Advertisement

ಮತ ಚಲಾಯಿಸಿ, ಸಂವಿಧಾನ ರಕ್ಷಿಸಿ: ರವಿ

02:32 PM Jan 20, 2018 | |

ಪುತ್ತೂರು: ವಿದ್ಯಾರ್ಥಿಗಳ ಸಹಿತ 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಬೇಕು. ದೇಶದ ಆಡಳಿತ ವ್ಯವಸ್ಥೆಯನ್ನು ರೂಪಿಸುವ ಪವಿತ್ರವಾದ ಮತದಾನದಲ್ಲಿ ಪಾಲ್ಗೊಂಡು ಸದೃಢ ಭಾರತದ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿಯ ನೋಡಲ್‌ ಅಧಿಕಾರಿ ಡಾ| ಎಂ.ಆರ್‌. ರವಿ ಹೇಳಿದರು.

Advertisement

ಅವರು ಶುಕ್ರವಾರ ಪುತ್ತೂರು ಪುರಭವನದಲ್ಲಿ ದ.ಕ. ಜಿಲ್ಲಾಡಳಿತ ಮತ್ತು ಜಿ. ಪಂ. ಸಹಯೋಗದಲ್ಲಿ ನಡೆದ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಹಿತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, 18 ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳು ಈ ಶತಮಾನದ ಪ್ರಮುಖ ಹಾಗೂ ಅದ್ಭುತ ಮತದಾರರು. ಸರಕಾರ ರಚನೆ ಮತ್ತು ದೇಶದ ಬೆಳವಣೆಗೆಯಲ್ಲಿ ಪಾಲ್ಗೊಳ್ಳುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ. ಇಂದು ಶಿಕ್ಷಿತರು, ನಗರ ಪ್ರದೇಶದಲ್ಲಿ ವಾಸಿಸುವವರೇ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಮತದಾನ ನಮ್ಮ ಹಕ್ಕು ಎಂದು ಕಿವಿಮಾತು ಹೇಳಿದರು.

ಸಂವಿಧಾನ ರಕ್ಷಿಸೋಣ
ನಾವು ಜನಪ್ರನಿಧಿಗಳನ್ನು, ಸರಕಾರವನ್ನು ದೂಷಿಸುತ್ತೇವೆ. ಸಮಾಜದಲ್ಲಿ ಲೋಪ ಇದೆ ಎನ್ನುತ್ತೇವೆ. ಆದರೆ ಸ್ಥಿರ ಸರಕಾರ
ನೀಡದ ವ್ಯವಸ್ಥೆಯನ್ನು ಸೃಷ್ಟಿಸಿದವರು ನಾವೇ ಅಲ್ಲವೇ? ಈ ಸಮಾಜ ವಿದ್ಯಾವಂತ ಸಮುದಾಯದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ದೇಶದ ಭವಿಷ್ಯವನ್ನೇ ಬರೆಯಬಲ್ಲ ಸಾಮರ್ಥ್ಯ ಯುವ ಪೀಳಿಗೆಗಿದೆ. ಅಮೂಲ್ಯವಾದ ಸುಭದ್ರ, ಸುರಕ್ಷಿತ ಸಂವಿಧಾನವನ್ನು ಧಕ್ಕೆಯಾಗದಂತೆ ಕಾಪಾಡಿಕೊಂಡು ಹೋಗಬೇಕು ಎಂದರು.

ಪುತ್ತೂರು ತಹಶೀಲ್ದಾರ್‌ ಅನಂತ ಶಂಕರ ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡುವಂತೆ ಕಾಲೇಜುಗಳಲ್ಲಿ ಅರ್ಜಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಗ್ರಾಮಲೆಕ್ಕಿಗರ ಮೂಲಕ ಸೇರಿಸುವ ವ್ಯವಸ್ಥೆ ಮಾಡಲಾಗಿದೆ. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಉಳಿದವರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಝೇವಿಯರ್‌ ಡಿ’ಸೋಜಾ, ಎಲ್ಲ ವಿದ್ಯಾರ್ಥಿಗಳೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಬೇಕು. ಮತದಾನ ಮಾಡುವುದು ಪ್ರಜಾ ತಂತ್ರ ವ್ಯವಸ್ಥೆಯಲ್ಲಿರುವ ಹಕ್ಕು ಎಂದವರು ತಿಳಿಸಿದರು.

Advertisement

ಪ್ರತಿಜ್ಞೆ
ಜಿಲ್ಲಾ ಪಂಚಾಯತ್‌ ಸಿಇಒ ಡಾ| ಎಂ.ಆರ್‌. ರವಿ ವಿದ್ಯಾರ್ಥಿಗಳಲ್ಲಿ 2018ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಮತದಾನ ಮಾಡುತ್ತೇವೆಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭ ತಾ.ಪಂ. ಕಾರ್ಯನಿರ್ವಣಾಧಿಕಾರಿ ಜಗದೀಶ್‌ ಎಸ್‌. ಉಪಸ್ಥಿತರಿದ್ದರು. ಪಿಡಿಒ ನವೀನ್‌ ಸ್ವಾಗತಿಸಿ, ಉಪತಹಶೀಲ್ದಾರ್‌ ಶ್ರೀಧರ್‌ ಕೋಡಿಜಾಲ್‌ ಅವರು ವಂದಿಸಿದರು.

ಮೊಬೈಲ್‌ ಆ್ಯಪ್‌
ಜ. 22ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ. ಚುನಾವಣಾ ಆಯೋಗದಿಂದ ಶೀಘ್ರವೇ ಮೊಬೈಲ್‌ ಆ್ಯಪ್‌ ಬಿಡುಗಡೆಯಾಗಲಿದೆ. ಇದು ಅತ್ಯಂತ ಸುಲಭದ ವಿಧಾನ. ಅದನ್ನು ಡೌನ್‌ ಲೋಡ್‌ ಮಾಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ತಾಲೂಕು ಕಚೇರಿಗೆ ಅಲೆದಾಡಬೇಕಿಲ್ಲ ಎಂದು ಡಾ| ಎಂ.ಆರ್‌. ರವಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next