ಹಾವೇರಿ: ಜಿಲ್ಲೆಯಾದ್ಯಂತ ಯುವ ಮತದಾರರ ನೋಂದಣಿಗಾಗಿ ಚುನಾವಣೆ ಆಯೋಗದ ಸೂಚನೆಯಂತೆ ಜ.6, 7 ಹಾಗೂ 8 ರಂದು ಜಿಲ್ಲೆಯಾದ್ಯಂತ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯುವ ಮತದಾರರ ನೋಂದಣಿಗೆ ಎಲ್ಲ ಅಧಿಕಾರಿಗಳು ಆದ್ಯತೆ ಮೇಲೆ ಕಾರ್ಯನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ| ಎನ್. ತಿಪ್ಪೇಸ್ವಾಮಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಮಿಂಚಿನ ನೋಂದಣಿ ಕುರಿತು ತಹಶೀಲ್ದಾರರು, ಉಪ ವಿಭಾಗಾ ಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಮಾತನಾಡಿದ ಅವರು, ಮಿಂಚಿನ ನೋಂದಣಿ ದಿನ ಎಲ್ಲ ಬಿಎಲ್‌ಒಗಳು ಬೆಳಗ್ಗೆ 8 ರಿಂದ ಸಂಜೆ 6ರ ವರೆಗೆ ಹಾಜರಿದ್ದು ಮತದಾರರ ನೋಂದಣಿಗೆ ಆದ್ಯತೆ ನೀಡುವಂತೆ ತಿಳಿಸಿದರು. ಮತದಾರರ ನೋಂದಣಿಗೆ 18 ವರ್ಷಪೂರ್ಣ ಗೊಂಡಿರಬೇಕು. 18ರಿಂದ 20ವರ್ಷ ವಯೋಮಾನದ ಮತದಾರರಾಗಿ ನೋಂದಾಯಿಸಿಕೊಳ್ಳದವರನ್ನು ಮತದಾರರಾಗಿ ಸೇರ್ಪಡೆಗೊಳಿಸುವ ಕಾರ್ಯ ಕೈಗೊಳ್ಳಬೇಕು. ಈ ಕುರಿತು ತಾಲೂಕು-ಜಿಲ್ಲಾ ಮಟ್ಟದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮತದಾರರ ಜಾಗೃತಿ ಕಾರ್ಯಕ್ರಮದ ಮೂಲಕ ಮಿಂಚಿನ ಮತದಾರರ ನೋಂದಣಿ ಕುರಿತಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು, ಜಾಗೃತಿ ಮೂಡಿಸಬೇಕು ಎಂದರು.
ಕಾಲೇಜುಗಳಿಗೆ ಭೇಟಿ ನೀಡಿ ಯುವ ಮತದಾರರ ನೋಂದಣಿ ಮಾಡಿಕೊಳ್ಳಬೇಕು. ಈ ಕುರಿತು ಜಾಗೃತಿ ಮೂಡಿಸಬೇಕು. ಪ್ರತಿ ಕಾಲೇಜುಗಳಿಗೆ ಓರ್ವ ಅಧಿಕಾರಿಗಳನ್ನು ನಿಯೋಜಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು, ಜಿಪಂ ಸಿಇಒಗಳು ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಪ.ಪೂ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರತಿ ಕಾಲೇಜಿನ ಪ್ರಾಚಾರ್ಯರಿಗೆ ಕನಿಷ್ಟ ನೋಂದಣಿ ಕುರಿತಂತೆ ಗುರಿ ನಿಗದಿಪಡಿಸಿ ಅರ್ಹ ಯುವ ಮತದಾರರನ್ನು ನೋಂದಣಿಗೆ ಆದ್ಯತೆ ನೀಡಬೇಕು ಎಂದರು.
ಪ್ರಭಾತಪೇರಿ ಆಯೋಜಿಸಿ: ಮತದಾರರ ಮಿಂಚಿನ ನೋಂದಣಿ ಕುರಿತಂತೆ ಎಲ್ಲ ಬ್ಲಾಕ್ ಮಟ್ಟದ ಮತದಾರರ ನೋಂದಣಿ ಅಧಿಕಾರಿಗಳು ಹಾಗೂ ಮೇಲುಸ್ತುವಾರಿ ಅಧಿಕಾರಿಗಳ ಸಭೆ ಕರೆದು ಮಾಹಿತಿ ನೀಡಬೇಕು. ಮತದಾರರ ಮಿಂಚಿನ ನೋಂದಣಿ ಆರಂಭವಾಗುವ ಜ. 6ರಂದು ಪ್ರಭಾತಪೇರಿ ಆಯೋಜಿಸಬೇಕು. ಮತದಾರರ ನೋಂದಣಿ ಕುರಿತಂತೆ ಜಾಗೃತಿ ಮೂಡಿಸಬೇಕು. ಎಲ್ಲ ಕಾಲೇಜುಗಳಿಗೆ, ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ನೋಂದಣಿಗೆ ಸ್ಫೂರ್ತಿ ತುಂಬಬೇಕು. ನೋಂದಣಿಗೆ ನಮೂನೆ 6ನ್ನು ವಿತರಿಸಿ ನೋಂದಣಿಗೆ ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಸವಣೂರ ಉಪಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಪ್ರಕಾಶ, ಜಿಪಂ ಸಹಾಯಕ ಕಾರ್ಯದರ್ಶಿ ಜಾಫರ ಸುತಾರ್, ಚುನಾವಣಾ ತಹಶೀಲ್ದಾರ್ ಪ್ರಶಾಂತ ನಾಲವಾರ, ಪ.ಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ, ಜಿಲ್ಲೆಯ ಎಲ್ಲ ತಹಶೀಲ್ದಾರರು ಇದ್ದರು.