂತಹ ವಾಸ್ತವ ಸಮಸ್ಯೆಗಳು ಕಾಡುತ್ತಿವೆ. ಸ್ಲಿàಪ್ ನೀಡಲು ಮತದಾರರು ಅವರೇ ಎಂದು ಖಾತ್ರಿ ಮಾಡಿಕೊಳ್ಳಬೇಕು ಹೀಗಾಗಿ, ಮನೆಯಲ್ಲಿ ಹಾಕಿ ಬರುವುದೂ ಕಷ್ಟಸಾಧ್ಯ. ಆದ್ದರಿಂದ ಇದೊಂದು ಸವಾಲಿನ ಕೆಲಸ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಚುನಾವಣಾ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಸಮಸ್ಯೆಯೇ ಅಲ್ಲ; ಚುನಾವಣಾಧಿಕಾರಿ: ತಲಾ ಒಬ್ಬ ಬೂತ್‌ಮಟ್ಟದ ಅಧಿಕಾರಿಗೆ (ಬಿಎಲ್‌ಒ) ಸರಾಸರಿ 1,100 ಮತದಾರರು ಬರುತ್ತಾರೆ. ನಿತ್ಯ 200ರಿಂದ 300 ಜನರನ್ನು ಅನಾಯಾಸವಾಗಿ ತಲುಪುತ್ತಾರೆ. ಇದೊಂದು ಸಮಸ್ಯೆಯೇ ಅಲ್ಲ. ಅಷ್ಟಕ್ಕೂ ಈ ಬಿಎಲ್‌ಒಗಳು ಸ್ಥಳೀಯರು ಹಾಗೂ ಈ ಮೊದಲೇ ಮತದಾರರ ನೋಂದಣಿ ಮಾಡಿಸಲು ಮನೆ-ಮನೆಗೆ ತೆರಳಿದ್ದರಿಂದ ಮನೆಗಳು ಪರಿಚಿತವಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್ ಹೇಳುತ್ತಾರೆ.
ಬಿಎಲ್‌ಒಗಳೇ ಅಲಭ್ಯ?: ಈ ಮೊದಲು ಇದೇ ಬಿಎಲ್‌ಒಗಳಿಂದ ಮನೆ-ಮನೆಗೆ ತೆರಳಿ ಮತದಾರರ ನೋಂದಣಿ ಮಾಡಿಸುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ, ಬಹುತೇಕ ಕಡೆ ಈ ಬಿಎಲ್‌ಒಗಳು ಭೇಟಿಯೇ ನೀಡಿಲ್ಲ ಎಂಬ ದೂರುಗಳಿವೆ ಎಂದು ಯುವ ಮತದಾರ ನೋಂದಣಿ ಮತ್ತು ಜಾಗೃತಿ ಅಭಿಯಾನ ಕಾರ್ಯಕರ್ತ ಆನಂದ್ ತೀರ್ಥ ಆರೋಪಿಸುತ್ತಾರೆ.
ಆಶಾ ಕಾರ್ಯಕರ್ತರು ಅಥವಾ ವಿವಿಧ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರ ನೆರವು ಪಡೆಯುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಬೇಕು. ಇದರಿಂದ ವೋಟರ್ ಸ್ಲಿಪ್ ಸಮರ್ಪಕ ವಿತರಣೆ ಸಾಧ್ಯವಾಗುತ್ತದೆ ಎಂದು ತಜ್ಞರೊಬ್ಬರು ತಿಳಿಸಿದರು. ಆದರೆ, ಈ ಕಾರ್ಯವನ್ನು ಬೂತ್‌ಮಟ್ಟದ ಅಧಿಕಾರಿಗಳಿಂದಲೇ ನಡೆಸಬೇಕಾಗುತ್ತದೆ. ಹಾಗೂ ಆ ಅಧಿಕಾರಿಗಳು ಶೇ. 100ರಷ್ಟು ಈ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ ಎಂದು ಎನ್. ಮಂಜುನಾಥ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಲಕ್ಷ ಮತದಾರರಿಗೆ ಇನ್ನೂ ಎಪಿಕ್ ಕಾರ್ಡ್ ಸಿಕ್ಕಿಲ್ಲ!: ಮತದಾನಕ್ಕೆ ಇನ್ನು ಹತ್ತು ದಿನ ಮಾತ್ರ ಬಾಕಿ ಇದೆ. ಆದರೂ ನಗರದಲ್ಲಿ ಸುಮಾರು ಒಂದು ಲಕ್ಷ ಮತದಾರರಿಗೆ ಇನ್ನೂ ಮತದಾರರ ಗುರುತಿನ ಚೀಟಿ ಸಿಕ್ಕಿಲ್ಲ. ನಗರದಲ್ಲಿ 91.13 ಲಕ್ಷ ಪೈಕಿ ಈ ಬಾರಿ ಹೊಸದಾಗಿ 4.40 ಲಕ್ಷ ಮತದಾರರು ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ಶೇ. 75ರಿಂದ 80ರಷ್ಟು ಜನರಿಗೆ “ಎಪಿಕ್ ಕಾರ್ಡ್’ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್ ಹೇಳುತ್ತಾರೆ.
ಚುನಾವಣಾಧಿಕಾರಿಗಳ ಪ್ರಕಾರವೇ ಲೆಕ್ಕಹಾಕಿದರೂ 90 ಸಾವಿರಕ್ಕೂ ಅಧಿಕ ಜನರಿಗೆ ಮತದಾರರ ಗುರುತಿನ ಚೀಟಿ ಈಗಲೂ ಮರೀಚಿಕೆಯಾಗಿದೆ. ಅದರಲ್ಲೂ ಎಪಿಕ್ ಕಾರ್ಡ್ ವಂಚಿತರ ಪೈಕಿ ಬಹುತೇಕರು 2017ರ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನೋಂದಣಿ ಆಗಿದ್ದಾರೆ.
ವಾರ್ಡ್ ಕಚೇರಿಗಳಲ್ಲಿ ಮತದಾರರ ಗುರುತಿನ ಚೀಟಿ ಕೇಳಿದರೆ, ಕಂದಾಯ ಅಧಿಕಾರಿಗಳ ಬಳಿ ಕಳುಹಿಸುತ್ತಾರೆ. ಅಲ್ಲಿಗೆ ಹೋದರೆ, ಈಗಾಗಲೇ ವಾರ್ಡ್ ಕಚೇರಿಗೆ ಕೊಟ್ಟಾಗಿದೆ ಎಂಬ ಉತ್ತರ ಬರುತ್ತದೆ. ಇನ್ನು “ಬೆಂಗಳೂರು ಒನ್’ನಲ್ಲಿ ಕೂಡ ಇದೇ ಉತ್ತರ ಬರುತ್ತದೆ ಎಂದು ಅಕ್ಟೋಬರ್‌ನಲ್ಲಿ ನೋಂದಣಿಯಾದ ಬಸವನಗುಡಿಯ ಮೋಹನ್ ಕೇಳುತ್ತಾರೆ.
* ವಿಜಯಕುಮಾರ್ ಚಂದರಗಿ