Advertisement

ಆಯೋಗದಿಂದ “ಮತದಾರ ಪಟ್ಟಿ ಶುದ್ಧೀಕರಣ ಅಭಿಯಾನ’

03:45 AM Jul 04, 2017 | Team Udayavani |

ಬೆಂಗಳೂರು: ಯುವ ಜನತೆಯನ್ನು ಮತದಾರರನ್ನಾಗಿಸಿ ಅವರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕೃತವಾಗಿ ಪಾಲ್ಗೊಳ್ಳುವಂತೆ ಮಾಡಲು ಕೇಂದ್ರ ಚುನಾವಣಾ ಆಯೋಗ “ಮತದಾರ ಪಟ್ಟಿ ಶುದ್ಧೀಕರಣ’ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.

Advertisement

ಜುಲೈ 1ರಿಂದ 31ರವರೆಗೆ ರಾಷ್ಟ್ರಾದ್ಯಂತ ಈ ವಿಶೇಷ ಅಭಿಯಾನ ನಡೆಯಲಿದ್ದು, ರಾಜ್ಯದಲ್ಲಿ ಜುಲೈ 3ರಿಂದ ಅಭಿಯಾನದ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಮತದಾರ ಪಟ್ಟಿ ಶುದ್ಧೀಕರಣ ಅಭಿಯಾನದಲ್ಲಿ 18 ವರ್ಷ ದಾಟಿದ ಯುವಕ-ಯುವತಿಯರನ್ನು ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಉತ್ತೇಜಿಸುವುದರ ಜೊತೆಗೆ ಹೊಸರಬ ಸೇರ್ಪಡೆ, ಸ್ಥಳಾಂತರಗೊಂಡವರು, ಮರಣ ಹೊಂದಿದವರ ಹೆಸರಗಳನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕುವುದು, ವಿಳಾಸ ಬದಲಾವಣೆ, ಹೆಸರು ತಿದ್ದುಪಡಿ ಮತ್ತಿತರಕ್ಕೂ ಅವಕಾಶ ಇರುತ್ತದೆ.

ಯುವ ಜನತೆಯನ್ನು ಮತದಾರರನ್ನಾಗಿಸಲು ಅಭಿಯಾನದ ಅಂಗವಾಗಿ ರಾಜ್ಯದಲ್ಲಿ ಜುಲೈ 8 ಹಾಗೂ 22 ಅಥವಾ 9 ಹಾಗೂ 23ರಂದು ರಾಜ್ಯಾದ್ಯಂತ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಬೂತ್‌ ಮಟ್ಟದಲ್ಲಿ, ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಶಿಬಿರಗಳನ್ನು ಏರ್ಪಡಿಸಲಾಗಿದೆ. ಈ ದಿನಾಂಕಗಳಲ್ಲಿ ಆಯಾ ಮತಗಟ್ಟೆಯ ಮತಗಟ್ಟೆ ಅಧಿಕಾರಿಗಳು ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಅರ್ಜಿ ನಮೂನೆ-6 ತೆಗೆದುಕೊಂಡು ಜನವಸತಿ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ಕೊಡಲಿದ್ದಾರೆ. ಅಲ್ಲದೇ ಕಾಲೇಜುಗಳಿಗೆ ತೆರಳಿ ಹೊಸ ಮತದಾರರಿಂದ ಸ್ಥಳದಲ್ಲೇ ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳಲಿದ್ದಾರೆ. ಉಳಿದ ದಿನಗಳಲ್ಲಿ ಹೆಸರು ಸೇರ್ಪಡೆಯ ಜೊತೆಗೆ ಮರುಸೇರ್ಪಡೆ, ತಿದ್ದುಪಡಿ, ಬದಲಾವಣೆ, ತೆಗೆದು ಹಾಕುವ ಕಾರ್ಯ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ 2015ರ ಆದ ಮತದಾರ ಪಟ್ಟಿ ಪರಿಷ್ಕರಣೆಯಂತೆ 2.39 ಕೋಟಿ ಪುರುಷರು, 2.30 ಕೋಟಿ ಮಹಿಳೆಯರು, 4,181 ಇತರರು ಸೇರಿ ಒಟ್ಟು 4.70 ಕೋಟಿ ಮತದಾರರು ಇದ್ದಾರೆ. ಕಾಲ-ಕಾಲಕ್ಕೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಲಾಗಿರುತ್ತದೆ. ಅದರಂತೆ ಈ ಬಾರಿಯೂ ಮತದಾರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ, ಯುವ ಜನತೆಯನ್ನು ಆಕರ್ಷಿಸಲು, ಹೆಚ್ಚು ಸಂಖ್ಯೆಯಲ್ಲಿ ಮತದಾರ ಪಟ್ಟಿಯಲ್ಲಿ ಜನರನ್ನು ಸೇರಿಸಲು ಹಾಗೂ ಮತದಾರ ಪಟ್ಟಿಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿ ಅಂತಿಮ ಪಟ್ಟಿ ಸಿದ್ಧಗೊಳಿಸುವುದು ಚುನಾವಣಾ ಆಯೋಗದ ಉದ್ದೇಶ. ಈ ಕಾರ್ಯವನ್ನು ಹೆಚ್ಚು ಸಮರ್ಪಕ ಹಾಗೂ ಜನಪ್ರೀಯಗೊಳಿಸಲು “ಮತದಾರಪಟ್ಟಿ ಶುದ್ದೀಕರಣ’ ಹೆಸರಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ತಿಂಗಳಲ್ಲಿ ಅರ್ಜಿ ವಿಲೇವಾರಿ: ಮತಗಟ್ಟೆ ಅಧಿಕಾರಿಗಳು ಮನೆ-ಮನೆ ಭೇಟಿ ಕೊಟ್ಟು ಸಂಗ್ರಹಿಸಿದ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯ ಅರ್ಜಿ ನಮೂನೆ 6, ಮರಣ ಹೊಂದಿದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಅರ್ಜಿ ನಮೂನೆ 7 ನ್ನು ಒಂದು ತಿಂಗಳಲ್ಲಿ ವಿಲೇವಾರಿಗೊಳಿಸಲಾಗುತ್ತದೆ. ತಿದ್ದುಪಡಿ, ಬದಲಾವಣೆ, ಸ್ಥಳಾಂತರ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಅರ್ಜಿ ನಮೂನೆ 6ಎ, 7, 8, 8ಎಗಳನ್ನೂ ಸಹ ಇದೇ ಅವಧಿಯಲ್ಲಿ ವಿಲೇವಾರಿಗೊಳಿಸಲು ಆದ್ಯತೆ ಕೊಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ರಾಜಕೀಯ ಪಕ್ಷಗಳ ಸಭೆ: ಮತದಾರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಹಕಾರ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿರುವ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯುವಂತೆ ಎಲ್ಲ ರಾಜ್ಯ ಮುಖ್ಯಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಅದರಂತೆ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆ ಜು.3ರಂದು ರಾಜ್ಯ ಮುಖ್ಯಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

“ಮತದಾರ ಪಟ್ಟಿ ಶುದ್ಧೀಕರಣ’ ವಿಶೇಷ ಅಭಿಯಾನದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಚುನಾವಣಾ ನೋಂದಣಿ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ವಿಶೇಷವಾಗಿ ಯುವ ಜನತೆ ಈ ಅಭಿಯಾನದ ಮೂಲಕ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು’.
– ಕೆ.ಎನ್‌. ರಮೇಶ್‌, ಜಂಟಿ ಮುಖ್ಯ ಚುನಾವ‌ಣಾಧಿಕಾರಿ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next