Advertisement

ಮತದಾರರ ಪಟ್ಟಿ ಪರಿಷ್ಕರಣೆ ಸಹಕಾರ ಅಗತ್ಯ: ಕಳಸದ

03:25 PM Nov 19, 2021 | Team Udayavani |

ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣಕ್ಕೆ ವಿವಿಧ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಆಗಿರುವ ಮತದಾರರ ಪಟ್ಟಿ ವೀಕ್ಷಕ ಶಿವಯೋಗಿ ಕಳಸದ ಹೇಳಿದರು.

Advertisement

ಜಿಪಂ ಸಭಾ ಭವನದಲ್ಲಿಂದು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜರುಗಿದ ವಿವಿಧ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಈ ಕಾರ್ಯಕ್ಕೆ ವಿವಿಧ ರಾಜಕೀಯ ಮುಖಂಡರ ಸಹಕಾರ ಅಗತ್ಯವಾಗಿದೆ. ಜಿಲ್ಲೆಯಲ್ಲಿ 1719 ಮತಗಟ್ಟೆಗಳು ಇದ್ದು, ರಾಜಕೀಯ ಪಕ್ಷದ ಮುಖಂಡರು ಪ್ರತಿಯೊಂದು ಮತಗಟ್ಟೆಗಳಿಗೆ ಬೂತ್‌ ಮಟ್ಟದ ಏಜೆಂಟರ್‌ನ್ನು ನೇಮಿಸಿ ಪಟ್ಟಿ ನೀಡುವಂತೆ ತಿಳಿಸಿದರು.

ಜನವರಿ 1, 2022ನ್ನು ಅರ್ಹತಾ ದಿನಾಂಕವನ್ನು ಆದರಿಸಿ ಈ ದಿನಾಂಕಕ್ಕೆ 18 ವರ್ಷ ಪೂರೈಸುವವರ ಹೆಸರನ್ನು ನೋಂದಾವಣಿ, ತಿದ್ದುಪಡಿ, ಒಂದು ಮತಕ್ಷೇತ್ರದಿಂದ ಮತ್ತೂಂದು ಮತಕ್ಷೇತ್ರಕ್ಕೆ ವರ್ಗಾವಣೆ, ಅವಕಾಶ ಕಲ್ಪಿಸಿ ನಮೂನೆ 6, 7, 8 ಹಾಗೂ 8ಎ ಮೂಲಕ ಅರ್ಜಿಗಳನ್ನು ಪಡೆಯಲಾಗಿದೆ. ಡಿ. 8ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪಡೆಯಲಾಗುತ್ತಿದೆ.

ಅವುಗಳ ಪರಿಶೀಲನೆ ಡಿ. 27ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಜನವರಿ 13, 2022ರಂದು ಪ್ರಕಟಿಸಲಾಗುತ್ತಿದೆ ಎಂದರು. ಹಕ್ಕು ಮತ್ತು ಆಕ್ಷೇಪಣೆ ಹಂತದಲ್ಲಿ ಯಾವುದೇ ತರಹದ ನ್ಯೂನ್ಯತೆಗಳ ಬಗ್ಗೆ ಗಮನಕ್ಕೆ ಬಂದಲ್ಲಿ ಸಂಬಂಧಿಸಿದ ಆಯಾ ತಾಲೂಕಿನ ತಹಶೀಲ್ದಾರ್‌ ಗೆ ಆಕ್ಷೇಪಣೆ ಸಲ್ಲಿಸಲು ತಿಳಿಸಿದರು. ಪ್ರತಿ ಹಂತದಲ್ಲಿ ರ್‍ಯಾಂಡಮ್‌ ಆಗಿ ಪರಿಶೀಲನೆ ಮಾಡುವುದಾಗಿ ತಿಳಿಸಿದ ಅವರು, ಈ ಕಾರ್ಯಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಲಹೆಗಳನ್ನು ಪಡೆಯಲಾಯಿತು. ಹೊಸದಾಗಿ ಸೇರ್ಪಡೆಗೊಂಡು ಒಂದು ಕುಟುಂಬದ ಸದಸ್ಯರ ಹೆಸರನ್ನು ಒಂದೇ ಕಡೆ ಬರುವಂತೆ ಆಗಬೇಕು. ಒಂದು ಮತದಾರರ ಹೆಸರು ವಿವಿಧ ಮತಗಟ್ಟೆಗಳಲ್ಲಿ ಬರುತ್ತಿದ್ದು, ಅವುಗಳ ಬಗ್ಗೆ ಗಮನ ಹರಿಸಿ ತೆಗೆದುಹಾಕಲು ಕ್ರಮ ವಹಿಸಲು ಸಭೆಗೆ ತಿಳಿಸಿದರು. ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next