Advertisement

ವಿತ್ತದ ಮೇಲೆ ಮತ ಚಿತ್ತ

06:15 AM Apr 30, 2018 | |

ಜಾಗತಿಕ ಹಣದುಬ್ಬರ, ತೈಲಬೆಲೆ, ಚಿನ್ನದ ಮೌಲ್ಯ ಏರಿಕೆ ಇಳಿಕೆ, ಯುದ್ದಗಳು, ಪ್ರಾಕೃತಿಕ ಅಸಮತೋಲನ, ಆರ್ಥಿಕ ನೀತಿ ಬದಲಾವಣೆ ಇಂತಹ ಸಮಯದಲ್ಲಿ ವಾಣಿಜ್ಯ ಕ್ಷೇತ್ರದ ಮೇಲಾಗುವ ಪರಿಣಾಮ ದೊಡ್ಡದು. ಆದರೆ ಚುನಾವಣೆ ಸಮಯದಲ್ಲಿ ವಿತ್ತವಲಯದ ಮೇಲಾಗುವ ಬದಲಾವಣೆಗಳನ್ನು ಗಮನಿಸಿದ್ದೀರಾ.? ರಾಷ್ಟ್ರ ಅಥವಾ ರಾಜ್ಯ ಚುನಾವಣೆಯು ಬಂಡವಾಳ ಹೂಡಿಕೆ, ಆಮದು-ರಫ್ತು  ವಿದೇಶಿ ವ್ಯವಹಾರದ ಮೇಲೆ ಯಾವ ಪರಿಣಾಮ ಬೀರುತ್ತದೆ? ಎಂಬುದು ನಿಮಗೆ ಗೊತ್ತೆ? ವಾಣಿಜ್ಯ ಕ್ಷೇತ್ರದಲ್ಲಿ ಆಗುವ ಬದಲಾವಣೆ ಏನು ಎಂಬುದರ ಮಾಹಿತಿ ಇಲ್ಲಿದೆ.

Advertisement

ವಿತ್ತ ಸಹಮತ
ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬ ಎಂಬ ಮಾತಿದೆ.  ಪ್ರಜಾಪ್ರತಿನಿಧಿಗೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಪ್ರಜೆಗಳು ಅನುಮತಿ ನೀಡುವ ಸಂದರ್ಭ ಅದು. ಪ್ರಜೆಗಳು ಹಾಗೂ ನಾಯಕರು, ಸಿದ್ದಾಂತಕ್ಕೆ ಬೆಲೆಕೊಟ್ಟು ಕೆಲಸ ಮಾಡುವ ಕಾಲವೊಂದಿತ್ತು. ಆದರೆ ಅದು ಬರಬರುತ್ತಾ ವ್ಯಾಪಾರೀಕರಣವಾಗಿ ಪರಿಣಮಿಸಿದೆ. ಉತ್ತಮ ವ್ಯಕ್ತಿತ್ವವುಳ್ಳವರನ್ನು ಆರಿಸುವ ಚುನಾವಣೆಗಳು ಈಗ ನಡೆಯುತ್ತಿಲ್ಲ. ಪ್ರಭಾವಿ ಅಭ್ಯರ್ಥಿಗಳು ಅಧಿಕಾರ ಲಾಲಸೆಯಿಂದ ಮತಗಳಿಸಲು ನಡೆಸುವ ಆರ್ಥಿಕ ದಂಧೆಯೆಂದೇ ಚುನಾವಣೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಜೊತೆಗೆ, ಚುನಾವಣೆ ಸಂದರ್ಭದಲ್ಲಿ ದೇಶದ ಭ್ರಷ್ಟಾಚಾರ ಪ್ರಮಾಣವು ಗಣನೀಯವಾಗಿ ಏರಿಕೆಯಾಗುತ್ತದೆ ಇದರಿಂದ ವಿತ್ತವಲಯದಲ್ಲಿ ಅಭದ್ರತೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ.

ರಾಷ್ಟ್ರೀಯ ಚುನಾವಣೆಗಳು ಆರ್ಥಿಕ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರುತ್ತವೆ. ರಾಜ್ಯ ಚುನಾವಣೆಗಳ ಪ್ರಭಾವ ಸ್ವಲ್ಪ ಕಡಿಮೆ. ಇದರಿಂದ ಶೇರು ಮಾರುಕಟ್ಟೆಯಲ್ಲಿ ಚಂಚಲತೆ ಸೃಷ್ಟಿಯಾಗುತ್ತದೆ. ವಿವಿಧ ಕಂಪನಿಗಳ ಶೇರುಗಳ ಏರಿಳಿತ, ಐಟಿ, ಅಬಕಾರಿ, ವಿದೇಶಿ ಬಂಡವಾಳ, ಆಮದು-ರಫ್ತು, ವಿದೇಶಿ ವ್ಯಾಪಾರ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ. 

ಶೇರು ಮಾರುಕಟ್ಟೆ
1984ರ ನಂತರ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಷ್ಟ್ರೀಯ ಪ್ರಾದೇಶಿಕ ಹೀಗೆ ಹಲವು ಪಕ್ಷಗಳು ಸ್ಪರ್ಧೆಯಲ್ಲಿವೆ. 2004 ನಿಂದ 2014 ವರೆಗೆ ನಿರಂತರ ಅಧಿಕಾರ ನಡೆಸಿದ ಕಾಂಗ್ರೆಸ್‌ 2014ರಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿತು.ಈ ವೇಳೆಯಲ್ಲಿ ಮಾರುಕಟ್ಟೆಯಲ್ಲಿ ಚಂಚಲತೆ ತೀವ್ರವಾಗಿತ್ತು. ಮತದಾನದ ದಿನ ಶುರುವಾಗುವ ಮುಂಚಿತವಾಗಿ ಒಂದು ತಿಂಗಳು ಮೊದಲೇ ನಿಪ್ಟಿಯಲ್ಲಿ(ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಫಿಪ್ಟಿ) ಸೂಚ್ಯಾಂಕವು ವೇಗ ಪಡೆಯುತ್ತದೆ. ಹೊಸ ಲೋಕಸಭೆ ಪ್ರಾರಂಭದ ನೂರು ದಿನಗಳು ಅಥವಾ ಸುಮಾರು 5.5 ತಿಂಗಳು ಮಾರುಕಟ್ಟೆಯ ವ್ಯಾಪಾರ ವಹಿವಾಟುಗಳು ಕಡಿಮೆ ಭಾವನಾತ್ಮಕ ನಡವಳಿಕೆ ಹೊಂದಿರುತ್ತದೆ ಇದರ ಬಳಿಕ ಸಹಜ ಸ್ಥಿತಿಗೆ ತಲುಪುತ್ತದೆ.ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಶೇರು ವ್ಯವಹಾರ ಸೂಕ್ತವಲ್ಲ ಎನ್ನುತ್ತಾರೆ ತಜ್ಞರು.

ವಿದೇಶಿ ಬಂಡವಾಳ
ಜಾಗತೀಕರಣವನ್ನು ಒಪ್ಪಿಕೊಂಡ ಬಳಿಕ ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಾಗಿದೆ. ಆದರೂ ಇದರ ಮೇಲೆ ದೇಶಿಯ ನೀತಿನಿಯಮಗಳು ಕೆಲಸ ಮಾಡುತ್ತವೆ. ಚುನಾವಣೆ ವೇಳೆ ಯಾವುದೋ ಒಂದು ವಿದೇಶಿ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಬೇಕು ಅಂದುಕೊಂಡಿದ್ದರೂ ಸ್ವಲ್ಪಕಾಲದ ನಂತರ ಮಾಡೋಣವೆಂದು ಹಿಂಜರಿಯುತ್ತವೆ. ಅಥವಾ ಚುನಾವಣೆಗೆ ಮುಂಚಿತವಾಗಿಯೇ ತಮ್ಮ ಹೂಡಿಕೆ ವ್ಯವಹಾರವನ್ನು ಮುಗಿಸಿ ಬಿಡುತ್ತದೆ. ಕಾರಣ ಇಷ್ಟೇ, ಚುನಾವಣೆ ಬಳಿಕ ಯಾವ ರಾಷ್ಟ್ರೀಯ ಪಕ್ಷ ಅಧಿಕಾರ ಪಡೆಯುತ್ತದೆ. ಅದರಿಂದ ನಮ್ಮ ಬಂಡವಾಳ ಹೂಡಿಕೆಗೆ ಅನುಕೂಲವೇ, ಪ್ರತಿಕೂಲವೇ ಎಂಬುದನ್ನು ಊಹಿಸುತ್ತವೆ. ಇನ್ನೂ ಕೆಲವು ವೇಳೆ ಚುನಾವಣೆ ಬಳಿಕ ಅಧಿಕಾರ ಪಡೆದ ಪಕ್ಷಗಳು ವಿದೇಶಿ ಬಂಡವಾಳ ಹೂಡಲು ಆಹ್ವಾನ ನೀಡುತ್ತವೆ.  ಪ್ರಧಾನಿ ಮೋದಿ 2014 ರ ಹೊಸ ಸರ್ಕಾರ ಬಂದ ಬಳಿಕ ನಿರಂತರ ವಿದೇಶ ಪರ್ಯಟನೆ ಮಾಡಿದ್ದೂ ಇದೇ ಕಾರಣಕ್ಕೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳಿಂದ “ಇನ್ವೆಸ್ಟ್‌ ಕರ್ನಾಟಕ’ ಎಂದು ವಿದೇಶಿ ಕಂಪನಿಗಳಿಗೆ ಮಣೆ ಹಾಕಿದ್ದೂ ಸಹ ಇದೇ ಉದ್ದೇಶಕ್ಕೆ.

Advertisement

ಕಂಪನಿಗಳು
ಸಾರ್ವತ್ರಿಕ ಚುನಾವಣೆ ವೇಳೆ ಪಕ್ಷ ಬೆಂಬಲಿತ ಕಂಪನಿಗಳು ಪಕ್ಷಗಳಿಗೆ ಆರ್ಥಿಕ ಸಹಾಯಹಸ್ತ ನೀಡುವುದುಂಟು. ಆದರೆ ಇದು ಪ್ರತ್ಯಕ್ಷವಾಗಿ ಮತದಾರನಿಗೆ ತಿಳಿಯದು. ರಾಷ್ಟ್ರೀಯ ಪಕ್ಷವೊಂದು ತನ್ನ ಅಧಿಕಾರ ಬಳಕೆಯಿಂದ ಒಂದು ಕಂಪನಿ ವ್ಯವಹಾರಗಳಿಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ ಎನ್ನುವುದಾದರೆ, ಅಂತಹ ಕಂಪನಿ ತಾನಾಗಿಯೇ ಚುನಾವಣೆ ವೇಳೆ ಪಕ್ಷದ ಬೆಂಬಲವಾಗಿ ನಿಲ್ಲುತ್ತದೆ. ಅಧಿಕಾರ ಪಡೆದ ಪಕ್ಷ ದೇಶದ ಅಭಿವೃದ್ಧಿ ಜೊತೆಗೆ ಅಂತಹ ಕಂಪನಿಗೆ ಅನುಕೂಲವಾದ ಆರ್ಥಿಕ ನಿಯಮಗಳನ್ನು ರೂಪಿಸುತ್ತದೆ ಎಂಬುದು ಕಂಪನಿ ನಂಬಿಕೆ. ಜೊತೆಗೆ ಮತ್ತೂಂದು ಪಕ್ಷ ಆಡಳಿತ ಚುಕ್ಕಾಣಿ ಹಿಡಿದರೆ ತಮ್ಮ ವ್ಯಾಪಾರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂಬ ಭಯವೂ ಕೂಡ ಕಾಡುತ್ತಿರುತ್ತದೆ. 

ಆರ್ಥಿಕ ನಿಯಮ
ಪ್ರತೀ ಚುನಾವಣೆಯೂ ಆಯಾ ದೇಶದ ಆರ್ಥಿಕತೆಯನ್ನು ವೃದ್ಧಿಸುತ್ತವೆ ಅಥವಾ ಸಂಕಷ್ಟಕ್ಕೆ ದೂಡುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಅಂದರೆ, ಹೊಸ ಸರ್ಕಾರ ರಚನೆಯ ಬಳಿಕ ಯಾವುದೇ ನಾಯಕ ನೇರವಾಗಿ ಕಣ್ಣು ಹಾಯಿಸುವುದು ಆರ್ಥಿಕ ನಿಯಮಗಳ ಬಗ್ಗೆ. ಹೀಗಾಗಿಯೇ 2004ರ ಸಾರ್ವತ್ರಿಕ ಚುನಾವಣೆ ಬಳಿಕ ಅರ್ಥಿಕ ತಜ್ಞರನ್ನೇ ಪ್ರಧಾನಿಯನ್ನಾಗಿ ಮಾಡಲಾಯಿತು. ದೇಶದ ಆರ್ಥಿಕತೆಯನ್ನು ಸುಧಾರಿಸುವುದು ಸಾಮಾನ್ಯ ಕೆಲಸವಲ್ಲ. ದೇಶದ ನಾಗರಿಕನ ತಲಾದಾಯವನ್ನು ಕುಗ್ಗಿಸುವಂತೆ ಮಾಡುವ ನಿಯಮಗಳು ಪಕ್ಷಗಳಿಗೆ ತೊಂದರೆಯಾಗುತ್ತವೆ. ಇದನ್ನು ಜಿಎಸ್‌ಟಿ ಮತ್ತು ಅಪನಗದೀಕರಣ ಪ್ರಭಾವದಿಂದ ಅರಿಯಬಹುದು.

ವ್ಯಾಪಾರ ಸಂಬಂಧ
ಚುನಾವಣೆಗಳು ವಿದೇಶಿ ವ್ಯಾಪಾರ ಸಂಬಂಧವನ್ನು ಹೆಚ್ಚಿಸುತ್ತವೆ ಹಾಗೂ ಸಂಬಂಧ ಕಡಿದುಹೊಗುವಂತೆಯೂ ಮಾಡುತ್ತವೆ.  ಒಂದು ಪಕ್ಷ ಅಧಿಕಾರ ಹಿಡಿದ ಬಳಿಕ ಐದು ವರ್ಷದಲ್ಲಿ ಯಾವ ಯಾವ ದೇಶದೊಂದಿಗೆ ವ್ಯಾಪಾರ ಸಂಬಂಧ ಹೊಂದಿತ್ತದೆಯೋ ಅದು ಮರು ಚುನಾವಣೆ ಬಳಿಕ ಗಣನೀಯವಾಗಿ ಏರಬಹುದು ಅಥವಾ ಇಳಿಯಬಹುದು. ಮರುಚುನಾವಣೆ ಬಳಿಕ ಅಧಿಕಾರ ಹಿಡಿದ ಪಕ್ಷ‌ ಯಾವ ರಾಷ್ಟ್ರದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದೆ ಎಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿಗೆ ಯೂರೋಪಿಯನ್‌ ಒಕ್ಕೂಟ ರಾಷ್ಟ್ರಗಳ ಬಗ್ಗೆ ಒಲವು ಹೆಚ್ಚು. ಇಲ್ಲಿ ಹೆಚ್ಚು ವ್ಯಾಪಾರ ಸಂಬಂಧವನ್ನು ಹೊಂದಲು ಇಚ್ಚಿಸುತ್ತದೆ. ಹೀಗಾಗಿಯೇ ಈ ಹಿಂದೆ ಕಾಂಗ್ರೆಸ್‌ ಚೀನಾದೊಂದಿಗೆ ಹೊಂದಿದ್ದ ಸಂಬಂಧವನ್ನು ಬಿಜೆಪಿ ಗಣನೀಯವಾಗಿ ಕಡಿಮೆ ಮಾಡಿಕೊಂಡಿದೆ.

ಆಮದು ರಫ್ತು
ಚುನಾವಣೆ ಸಂದರ್ಭದಲ್ಲಿ ದೇಶದ ಆಮದು-ರಪು¤ ವ್ಯವಹಾರಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ಚುನಾವಣೆ ಬಳಿಕ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ನಿರ್ಧಾರದ ಮೇಲೆ ಆಮದು ರಫ್ತಿನ ಬದಲಾವಣೆಗಳಾಗುತ್ತವೆ. ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪಾಕಿಸ್ತಾನ ಹಣ್ಣುಮತ್ತು ತರಕಾರಿಯನ್ನು ಆಮದು ಮಾಡಿಕೊಳ್ಳುವುದನ್ನು ಗುಣಮಟ್ಟದ ನೆಪವೊಡ್ಡಿ ನಿಲ್ಲಿಸಿತ್ತು. ಮತ್ತೂಂದಡೆ, ಇದೇ ಬಿಜೆಪಿ ಸರ್ಕಾರ ಚೀನಾ ದೇಶದ ಕೆಲವು ವಸ್ತುಗಳನ್ನು ಗುಣಮಟ್ಟ ಮತ್ತು ಬಾಳಿಕೆ ನೆಪವೊಡ್ಡಿ ಆಮದಾಗುವುದನ್ನು ತಡೆದಿದೆ. ಇದು ದೇಶದ ಆಂತರಿಕ ಸಂಬಂಧವನ್ನು ಸೂಚಿಸುತ್ತದೆ. 

ಚುನಾವಣಾ ನೀತಿ ಸಂಹಿತೆ
ಚುನಾವಣಾ ನೀತಿ ಸಂಹಿತೆಯ ಕಾಲಾವಧಿ ಕಡಿಮೆಯಾದರೂ, ಅದರ ಪ್ರಭಾವ ದೀರ್ಘ‌ವಾದದ್ದು, ಇದು ಆರ್ಥಿಕತೆಯ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಯೋಜನೆಗಳು ಜಾರಿಯಾಗುವುದಿಲ್ಲ. ಸರ್ಕಾರದ ಆಡಳಿತ ಯಂತ್ರದ ಚಲನೆ ಮಂದಗತಿಯಾಗುತ್ತದೆ. ಜನರು ಸುಲಭವಾಗಿ ಸರ್ಕಾರಿ ಕೆಲಸಕಾರ್ಯಗಳನ್ನು ನಡೆಸಲಾಗುವುದಿಲ್ಲ. ಸುಲಭವಾಗಿ ದೊಡ್ಡಮಟ್ಟದ ಹಣಕಾಸನ್ನು ತೆಗೆದುಕೊಂಡು ಹೋಗಲು ಸಾಧ್ಯವೇ ಇಲ್ಲ. ಪ್ರತಿಯೊಂದೂ ವಿಚಾರಣೆಗೊಳಪಡುತ್ತದೆ. ಹೀಗಾಗಿ ಸಾರ್ವಜನಿಕ ವಲಯದ ಆರ್ಥಿಕ ವ್ಯವಹಾರಗಳಿಗೆ ತೊಡಕಾಗುತ್ತದೆ.

ಹಣದ ಹೊಳೆ 
ಚುನಾವಣಾ ಸಂದರ್ಭದಲ್ಲಿ ಹಣದಹೊಳೆ ಹರಿಯುತ್ತದೆ ಎಂದು ಹೇಳುವುದುಂಟು ಆದರೆ ಅದು ಹೇಗೆ ಎಂಬ ವಿವರವನ್ನು ಮಾತ್ರ ಯಾರೂ ನೀಡುವುದಿಲ್ಲ. ಇದರ ಬಗ್ಗೆ ಒಂದು ಚಿಕ್ಕ ಲೆಕ್ಕಾಚಾರ ಮಾಡೋಣ ಭಾರತದಲ್ಲಿ ಒಟ್ಟು 29 ಗಣರಾಜ್ಯಗಳಿವೆ. ಇದು ಏಳು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯಾಗಿದ್ದು, 709 ಜಿಲ್ಲೆಗಳಾಗಿ ವಿಂಗಡನೆಗೊಂಡಿದೆ ಅದರಲ್ಲಿ ಮತ್ತೆ ಸುಮಾರು 5400 ತಹಶೀಲ್‌/ತಾಲೂಕು/ ಬ್ಲಾಕ್‌ಗಳಾಗಿ ವಿಂಗಡನೆಯಾಗಿವೆ. ಕೊನೆಯದಾಗಿ ಈ ತಾಲೂಕುಗಳು ಆರು ಲಕ್ಷ ಗ್ರಾಮಗಳಾಗಿ ವಿಂಗಡನೆಗೊಂಡಿವೆ. 

ಇದರಲ್ಲಿ 10 ಹಳ್ಳಿಗೆ ಒಂದು ಎಂಬಂತೆ ನಿರ್ಧರಿಸಿದರೂ ಒಂದು ಪ್ರಭಾವಿ ರಾಜಕೀಯ ಪಕ್ಷ ಸುಮಾರು ಒಂದು ಲಕ್ಷ ಪಕ್ಷದ ಕಚೇರಿಗಳನ್ನು ತೆರೆಯಬೇಕಾಗುತ್ತದೆ. ಅದರ ನಿರ್ವಹಣೆ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಅಭ್ಯರ್ಥಿಯ ಹೊಣೆಯಾಗುತ್ತದೆ. ದೇಶದಲ್ಲಿ ಒಂದೇ ರಾಜಕೀಯ ಪಕ್ಷ ವಿಲ್ಲದ ಕಾರಣ ರಾಷ್ಟ್ರೀಯ, ಸ್ಥಳೀಯ ಪಕ್ಷಗಳ ಕಚೇರಿಗಳೂ ಇರುತ್ತವೆ.ರಾಷ್ಟ್ರ, ರಾಜ್ಯದಲ್ಲಿ ಎಂಎಲ್‌ಎ, ಎಂಪಿ ಸೀಟ್‌ ಆಕಾಂಕ್ಷಿ$ಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪಕ್ಷಕ್ಕೆ ನೀಡುವ ಮತ್ತು ಪಡೆಯುವ ಫ‌ಂಡ್‌, ಚುನಾವಣಾ ಪ್ರಚಾರಕ್ಕೆ ಬಳಸುವ ವಾಹನ ವ್ಯವಸ್ಥೆ, ಬೆಂಬಲಿಗರ ಕ್ಷೇಮ, ನೀತಿ ಸಂಹಿತೆಗೆ ಸಿಲುಕದಂತೆ ಬೆಂಬಲಿಗರ ಮೂಲಕ ಮತದಾರರಿಗೆ ತಲುಪಿಸುವ ಉಡುಗೊರೆ, ಆಹಾರ, ಮದ್ಯ, ಹಣ, ಇತರೆ ಸೌಕರ್ಯಗಳು ಸೇರಿದಂತೆ ಆಗುವ ಖರ್ಚು ಸಾವಿರಾರು ಕೋಟಿಯನ್ನು ಮುಟ್ಟುತ್ತದೆ.

ಎನ್‌ಡಿಟಿವಿ ನಡೆಸಿದ ಸರ್ವೆ ಪ್ರಕಾರ 2014ರ ಲೋಕಸಭಾ ಚುನಾವಣೆಗೆ ಆದ ಒಟ್ಟು ಖರ್ಚು 30 ಸಾವಿರ ಕೋಟಿ. ಇದನ್ನು ರಾಜ್ಯ ವಿಧಾನಸಭಾ ಚುನಾವಣೆಗೆ ಭಾಗಿಸಿ ನೋ,  ಎಷ್ಟು ಕೋಟಿಯಾಬಹುದು?ಹೀಗಾಗಿಯೇ ಆರ್ಥಿಕತಜ್ಞರು ಚುನಾವಣೆ ಸಂದರ್ಭದಲ್ಲಿ ದೇಶದ ಭ್ರಷ್ಟಾಚಾರದ ತೀವ್ರತೆ ಹೆಚ್ಚು ಎಂದು ಹೇಳುವುದು.

ಕರ್ನಾಟಕ ಚುನಾವಣೆ
ಕರ್ನಾಟಕದ ವಿಧಾನಸಭಾ ಚುನಾವಣೆ ಆರ್ಥಿಕ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಬೀರದೇ ಇದ್ದರೂ ಚುನಾವಣೆ ಬಳಿಕ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಮುಖ್ಯವಾಗಿದೆ. ವಿಶ್ಲೇಷಕರ ದೃಷ್ಟಿಯಿಂದ 2019ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕರ್ನಾಟಕ ಚುನಾವಣೆ ಬಿಜೆಪಿ, ಕಾಂಗ್ರೆಸ್‌ ಎರಡಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೆಚ್ಚು ವಿದೇಶಿ ಬಂಡವಾಳ ಹೊಂದಿರುವ, ಉತ್ತಮ ಸಾರಿಗೆ, ದೊಡ್ಡ ಐಟಿ ವಲಯವಿರುವ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಲೋಕಸಭೆ ಚುನಾವಣೆ ಅನುಕೂಲ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಸ್ತಿತ್ವ ಗಳಿಕೆ, ಅತಂತ್ರವಾದರೆ ಪ್ರಾದೇಶಿಕ ಪಕ್ಷಗಳಿಗೆ ಅನುಕೂಲ ಎನ್ನುತ್ತಾರೆ ತಜ್ಞರು.

– ಎನ್‌.ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next