Advertisement

ಹಿಂದೂ ಸಂಪತ್ತು ಮುಸ್ಲಿಮರಿಗೆ: ಪ್ರಧಾನಿ ಮೋದಿ ಹೇಳಿಕೆ ವಿವಾದ

12:44 AM Apr 23, 2024 | Team Udayavani |

ಹೊಸದಿಲ್ಲಿ: “ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ದೇಶದ ಹಿಂದೂಗಳ ಸಂಪತ್ತನ್ನು ಮುಸ್ಲಿಮರಿಗೆ ಹಸ್ತಾಂತರ ಮಾಡಲಿದೆ’ ಎಂದು ರಾಜಸ್ಥಾನದ ರ್‍ಯಾಲಿಯಲ್ಲಿ ರವಿವಾರ ಪ್ರಧಾನಿ ಮೋದಿಯವರು ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ವಿರುದ್ಧ ವಿಪಕ್ಷಗಳು ಸಿಡಿದೆದ್ದಿದ್ದು, ಕಾಂಗ್ರೆಸ್‌ನ ನಿಯೋಗವು ಚುನಾವಣ ಆಯೋಗಕ್ಕೆ ದೂರು ನೀಡಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಪ್ರಧಾನಿ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರು ಸತ್ಯವನ್ನೇ ಹೇಳಿದ್ದಾರೆ. ಜನರ ಭಾವನೆಯನ್ನೇ ಪ್ರತಿಧ್ವನಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದೆ.

ಪ್ರಧಾನಿ ಮೋದಿ ಅವರ ಇಂಥ ಪ್ರಚೋದನಕಾರಿ ಹೇಳಿಕೆ ಬಗ್ಗೆ ಚುನಾವಣ ಆಯೋಗ ಮೌನ ವಹಿಸಿರುವುದು ಅತ್ಯಂತ ಕ್ರೂರ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿಯವರ ಮಾತು ಮಾದರಿ ನೀತಿ ಸಂಹಿತೆ ಮಾತ್ರವಲ್ಲದೆ, ದ್ವೇಷ ಭಾಷಣದ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಉಲ್ಲಂಘನೆಯೂ ಆಗಿದೆ ಎಂದಿದ್ದಾರೆ.

ದೂರು ಸಲ್ಲಿಸಿ
ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ದೇಶದ ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿ ಚುನಾವಣ ಆಯೋಗಕ್ಕೆ ಪತ್ರ ಬರೆಯಬೇಕು ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಸಾಕೇತ್‌ ಗೋಖಲೆ ಒತ್ತಾಯಿಸಿದ್ದಾರೆ.

ಮೊದಲ ಹಂತದ ಮತದಾನ ಮುಕ್ತಾ ಯದ ಬಳಿಕ ಪ್ರಧಾನಿ ಮೋದಿಯವರಿಗೆ ನಿರಾಸೆಯಾಗಿದೆ ಎನ್ನುವುದು ಅವರ ಈ ಹೇಳಿಕೆಯಿಂದಲೇ ಸ್ಪಷ್ಟವಾಗಿದೆ ಎಂದು ಸಂಸದ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಹೀಗಾಗಿಯೇ ಅವರು ಕೀಳುಮಟ್ಟದ ಸುಳ್ಳುಗಳನ್ನು ಹೇಳುತ್ತಿದ್ದಾರೆ. ನಮ್ಮ ಪಕ್ಷದ ಕ್ರಾಂತಿಕಾರಿ ಪ್ರಣಾಳಿಕೆಯ ಪರವಾಗಿ ಹೆಚ್ಚಿನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರು ವಂತೆಯೇ ಮೋದಿ ಇಂಥ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

ಎಸ್‌ಫಿ ನಾಯಕ ಅಖೀಲೇಶ್‌ ಯಾದವ್‌ ಪ್ರತಿಕ್ರಿಯೆ ನೀಡಿ, “ಪ್ರಧಾನಿ ಮೋದಿ ಹೇಳುವ ಸುಳ್ಳುಗಳ ಬಗ್ಗೆ ಜಗತ್ತಿಗೇ ಗೊತ್ತು’ ಎಂದು ಹೇಳಿದ್ದಾರೆ.

ವಿಪಕ್ಷಗಳಿಗೆ ಆತಂಕ ಎಂದ ಬಿಜೆಪಿ
ಪ್ರಧಾನಿ ಮೋದಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ವಕ್ತಾರ ಗೌತಮ್‌ ಭಾಟಿಯಾ, “ಹಿಂದಿನ ಸಂದರ್ಭಗಳಲ್ಲಿ ವಿಪಕ್ಷಗಳು ಆಡಿದ್ದ ಮಾತುಗಳನ್ನೇ ಪ್ರಧಾನಿ ಪುನರ್‌ ಉಲ್ಲೇಖೀಸಿದ್ದಾರೆ. ಜತೆಗೆ ಜನರು ಯಾವ ರೀತಿಯ ಭಾವನೆ ಹೊಂದಿದ್ದಾರೆ ಎಂಬುದನ್ನು ಭಾಷಣದಲ್ಲಿ ಹೇಳಿದ್ದಾರೆ’ ಎಂದರು. 2006ರಲ್ಲಿ ಆಗಿನ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌, ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ಎಂದು ಹೇಳಿರಲಿಲ್ಲವೇ ಎಂದು ಭಾಟಿಯಾ ಪ್ರಶ್ನಿಸಿದ್ದಾರೆ. ಇದರ ಜತೆಗೆ 2006ರಲ್ಲಿ ಮನಮೋಹನ್‌ ಸಿಂಗ್‌ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಮಾತನಾಡಿದ್ದ “ಮುಸ್ಲಿಮರಿಗೆ ದೇಶದ ಸಂಪತ್ತಿನಲ್ಲಿ ಮೊದಲ ಆದ್ಯತೆ’ ಎಂಬ ಹೇಳಿಕೆಯ 22 ಸೆಕೆಂಡ್‌ಗಳ ವೀಡಿಯೋ ವನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದೆ.

ಅಲಿಗಢದಲ್ಲೂ ಪುನರುಚ್ಚಾರ
ದೇಶದ ಸಂಪತ್ತನ್ನು ಮರು ಮೌಲ್ಯಮಾಪನ ಮಾಡಿ ಪುನರ್‌ ಹಂಚಿಕೆ ಮಾಡಲು ಕಾಂಗ್ರೆಸ್‌ ಉದ್ದೇಶಿಸಿದೆ ಎಂದು ಪ್ರಧಾನಿ ಮೋದಿ ಮತ್ತೆ ಆರೋಪ ಮಾಡಿದ್ದಾರೆ. ವಿವಾದ ಭುಗಿಲೆದ್ದಿರುವ ನಡುವೆಯೇ ಮೋದಿಯವರು ಹೇಳಿಕೆಯನ್ನು ಸೋಮವಾರವೂ ಪುನರುಚ್ಚರಿಸಿದ್ದಾರೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಮಾತನಾಡಿದ ಅವರು, “ಅಲಿಗಢದ ಜನರು ವಂಶಪಾರಂಪರ್ಯ ಆಡಳಿತಕ್ಕೆ, ತುಷ್ಟೀಕರಣಕ್ಕೆ, ಭ್ರಷ್ಟಾಚಾರಕ್ಕೆ ಬೀಗ ಹಾಕಲು ಮುಂದಾಗಿದ್ದಾರೆ. ಈ ಎಲ್ಲದಕ್ಕೆ ಇಬ್ಬರು ರಾಜಕುಮಾರರಾಗಿರುವ ರಾಹುಲ್‌ ಗಾಂಧಿ, ಅಖೀಲೇಶ್‌ ಯಾದವ್‌ ನೆರವಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.

ಲಕ್ಷ ಸಹಿ ಸಂಗ್ರಹ: ಕಾಂಗ್ರೆಸ್‌ ಸಿದ್ಧತೆ
ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ಕಾಂಗ್ರೆಸ್‌ ಶೀಘ್ರದಲ್ಲೇ 1 ಲಕ್ಷ ಮಂದಿಯ ಸಹಿ ಸಂಗ್ರಹಿಸಿ ಬೃಹತ್‌ ಅಭಿಯಾನ ನಡೆಸಿ ಚುನಾವಣ ಆಯೋಗಕ್ಕೆ ದೂರು ನೀಡಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ಗೌರವ ತರದು
ಹಿಂದೂಗಳ ಮಂಗಳಸೂತ್ರವನ್ನು ತೆಗೆದು ಮುಸ್ಲಿಮರಿಗೆ ನೀಡುತ್ತಾರೆ ಎಂಬ ಮಾತು ಪ್ರಧಾನಿ ಸ್ಥಾನಕ್ಕೆ ಅಗೌರವ ತರುತ್ತದೆ. ದೇಶದ ಪ್ರಧಾನಿ ಯಾಗಿ ಎಲ್ಲರನ್ನೂ ಸಮಾನವಾಗಿ ನೋಡುವ ಕರ್ತವ್ಯ ಅವರದ್ದು. ಸಮಾನವಾಗಿ ಆಸ್ತಿ ಹಂಚಿಕೆ ಆಗುವುದು ಸಾಮಾಜಿಕ ನ್ಯಾಯ. ಕೆಲವೇ ಜನರ ಕೈಯಲ್ಲಿ ಅಧಿಕಾರ, ಸಂಪತ್ತು ಇದ್ದರೆ ಇದು ಆಗುವುದಿಲ್ಲ.
-ಸಿದ್ದರಾಮಯ್ಯ, ಸಿಎಂ

ಸೋಲುವ ಭಯದ ಮಾತು
ಕಾಂಗ್ರೆಸ್‌ ಗೆದ್ದರೆ ಮಂಗಳಸೂತ್ರ ಮುಸ್ಲಿಮರಿಗೆ ನೀಡುತ್ತದೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಮೋದಿಯವರಿಗೆ ಸೋಲುತ್ತೇನೆ ಎನ್ನುವ ಭಯ ಉಂಟಾಗಿದೆ. ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ
-ಡಿ.ಕೆ. ಶಿವಕುಮಾರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next