ಸುವರ್ಣ ವಿಧಾನಸೌಧ: ಮತದಾರರ ಮಾಹಿತಿ ಸೋರಿಕೆ ಪ್ರಕರಣ ಕುರಿತಂತೆ ಜೆಡಿಎಸ್ ಪರಿಷತ್‌ನಲ್ಲಿ ಬುಧವಾರ ನಿಲುವಳಿ ಮಂಡಿಸಿದ್ದು, ಗುರುವಾರ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ನಿಲುವಳಿ ಸೂಚನೆ ಮಂಡಿಸಿದ ಜೆಡಿಎಸ್‌ನ ಸೂರಜ್ ರೇವಣ್ಣ, ಚಿಲುಮೆ ಸಂಸ್ಥೆಯು ಮತದಾರರ ಜಾಗೃತಿ ಹೆಸರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲೂ ತೊಡಗಿಕೊಂಡಿತ್ತು. ಅದರ ಜತೆಗೆ ಮತದಾರರ ಆಧಾರ್ ಸಂಖ್ಯೆ, ವಿದ್ಯಾರ್ಹತೆ ಸೇರಿ ಇನ್ನಿತರ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮಾಡಿದೆ. ಈ ಪ್ರಕರಣದ ಕುರಿತಂತೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿದರು.
ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಈ ಹಿಂದೆ ಶಾಸಕರನ್ನು ಕಳ್ಳತನ ಮಾಡಲಾಗುತ್ತಿತ್ತು. ಇದೀಗ ಮತದಾರರ ಮಾಹಿತಿಯನ್ನೇ ಕಳ್ಳತನ ಮಾಡಲಾಗಿದೆ. ಇದು ಗಂಭೀರ ವಿಷಯ. ಸೂರಜ್ ರೇವಣ್ಣ ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಗುರುವಾರ ಉಳಿದ ವಿಷಯಗಳನ್ನು ಬದಿಗಿಟ್ಟು ಮತದಾರರ ಮಾಹಿತಿ ಸಂಗ್ರಹ ವಿಚಾರದ ಚರ್ಚೆಗೆ ಮುಂದಾಗಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ಸದಸ್ಯರು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸಭಾಪತಿಗಳು ಅನುಮತಿಸಿದರೆ ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದರು.
ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ನಿಲುವಳಿ ಸೂಚನೆಯಲ್ಲಿನ ವಿಷಯವನ್ನು ಗುರುವಾರ ನಿಯಮ 68ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು.