Advertisement

ಕಾಂಗ್ರೆಸ್‌ನಿಂದ ವೋಟ್‌ಬ್ಯಾಂಕ್‌ ರಾಜಕೀಯ

08:24 AM Dec 09, 2017 | Team Udayavani |

ಶಿವಮೊಗ್ಗ: “ಆತಂಕವಾದ, ಭಯೋತ್ಪಾದನೆ ಚಟುವಟಿಕೆಯಲ್ಲಿ ನಿರತರಾಗಿರುವವರ ಮೇಲೆ ಮೃದು ಧೋರಣೆ ತೋರುತ್ತಿರುವ ಕಾಂಗ್ರೆಸ್‌, ಬಿಜೆಪಿಯನ್ನು ಮಾತ್ರ ತನ್ನ ಶತ್ರು ಎನ್ನುವ ರೀತಿ ನೋಡುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಗಂಭೀರ ಆರೋಪ ಮಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ದೇಶದಲ್ಲಿ ಬಿಜೆಪಿಯನ್ನು ಶತ್ರುವೆಂದು ಪರಿಗಣಿಸಿದೆ ವಿನಃ  ಯೋತ್ಪಾದನೆಯನ್ನಲ್ಲ. ಕೇವಲ ವೋಟ್‌ಬ್ಯಾಂಕ್‌ ರಾಜಕಾರಣದಲ್ಲೇ ಕಾಂಗ್ರೆಸ್‌ ನಿರತವಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ ನಮಗೆ ರಾಜಕೀಯ ಪ್ರತಿಸ್ಪರ್ಧಿ ನಿಜ. ಆದರೆ ನಾವು ಅವರನ್ನು ಲಷ್ಕರ್‌ ಎ- ತೋಯ್ಬಾ ಉಗ್ರಗಾಮಿ ಸಂಘಟನೆಯಂತೆ ನೋಡಲು
ಸಾಧ್ಯವೇ? ವೋಟ್‌ ಬ್ಯಾಂಕ್‌ ಉದ್ದೇಶದಿಂದ ಭಯೋತ್ಪಾದಕರು, ಸಮಾಜಘಾತುಕರ ವಿರುದ್ಧ ಕ್ರಮ ಕೈಗೊಳ್ಳದೆ ಮೃದು ಧೋರಣೆ ತಾಳುವುದು ಸರಿಯಲ್ಲ ಎಂದರು. ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯ 14 ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಇವರ ವಿರುದ್ಧ ಕನಿಷ್ಠ ಪಕ್ಷ ಸಿದ್ದರಾಮಯ್ಯ ಸರ್ಕಾರ ಕ್ರಮ ಕೈಗೊಳ್ಳದೆ ಇರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು. ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆ ಅಭೂತಪೂರ್ವ ಯಶಸ್ಸು ಕಾಣುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ್ನು ತಿರಸ್ಕರಿಸಲು ಜನ ಸಿದ್ಧರಾಗಿದ್ದಾರೆ. ಪರಿವರ್ತನಾ ಯಾತ್ರೆ ಮುಕ್ತಾಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಗೆಲ್ಲುವ ಕುದುರೆಗೆ ಟಿಕೆಟ್‌
ಬೀದರ: ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ವರಿಷ್ಠರಿಂದ ಒಂದು ಹಂತದ ಸರ್ವೇ ಕಾರ್ಯ ನಡೆದಿದೆ. ಇನ್ನೆರಡು ಸರ್ವೇ ಮುಗಿದ ಬಳಿಕ ಜನ ಬೆಂಬಲಿತ, ಗೆಲ್ಲುವ ಕುದುರೆಗಳಿಗೆ ಟಿಕೆಟ್‌ ನೀಡಲಾಗುವುದು. ಈಗಾಗಲೇ ಘೋಷಿತ ಹೆಸರುಗಳಲ್ಲಿ ವ್ಯತ್ಯಾಸವಾದರೂ ಬದಲಾವಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು. ನಗರದಲ್ಲಿ ಶುಕ್ರವಾರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಟಿಕೆಟ್‌ ಹಂಚಿಕೆಯಲ್ಲಿ ಯಡಿಯೂರಪ್ಪನವರ ತೀರ್ಮಾನವೇ ಅಂತಿಮವಲ್ಲ. ಮತದಾರರ ಇಚ್ಛೆಯಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಅಸಮಾಧಾನಗೊಂಡ ಪಕ್ಷದ ಮುಖಂಡರನ್ನು ಕರೆಸಿ ಮಾತನಾಡಿ, ಸಮಸ್ಯೆ ಬಗೆಹರಿಸುತ್ತಿದ್ದೇನೆ. ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ಕೊಡಲ್ಲ. ಮೊದಲು ಎಚ್ಚರಿಕೆ ನೀಡುತ್ತೇನೆ. ತಪ್ಪಿದ್ದರೆ ಪಕ್ಷದಿಂದ ಹೊರಗೆ
ಕಳುಹಿಸುತ್ತೇನೆ’ ಎಂದು ಖಾರವಾಗಿ ಹೇಳಿದರು. 

ಯಾರೇ ಆಗಲಿ ಅಸಾಂವಿಧಾನಿಕ ಪದ ಬಳಸಬಾರದು. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ನಮ್ಮ ಪಕ್ಷದವರಿಗೂ ಹಾಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅಸಾಂವಿಧಾನಿಕ ಪದ ಬಳಸಿರುವ ಬಗ್ಗೆ ತಮ್ಮ 
ಗಮನಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಉಡಾಫೆ ಮತ್ತು ನಕಾರಾತ್ಮಕ ಪದಗಳನ್ನು ಬಳಸುತ್ತಿದ್ದಾರೆ. ಕೀಳು ಭಾಷೆ ಬಳಕೆ ಬಗ್ಗೆ ಮತದಾರರು ಉತ್ತರ ನೀಡಲಿದ್ದಾರೆ.
 ●ಮುರಳೀಧರ ರಾವ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪ್ರಧಾನಿ ಮೋದಿ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್‌ ಮೇಲೆ ಕ್ರಮ ಕೈಗೊಂಡಂತೆ, ಪ್ರಧಾನಿ ವಿರುದ್ಧ ಹಗುರವಾಗಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಕಾಂಗ್ರೆಸ್‌ ಹೈಕಮಾಂಡ್‌ ಕಠಿಣ ಕ್ರಮ ಕೈಗೊಳ್ಳಲಿ.
 ●ಪ್ರಹ್ಲಾದ ಜೋಶಿ, ಸಂಸದ 

Advertisement

ಪಕ್ಷದಲ್ಲಿ ಯಾವುದೇ ಗೊಂದಲ, ಅಸಮಾಧಾನ ಯಾವುದೂ ಇಲ್ಲ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷ ಸದೃಢವಾಗಿದೆ. ಯಾವುದೇ ಕಾರಣಕ್ಕೂ ಮಾಜಿ ಸಚಿವ ಉಮೇಶ ಕತ್ತಿ ಪಕ್ಷ ಬಿಡಲ್ಲ. ನನ್ನೊಂದಿಗೆ ಅವರು ಸತತ ಸಂಪರ್ಕದಲ್ಲಿದ್ದಾರೆ.
 ●ಪ್ರಹ್ಲಾದ ಜೋಶಿ, ಸಂಸದ.

ಮಾಜಿ ಸಚಿವ ಉಮೇಶ ಕತ್ತಿ ಅವರು ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ, ಅವರು ಪಕ್ಷ ಬಿಡುವ ವಿಷಯ ಕುರಿತು ಯಾವುದೇ ಮಾಹಿತಿ ಇಲ್ಲ. ಗುರುವಾರ ಪುತ್ರನ ಆರತಕ್ಷತೆ ಕಾರ್ಯಕ್ರಮದಲ್ಲಿ ಇದ್ದುದರಿಂದ ಯಾವುದೇ ಮಾಹಿತಿ ಪಡೆಯಲು ಆಗಿಲ್ಲ. ಕತ್ತಿ ಅವರ ಹೇಳಿಕೆ ಕುರಿತಾಗಿ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. 
 ●ಜಗದೀಶ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷ ನಾಯಕ.

ಲಿಂಗಾಯತ ಪ್ರತ್ಯೇಕ ಧರ್ಮದ ಹೇಳಿಕೆಗೆ  ಸಂಬಂಧಿಸಿದಂತೆ ಉಮೇಶ ಕತ್ತಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಕತ್ತಿ ಅವರೇ ಮಾಧ್ಯಮಗಳಿಗೆ
ಸ್ಪಷ್ಟೀಕರಣ ಕೊಡುತ್ತೇನೆ ಎಂದಿದ್ದಾರೆ.
 ●ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next