Advertisement

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆರಂಭ

03:56 PM Sep 05, 2020 | Suhan S |

ಧಾರವಾಡ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ 2020-21ನೇ ಸಾಲಿಗಾಗಿ ಜಿಲ್ಲೆಯ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭವಾಗಿದೆ. ಹೊಸ ಮತದಾರರಸೇರ್ಪಡೆ, ತಿದ್ದುಪಡಿ, ಸ್ಥಳ ಬದಲಾವಣೆ ಸೇರಿದಂತೆ ವಿವಿಧ ಹಕ್ಕು, ಆಕ್ಷೇಪಣೆಗಳಿಗಾಗಿ ಅರ್ಹ ಮತದಾರರು ನಿಗದಿತ ಅರ್ಜಿ ನಮೂನೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ನಿತೇಶ ಪಾಟೀಲ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿ ಧಿಗಳ ಸಭೆ ಕೈಗೊಂಡು ಅವರು ಮಾತನಾಡಿದರು. ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿ 6, 7, 8 ಮತ್ತು 8(ಎ) ನಮೂನೆಗಳನ್ನು ಪರಿಶೀಲಿಸಿ, ಪೂರಕ ಮತದಾರ ಪಟ್ಟಿಯ ಕರಡು ಪ್ರತಿಯನ್ನು ನ. 16ರಂದು ಪ್ರಕಟಿಸಲಾಗುತ್ತದೆ. ತಕರಾರು ಸಲ್ಲಿಸಲು ಡಿ. 15ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ನ. 16ರಿಂದ ಡಿ.15ರೊಳಗಿನ ಎರಡು ಶನಿವಾರ ಮತ್ತು ಎರಡು ರವಿವಾರಗಳನ್ನು ಗುರುತಿಸಿ, ಮತದಾರ ಪಟ್ಟಿ ಪರಿಷ್ಕರಣೆ, ನೋಂದಣಿ ಅಭಿಯಾನವನ್ನು ಮುಖ್ಯ ಚುನಾವಣಾಧಿ ಕಾರಿಗಳ ಸೂಚನೆಯಂತೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮತದಾರರಿಂದ ಬಂದ ಹೆಸರು ಸೇರ್ಪಡೆ, ಹೆಸರು, ವಿಳಾಸ ತಿದ್ದುಪಡಿ, ವರ್ಗಾವಣೆ, ಸೇರ್ಪಡೆಯಾದ ಹೆಸರು ರದ್ದುಗೊಳಿಸುವ ಕುರಿತು ಸ್ವೀಕರಿಸಿದ ಎಲ್ಲ ಅರ್ಜಿ ನಮೂನೆಗಳನ್ನು ಪರಿಶೀಲಿಸಿ, ತಕರಾರು ಅವ ಧಿಯನ್ನು 2021 ಜ. 5ರಂದು ಮುಕ್ತಾಯಗೊಳಿಸಲಾಗುತ್ತದೆ. ಜ. 15ರಂದು ವಿಶೇಷ ಪರಿಷ್ಕರಣೆಗೆ ಒಳಪಟ್ಟ ಮತದಾರ ಯಾದಿಯ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ ಎಂದರು.

ಜಿಲ್ಲೆಯ ಎಲ್ಲ ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂ ಧಿಸಿ ಭಾರತ ಚುನಾವಣಾ ಆಯೋಗದ ಆ. 7ರ ನಿರ್ದೇಶನದಂತೆ ಮತದಾರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಮತಗಟ್ಟೆ ಪ್ರದೇಶ, ಸಾರ್ವಜನಿಕ ಸ್ಥಳ, ನಗರ ಸ್ಥಳೀಯ ಕಚೇರಿ, ಗ್ರಾಮಸಭಾ ಕಚೇರಿ, ಮತದಾರರ ನೋಂದಣಿ ಅಧಿ ಕಾರಿಗಳು ಮತ್ತು ಸಹಾಯಕ ಮತದಾರರ ನೊಂದಣಿ ಅಧಿಕಾರಿಗಳ ಕಚೇರಿಗಳಲ್ಲಿ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ ಸೈಟ್‌  //www.ceokarnataka.kar.nic.in  ದಲ್ಲಿ ಸಾರ್ವಜನಿಕರು ಅವಗಾಹನೆಗಾಗಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ತಮ್ಮ ಹೆಸರು ಇರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನ. 16 ರಿಂದ ಡಿ. 15ರ ವರೆಗೆಸಾರ್ವಜನಿಕರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಹಾಗೂ ಇತರೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಮತಗಟ್ಟೆ ಅಧಿಕಾರಿ, ಮತದಾರರ ನೋಂದಣಿ ಅ ಧಿಕಾರಿ, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಲ್ಲಿ ಹಾಗೂ //www. ceokarnataka.kar.nic.in  ಮೂಲಕ ಸಹ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

Advertisement

2021 ಜ. 1ಕ್ಕೆ 18 ವರ್ಷ ಪೂರ್ಣಗೊಳ್ಳುವ ಭಾರತದ ನಾಗರಿಕರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲು ಅರ್ಜಿ ನಮೂನೆ-6 ನ್ನು ಸಲ್ಲಿಸಬೇಕು. ಹೆಸರು ಕಡಿಮೆ ಮಾಡಲು ಅರ್ಜಿ ನಮೂನೆ-7, ಮತದಾರರ ಹೆಸರು, ಇತರೆ ತಿದ್ದುಪಡಿಗಾಗಿ ಅರ್ಜಿ ನಮೂನೆ-8 ಮತ್ತು ಮತದಾರರು ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಇನ್ನೊಂದು ವಿಭಾಗ, ಭಾಗ ಸಂಖ್ಯೆಗೆ ವರ್ಗಾವಣೆ ಮಾಡುವುದಿದ್ದಲ್ಲಿ ಅರ್ಜಿ ನಮೂನೆ- 8ಎ ರಲ್ಲಿ ಸಲ್ಲಿಸಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಂದು ರಾಜಕೀಯ ಪಕ್ಷಗಳು ಮತಗಟ್ಟೆ ಮಟ್ಟದಲ್ಲಿ ತಮ್ಮ ಏಜೆಂಟರನ್ನು ನೇಮಕ ಮಾಡಿ, ನಿಗದಿತ ನಮೂನೆಯಲ್ಲಿ ಮಾಹಿತಿ ಸಲ್ಲಿಸಬೇಕು ಎಂದರು.

ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟರು ನ. 16ರಿಂದ ಡಿ. 15ರೊಳಗೆ ಹಮ್ಮಿಕೊಳ್ಳಲಿರುವ ವಿಶೇಷ ಅಭಿಯಾನದಂದು ಹಕ್ಕು, ಆಕ್ಷೇಪಣೆ ಅರ್ಜಿಗಳನ್ನು ಸ್ವೀಕರಿಸುವ ಮತಗಟ್ಟೆಗಳಲ್ಲಿ ಹಾಜರಿದ್ದು ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಏಜೆಂಟರು ಅರ್ಜಿಗಳನ್ನು ಸಗಟಾಗಿ ನೀಡಲು ಅವಕಾಶವಿಲ್ಲ. ಪ್ರತಿಯೊಬ್ಬ ಮತಗಟ್ಟೆ ಏಜೆಂಟರು ಒಂದು ಸಲಕ್ಕೆ ಅಥವಾ ಒಂದು ದಿನಕ್ಕೆ 10 ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದು. ಈ ವಿಶೇಷ ಪರಿಷ್ಕರಣೆ ಅವಧಿಯಲ್ಲಿ ಮತಗಟ್ಟೆ ಏಜೆಂಟ್‌ ಒಟ್ಟು 30 ಅರ್ಜಿಗಳನ್ನು ಮಾತ್ರ ಮತಗಟ್ಟೆ ಅಧಿಕಾರಿಗಳ ಮೂಲಕ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.

ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿ, ಸಭೆ ನಿರ್ವಹಿಸಿದರು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದಮಲ್ಲಿಕಾರ್ಜುನ ಸಾಹುಕಾರ, ರಾಮಪ್ಪ ಬಡಿಗೇರ, ಪ್ರೇಮನಾಥ ಚಿಕ್ಕತುಂಬಳ, ದೇವರಾಜ ಕಂಬಳಿ, ಪ್ರಕಾಶ ಹಳಿಯಾಳ, ವಿನೋದ ಘೋಡಕೆ, ಜಾವಿದ್‌ ಬೆಳಗಾಂವಕರ, ಸಿದ್ದು ಕಲ್ಯಾಣಶೆಟ್ಟಿ, ಬಸವರಾಜ ಗರಗ, ಸಂತೋಷ ಚವ್ಹಾಣ, ವಿಕಾಸ ಸೊಪ್ಪಿನ, ಸಂತೋಷ ನರಗುಂದ, ಮಹೇಶ ಬುರ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ತಹಶೀಲ್ದಾರ್‌ ಎಚ್‌. ಎನ್‌. ಬಡಿಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next