ಕಲಬುರಗಿ: ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜಯ್ ಭಾದೂ ಅವರು ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿ ವಿತರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಯುವ ವಿದ್ಯಾರ್ಥಿಗಳು, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳಿಗೆ ಚುನಾವಣಾ ಗುರುತಿನ ಚೀಟಿ ವಿತರಿಸಿ, ಕಡ್ಡಾಯ ಮಾತದಾನ ಮಾಡಬೇಕು ಮತು ನಿಮ್ಮ ನೆರೆ ಹೊರೆಯವರನ್ನು, ಗೆಳೆಯರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಪ್ರೇರೇಪಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತ ಚುನಾವಣಾ ಆಯೋಗದಿಂದ ಮತದಾನ ಜಾಗೃತಿ ಕುರಿತು ಸಿದ್ಧಪಡಿಸಲಾದ ಪ್ಯಾನ್ ಇಂಡಿಯಾ ವಿಡಿಯೋ ಪ್ರೋಮೋಸ್ “ಮೈ ಭಾರತ್ ಹೂಂ’’ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಿದ್ಧಪಡಿಸಲಾದ ವಿವಿಧ ವಿಡಿಯೋ ಪ್ರಮೊಳನ್ನು ಪ್ರಸ್ತತಪಡಿಸಲಾಯಿತು.
ಇದಲ್ಲದೆ ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜಯ್ ಭಾದೂ ಸೇರಿದಂತೆ ಗಣ್ಯರೆಲ್ಲರು ಇ.ವಿ.ಎಂ. ಮತ್ತು ವಿ.ವಿ.ಪ್ಯಾಟ್ ಬಳಕೆಯ ಜಾಗೃತಿ ಪೋಸ್ಟರ್ ಗಳನ್ನು ಸಹ ಬಿಡುಗಡೆಗೊಳಿಸಿದರು.
ರಾಜ್ಯದ ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್, ಜಂಟಿ ಮುಖ್ಯ ಚುನಾವಣಾಧಿಕಾರಿ ವಿ. ರಾಘವೇಂದ್ರ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್, ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಡಿ. ಬದೋಲೆ, ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ ಆರ್., ಎಸ್.ಪಿ. ಇಶಾ ಪಂತ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಜಿ.ಪಂ. ಉಪ ಕಾರ್ಯದರ್ಶಿ ಬಿ.ಎಸ್.ರಾಠೋಡ, ಸಹಾಯಕ ಕಾರ್ಯದರ್ಶಿ ಚೆನ್ನಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೇಗಾಂವ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಇನ್ನಿತರ ಅಧಿಕಾರಿಗಳು ಇದ್ದರು. ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್ ನಿರೂಪಿಸಿದರು.
ಬೈಕ್ ರಾಲಿಗೆ ಚಾಲನೆ: ಇದಕ್ಕೂ ಮುನ್ನ ಡಿ.ಸಿ. ಕಚೇರಿ ಆವರಣದಲ್ಲಿ ಮತದಾನ ಜಾಗೃತಿ ಕುರಿತು ವಿಶೇಷಚೇತನರಿಂದ ಹಮ್ಮಿಕೊಂಡಿದ್ದ ತ್ರಿಚಕ್ರ ಬೈಕ್ ರ್ಯಾಲಿಗೆ ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜಯ್ ಭಾದೂ ಹಸಿರು ನಿಶಾನೆ ತೋರಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೊಂದಾಯಿತ ಲೋಹಿಯಾ ಕಲಾ ತಂಡ ಮತ್ತು ಶ್ರೀ ಸಾಯಿ ಜನಜಾಗೃತಿ ಕಲಾ ಸಂಘದ ಕಲಾವಿದರು ಬೀದಿ ನಾಟಕ ಮೂಲಕ ಮತದಾನ ಪಾವಿತ್ರ್ಯತೆ, ಕಡ್ಡಾಯ ಮತದಾನ ಕುರಿತು ನಾಟಕ ಪ್ರದರ್ಶಿಸಿದರು.
ನಂತರ ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜಯ್ ಭಾದೂ ಅವರು ಇಲ್ಲಿನ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರದೇಶದ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿದರು.