Advertisement

ಇಂದು ಮತ ಚಲಾಯಿಸಿ ಗ್ರಾಮ ರಾಜ್ಯ ಬಲಪಡಿಸಿ

01:26 AM Dec 22, 2020 | mahesh |

ಬೆಂಗಳೂರು: ಸ್ಥಳೀಯ ಸಂಸತ್‌ ಎಂದೇ ಹೆಸರಾಗಿರುವ ರಾಜ್ಯ ಗ್ರಾಮ ಪಂಚಾಯತ್‌ಗಳ ಮೊದಲ ಹಂತದ ಚುನಾವಣೆಗೆ ಡಿ. 22ರ ಮಂಗಳವಾರ ಮತದಾನ ನಡೆಯಲಿದ್ದು, 1.17 ಲಕ್ಷ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.

Advertisement

ರಾಜ್ಯದ 30 ಜಿಲ್ಲೆಗಳ 117 ತಾಲೂಕುಗಳ 3,019 ಗ್ರಾ.ಪಂ.ಗಳ 43,238 ಸದಸ್ಯ ಸ್ಥಾನಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ 23,625 ಮತಗಟ್ಟೆಗಳಲ್ಲಿ 77.38 ಲಕ್ಷ ಪುರುಷರು, 76.45 ಲಕ್ಷ ಮಹಿಳೆಯರ ಸಹಿತ 1.53 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಮತದಾನ ಪ್ರಕ್ರಿಯೆಗೆ 1,41,750 ಮತಗಟ್ಟೆ ಸಿಬಂದಿಯನ್ನು ನಿಯೋಜಿಸಲಾಗಿದೆ.

ಅವಧಿ ಮುಗಿದ 5,728 ಗ್ರಾ.ಪಂ.ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಿಗದಿಪಡಿಸಿ ರಾಜ್ಯ ಚುನಾವಣ ಆಯೋಗ ನ. 30ಕ್ಕೆ ಅಧಿಸೂಚನೆ ಹೊರಡಿಸಿತ್ತು. ಮೊದಲ ಹಂತದ ಚುನಾವಣೆಗೆ ಡಿ. 22ಕ್ಕೆ ಮತದಾನ ನಡೆಯಲಿದೆ. ಇದಕ್ಕಾಗಿ 1,64,550 ನಾಮಪತ್ರಗಳು ಸ್ವೀಕೃತವಾಗಿದ್ದವು. 1,57,735 ನಾಮಪತ್ರಗಳು ಕ್ರಮಬದ್ಧವಾಗಿದ್ದವು. ನಾಮಪತ್ರ ಪರಿಶೀಲನೆ ಬಳಿಕ 40,352 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದು, 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗ 43,238 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಅದಕ್ಕಾಗಿ 1,17,383 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಗ್ರಾಮ ಸ್ವರಾಜ್ಯಕ್ಕಾಗಿ ಪಾಲ್ಗೊಳ್ಳಿ 
ಗ್ರಾಮಗಳ ಕೊರತೆಗಳನ್ನು ನೀಗಿಸುವುದಕ್ಕಾಗಿ ಇಂದು ವಿದ್ಯಾವಂತ‌ರು, ಪ್ರಜ್ಞಾವಂತರು, ಬುದ್ಧಿವಂತರಾದ ಯುವಜನರು ಗ್ರಾ.ಪಂ. ಚುನಾವಣೆಯ ಕಣದಲ್ಲಿದ್ದಾರೆ. ಹಳ್ಳಿಗಳು ಹೊಸ ರೂಪ ತಾಳುವಲ್ಲಿ ಯುವ ಸಮುದಾಯಕ್ಕೆ ಪ್ರತಿಯೊಬ್ಬರ ಮಾರ್ಗದರ್ಶನ ಅವಶ್ಯ. ಗ್ರಾಮದ ಅಭಿವೃದ್ಧಿಗೆ ಚುನಾಯಿತ ಪ್ರತಿನಿಧಿಯನ್ನು ಆರಿಸುವ ಹಕ್ಕು ನಮ್ಮ ಮುಂದಿದೆ. ಗ್ರಾಮ ಸ್ವರಾಜ್ಯವಾಗುವಲ್ಲಿ ಮತದಾರರು ಪ್ರಮುಖ ಪಾಲುದಾರರು ಎಂಬ ಪ್ರಜ್ಞೆ ಬೆಳೆಯಬೇಕು. ಅದು ಗ್ರಾಮ ಸ್ವರಾಜ್ಯದ ಚಿಂತನೆ ಸಾಕಾರಗೊಳಿಸುವಲ್ಲಿ ಪ್ರಮುಖ. ಹೀಗಾಗಿ ಆಧುನಿಕ ಭಾರತ ಕಲ್ಪನೆಯ ಜತೆಗೆ ನಮ್ಮ ಆಶೋತ್ತರ ಈಡೇರಿಸಿಕೊಳ್ಳಲು ಎಲ್ಲರೂ ಮತದಾನದಲ್ಲಿ ಭಾಗಿಯಾಗಬೇಕು ಎಂಬುದು ನಮ್ಮ ಆಶಯ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

ಪ್ರತೀ ಅರ್ಹ ಮತದಾರ ಕಡ್ಡಾಯವಾಗಿ ತನ್ನ ಹಕ್ಕು ಚಲಾಯಿಸಬೇಕು. ಅಮೂಲ್ಯ ಮತವನ್ನು ಮಾರಿಕೊಳ್ಳಬೇಡಿ. ಬೆದರಿಕೆಗಳಿಗೆ ಹೆದರಬಾರದು. ಎಲ್ಲರೂ ಕೋವಿಡ್‌-19 ಸುರಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನು ಆಯೋಗ ಮಾಡಿದೆ.
– ಡಾ| ಬಿ. ಬಸವರಾಜು, ರಾಜ್ಯ ಚುನಾವಣ ಆಯುಕ್ತ

Advertisement
Advertisement

Udayavani is now on Telegram. Click here to join our channel and stay updated with the latest news.

Next